ಸಾರಾಂಶ
ಕನ್ನಡಪ್ರಭ ವಾರ್ತೆ ಕೊಲ್ಹಾರ
ಕಾಡನ್ನು ಕಡಿದು ನಾಶ ಮಾಡುತ್ತಿರುವುದರಿಂದ ಕಾಡು ಪ್ರಾಣಿಗಳು ನಾಡಿಗೆ ಬಂದು, ನಾವೆಲ್ಲ ಕಾಡಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಶು ಪಕ್ಷಿಗಳು, ಜನಜಾನುವಾರುಗಳು ಉಳಿಯಬೇಕಾದರೆ ಸಸ್ಯಕಾಶಿಯನ್ನ ಬೆಳೆಸಬೇಕಾಗಿದೆ. ಹೀಗಾಗಿ ಸರ್ಕಾರ ಅರಣ್ಯೀಕರಣವನ್ನು ಕೈಗೊಂಡಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದಲ್ಲಿ ಬುಧವಾರ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ಕ್ಯಾಟ್ ಯೋಜನೆ ಅಡಿಯಲ್ಲಿ 14 ಸಾವಿರ ಸಸಿಗಳನ್ನು ಅರಣ್ಯ ಇಲಾಖೆಯವರು ನೆಡುತ್ತಿದ್ದಾರೆ. ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಪಟ್ಟಣ ಮುಳುಗಡೆಯಾದ ನಂತರ ಜನರಿಗೆ ತಿರುಗಾಡಲು ರಸ್ತೆ ಇರಲಿಲ್ಲ, ಪಾದಚಾರಿಗಳಿಗೆ ರಸ್ತೆ ಇರಲಿಲ್ಲ , ಒಳಚರಂಡಿ , ಕುಡಿಯುವ ನೀರಿನ ಸಮಸ್ಯೆ ಇತ್ತು ಅವುಗಳನ್ನ ಇಂದು ಹಂತ ಹಂತವಾಗಿ ಬಗೆಹರಿಸಲಾಗಿದೆ. ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸರ್ಕಾರದಿಂದ ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ ಎಂಟು ಪೌರಕಾರ್ಮಿಕರಿಗೆ ಮನೆ ಕಟ್ಟಿಕೊಳ್ಳಲು ಆದೇಶ ಪತ್ರವನ್ನು ನೀಡಿದ್ದೇನೆ ಎಂದರು.
ಕೃಷಿ ಮಾರುಕಟ್ಟೆ ಇಲಾಖೆಯಿಂದ ಕೊಲ್ಹಾರದಲ್ಲಿ ಎಪಿಎಂಸಿ ನಿರ್ಮಿಸಲು ₹ 5 ಕೋಟಿ ವಿಶೇಷ ಅನುದಾನವನ್ನು ನೀಡಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಕೊಲ್ಹಾರದಲ್ಲಿ ಮುಸ್ಲಿಂ ಸಮಾಜದವರು ಅರ್ಧದಷ್ಟು ಇರುವುದರಿಂದ ಅವರ ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಮೌಲಾನ ಅಜಾದ್ ಶಾಲೆ ಮಂಜೂರು ಮಾಡಲಾಗಿದೆ. ಹಳೆಯ ಪಟ್ಟಣ ಪಂಚಾಯಿತಿ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಿ ಕೊಡುವ ಭರವಸೆ ನೀಡಿದರು.ಸಾನಿಧ್ಯವಹಿಸಿದ್ದ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ಮಾತನಾಡಿ, ಆಲಮಟ್ಟಿ ಅಣೆಕಟ್ಟಿನ ಎತ್ತರದಿಂದ ಮುಳುಗಡೆ ಹೊಂದುವ ಜಮೀನುಗಳಿಗೆ ನೀರಾವರಿಗೆ ಎಕರೆಗೆ ₹ 40 ಲಕ್ಷ, ಒಣ ಬೇಸಾಯ ಜಮೀನಿಗೆ ₹ 30 ಲಕ್ಷ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಘೋಷಿಸಿದ್ದಾರೆ. ಅವರಿಗೆ ಎಲ್ಲ ರೈತರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಈ ಪೂರ್ವದಲ್ಲಿ ಮುಳುಗಡೆಯಾದ ಜಮೀನುಗಳಿಗೆ ಕಡಿಮೆ ಪರಿಹಾರ ನೀಡಲಾಗಿತ್ತು. ಇನ್ನಷ್ಟು ಪರಿಹಾರ ನೀಡಲು ಮುಖ್ಯಮಂತ್ರಿಗಳ ಜೊತೆ ಸಚಿವರು ಮಾತನಾಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.ಪಪಂ ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರಾಜಮಾ ನದಾಫ್, ಸಂತೋಷ ಗಣಾಚಾರಿ, ಮುಖಂಡರಾದ ಎಸ್.ಬಿ.ಪತಂಗಿ, ಬಿ.ಯು.ಗಿಡ್ಡಪ್ಪಗೋಳ, ಆರ್.ಬಿ.ಪಕಾಲಿ, ಕೆ.ಎಸ್.ದೇಸಾಯಿ, ತಾನಾಜಿ ನಾಗರಾಳ, ಯಮನೂರಿ ಮಾಕಾಳಿ, ಪಪಂ ಸದಸ್ಯರಾದ ಶ್ರೀಶೈಲ ಮುಳವಾಡ, ಬನಪ್ಪ ಬಾಲಗೊಂಡ, ತೌಸಿಫ್ ಗಿರಗಾಂವಿ, ಎಂ.ಆರ್.ಕಲಾದಗಿ, ಬಾಬು ಭಜಂತ್ರಿ, ಅಪ್ಪಾಸಿ ಮಟ್ಯಾಳ, ಶ್ರೀಶೈಲ ಅಥಣಿ, ಮಲ್ಲು ಹೆರಕಲ್, ತಹಸೀಲ್ದಾರ್ ಸಂತೋಷ ಮ್ಯಾಗೇರಿ, ಪಪಂ ಮುಖ್ಯಾಧಿಕಾರಿ ವೀರೇಶ ಹಟ್ಟಿ, ತಾಪಂ ಇ.ಒ ಸುನೀಲ ಮದ್ದಿನ, ಸಿಪಿಐ ಅಶೋಕ ಚವ್ಹಾನ, ಪಿಎಸ್ಐ ಎಂ.ಬಿ.ಬಿರಾದಾರ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.