ಅರಣ್ಯೀಕರಣ ಮಾಡಬೇಕೆ ಹೊರತು ನಾಶವಲ್ಲ

| Published : Sep 10 2024, 01:38 AM IST

ಸಾರಾಂಶ

ಅರಣ್ಯೀಕರಣ ಮಾಡಬೇಕೆ ಹೊರತು ನಾಶವಲ್ಲ. ಜತೆಗೆ ಪರಿಸರದ ಉಳಿವಿಗೆ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಬೇಕು. 2003ರಲ್ಲಿ ನಾವು ಪಟ್ಟಾಧಿಕಾರಿಗಳಾಗಿ ಬಂದಾಗ ಕಪ್ಪತಗುಡ್ಡ ದುಸ್ಥಿತಿಯಲ್ಲಿತ್ತು.

ಧಾರವಾಡ:

ಕಪ್ಪತಗುಡ್ಡ ಏಳು ಕೋಟಿ ಕನ್ನಡಿಗರಿಗೆ ಸೇರಿದ್ದು, ಇದು ಕನ್ನಡಿಗರ ಆಸ್ತಿ, ಅಲ್ಲಿಯ ‘ಒಂದೊಂದು ಗಿಡ ಮರವು ಜೇನಿನ ಕೊಡ’ ಅದಕ್ಕಾಗಿ ಬರೀ ಕಪ್ಪತಗುಡ್ಡ ಮಾತ್ರವಲ್ಲ ಒಟ್ಟಾರೆ ಗಿಡ-ಮರ ಕಡಿಯಬಾರದು. ಪ್ರಕೃತಿಯ ಆರಾಧನೆ ಪರಮಾತ್ಮನ ಆರಾಧನೆ ಎಂದು ಗದಗದ ಶಿವಕುಮಾರ ಸ್ವಾಮೀಜಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಪಶ್ಚಿಮ ಘಟ್ಟ ಉಳಿಸಿ ಅಭಿಯಾನ, ಪರಿಸರಕ್ಕಾಗಿ ನಾವು ಆಶ್ರಯದಲ್ಲಿ ಆಯೋಜಿಸಿದ್ದ ‘ಸಹ್ಯಾದ್ರಿ-’ಒಂದು ಮೆಲುಕು ಚಿಂತನ-ಮಂಥನದಲ್ಲಿ ಕಪ್ಪತಗುಡ್ಡ ಅರಣ್ಯ ಸಂರಕ್ಷಣೆ ಕುರಿತು ಅವರು ಮಾತನಾಡಿದರು.

ಅರಣ್ಯೀಕರಣ ಮಾಡಬೇಕೆ ಹೊರತು ನಾಶವಲ್ಲ. ಜತೆಗೆ ಪರಿಸರದ ಉಳಿವಿಗೆ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಬೇಕು. 2003ರಲ್ಲಿ ನಾವು ಪಟ್ಟಾಧಿಕಾರಿಗಳಾಗಿ ಬಂದಾಗ ಕಪ್ಪತಗುಡ್ಡ ದುಸ್ಥಿತಿಯಲ್ಲಿತ್ತು. ಈ ಕಪ್ಪತಗುಡ್ಡವನ್ನು ಶತಾಯಗತಾಯ ಉಳಿಸಿಕೊಳ್ಳಬೇಕೆಂಬ ಬಯಕೆ ನಮ್ಮದಾಗಿತ್ತು. ಕಪ್ಪತಗುಡ್ಡ 80 ಸಾವಿರ ಎಕರೆ ಇದ್ದು, ಮುಂಡರಗಿ, ಗದಗ ಮತ್ತು ಶಿರಹಟ್ಟಿ ತಾಲೂಕಿನ ತುಂಬ ಹಬ್ಬಿಕೊಂಡಿದೆ. ಎಪ್ಪತಗುಡ್ಡ ನೋಡುವುದಕ್ಕಿಂತ ಕಪ್ಪತಗುಡ್ಡ ನೋಡ ಎನ್ನುವ ಮಾತಿದೆ. ಅದು ಅಕ್ಷರಶಃ ಸತ್ಯ ಎಂದರು.

ಕಪ್ಪತಗುಡ್ಡ ಸಂಪೂರ್ಣವಾಗಿ ಏಳ್ಗೆಯಾಗಬೇಕಿದೆ. ಅಲ್ಲಿ ಎಲ್ಲ ತರಹದ ಔಷಧೀಯ ಸಸ್ಯಗಳಿದ್ದು, ಅಲ್ಲಿ ಮಳೆಯಾದರೆ ಉತ್ತರ ಕರ್ನಾಟಕದ ಹಲವು ಭಾಗಗಳು ಉಳಿಯುತ್ತವೆ. ಕಪ್ಪತಗುಡ್ಡದ ಜೊತೆ ಎಲ್ಲ ಬೆಟ್ಟಗಳನ್ನು ಉಳಿಸಬೇಕು ಎಂದ ಶಿವಕುಮಾರ ಸ್ವಾಮೀಜಿ ಪ್ರತಿಪಾದಿಸಿದರು.

ಡಾ. ಧನವಂತ ಹಾಜವಗೋಳ ಸ್ವಾಗತಿಸಿದರು. ಶಂಕರ ಕುಂಬಿ ನಿರ್ವಹಿಸಿದರು. ಬಸವಪ್ರಭು ಹೊಸಕೇರಿ ಇದ್ದರು. ನಂತರ ಗಾಡ್ಗೀಳ ವರದಿ, ಹವಾಮಾನ ಸಂಕಷ್ಟದ ಹಿನ್ನೆಲೆಯಲ್ಲಿ ಬದಲಾಗುತ್ತಿರುವ ಮಲೆನಾಡು ಬದುಕು ಹಾಗೂ ಸಮತೋಲಿತ ಅಭಿವೃದ್ಧಿ ಕುರಿತು ತಜ್ಞರು ಮಾತನಾಡಿದರು. ತದನಂತರ ನಡೆದ ಸಮಾರೋಪ ನುಡಿಗಳನ್ನು ಡಾ.ಸಂಜೀವ ಕುಲಕರ್ಣಿ ಹೇಳಿದರು. ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಕಳೆದ ಎರಡು ದಿನಗಳ ಕಾಲ ವಿದ್ಯಾವರ್ಧಕ ಸಂಘದಲ್ಲಿ ನಡೆದ ಎರಡು ದಿನಗಳ ಅರಣ್ಯ ಮತ್ತು ಅಭಿವೃದ್ಧಿ ಸಮಾವೇಶದಲ್ಲಿ ಗಾಡ್ಗೀಳ್ ವರದಿ ಕನ್ನಡದಲ್ಲಿ ಅನುವಾದವಾಗಿ ಸಾರ್ವಜನಿಕವಾಗಿ ಬಿಡುಗಡೆಗೊಂಡು ಪ್ರತಿ ಗ್ರಾಮ ಪಂಚಾಯಿತಿಯನ್ನೂ ತಲುಪಬೇಕು. ಸಾರ್ವಜನಿಕವಾಗಿ ಅದು ಚರ್ಚೆಯಾಗಲಿ. ಪ್ರತಿ ಗ್ರಾಮ‌ ಪಂಚಾಯಿತಿಯಲ್ಲೂ ಮತ್ತೊಮ್ಮೆ ಜೀವ ವೈವಿಧ್ಯ ದಾಖಲಾತಿ ಆಗಲಿ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಗಣಿಗಾರಿಕೆ, ರಸ್ತೆ ಅಗಲೀಕರಣವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ಮೂರು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.