ಸಾರಾಂಶ
ಶಿಗ್ಗಾವಿ ತಾಲೂಕಿನ ತಡಸ ಗ್ರಾಮದಲ್ಲಿ ಸುಮಾರು ೧೩೦ಕ್ಕೂ ಹೆಚ್ಚು ವರ್ಷಗಳ ನಂತರ ಪ್ರಥಮ ಬಾರಿಗೆ ಜೋಡಿ ಶ್ರೀ ಗ್ರಾಮ ದೇವಿಯ ಜಾತ್ರೆ ನಡೆಯುತ್ತಿದೆ. ಜೋಡಿ ಗ್ರಾಮ ದೇವಿಯರು ಇರುವುದು ವಿರಳವಾಗಿದ್ದು, ಇದಕ್ಕೆ ಐತಿಹಾಸಿಕ ಮತ್ತು ಧಾರ್ಮಿಕ ಹಿನ್ನೆಲೆ ಇದೆ.
ಬಸವರಾಜ ಹಿರೇಮಠ
ಕನ್ನಡಪ್ರಭ ವಾರ್ತೆ ಶಿಗ್ಗಾವಿತಾಲೂಕಿನ ತಡಸ ಗ್ರಾಮದಲ್ಲಿ ಸುಮಾರು ೧೩೦ಕ್ಕೂ ಹೆಚ್ಚು ವರ್ಷಗಳ ನಂತರ ಪ್ರಥಮ ಬಾರಿಗೆ ಜೋಡಿ ಶ್ರೀ ಗ್ರಾಮ ದೇವಿಯ ಜಾತ್ರೆ ನಡೆಯುತ್ತಿದೆ. ಜೋಡಿ ಗ್ರಾಮ ದೇವಿಯರು ಇರುವುದು ವಿರಳವಾಗಿದ್ದು, ಇದಕ್ಕೆ ಐತಿಹಾಸಿಕ ಮತ್ತು ಧಾರ್ಮಿಕ ಹಿನ್ನೆಲೆ ಇದೆ.
ಶತಮಾನಗಳಿಗಿಂತಲೂ ಮುಂಚೆ ಗ್ರಾಮವು ಒಂದೇ ಗ್ರಾಮ ದೇವಿಯನ್ನು ಹೊಂದಿತ್ತು. ಆ ಸಮಯದಲ್ಲಿ ಗ್ರಾಮದಿಂದ ನಾಲ್ಕು ಕಿಲೋಮೀಟರ್ ಅಂತರದಲ್ಲಿ ಯಲ್ಲಾಪುರವೆಂಬ ಸಣ್ಣ ಗ್ರಾಮವಿತ್ತು. ಆ ಗ್ರಾಮದಲ್ಲಿಯೂ ಗ್ರಾಮದೇವತೆ ಇದ್ದಳು ನಂತರದ ದಿನಗಳಲ್ಲಿ ಯಲ್ಲಾಪುರ (ಈಗ ಅದನ್ನು ಹಳೆ ಯಲ್ಲಾಪುರ) ಎನ್ನುತ್ತಾರೆ. ಗ್ರಾಮದಲ್ಲಿ ಮಾರಕ ರೋಗಗಳಾದ ಪ್ಲೇಗ್ ಮತ್ತು ಕಾಲರಾದಂತ ಅನೇಕ ರೋಗಗಳು ಹರಡಿ ಗ್ರಾಮಸ್ಥರು ತೊಂದರೆಗಿಡಾಗಿದ್ದರು. ಆ ಸಮಯದಲ್ಲಿ ಗ್ರಾಮಸ್ಥರು ಗ್ರಾಮ ದೇವಿಯ ಸಮೇತ ತಡಸ ಗ್ರಾಮಕ್ಕೆ ವಲಸೆ ಬಂದರು. ಅಂದಿನಿಂದ ತಡಸ ಗ್ರಾಮಸ್ಥರು ಜೋಡಿ ಗ್ರಾಮ ದೇವಿಯನ್ನು ಹೊಂದಿ ಪೂಜಾ ಕಾರ್ಯಗಳನ್ನು ನೆರವೇರಿಸುತ್ತಾ ಬಂದಿರುತ್ತಾರೆ.ಒಂದು ದಶಕದ ಈಚೆಗೆ ಗ್ರಾಮದಲ್ಲಿ ಗ್ರಾಮಸ್ಥರು ಜಾತ್ರೆ ಮಾಡಬೇಕೆಂಬ ತೀರ್ಮಾನಿಸಿದ್ದು ಗ್ರಾಮದ ತುಂಬೆಲ್ಲ ವಿದ್ಯುತ್ ದ್ವೀಪಗಳಿಂದ ಅಲಂಕಾರ ಮಾಡಿದ್ದು, ಭವ್ಯವಾದ ದೇವಿಯ ಮಂಟಪ ಹಾಗೂ ವಿಶಾಲವಾದ ಕಾರ್ಯಕ್ರಮ ವೇದಿಕೆ ಸುತ್ತಮುತ್ತಲಿನ ಜನರನ್ನು ಆಕರ್ಷಿಸುತ್ತಿದೆ.
ಕಾರ್ಯಕ್ರಮದ ವಿವರ: ಏಪ್ರಿಲ್ ೯ರ ಮಧ್ಯಾಹ್ನ ೨ ಗಂಟೆಯಿಂದ ಜೋಡಿ ಗ್ರಾಮ ದೇವಿಯರ ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯಗಳೊಂದಿಗೆ ಜರುಗಲಿದೆ. ಏಪ್ರಿಲ್ ೧೦ರಂದು ಧಾರ್ಮಿಕ ಪಠಣ, ಗ್ರಾಮದ ಮಕ್ಕಳಿಂದ ಲಲಿತಾ ಸಹಸ್ರನಾಮ ಹಾಗೂ ಮನೋರಂಜನಾ ಕಾರ್ಯಕ್ರಮ ಮತ್ತು ವಿಷ್ಣು ಸಹಸ್ರನಾಮ, ಏಪ್ರಿಲ್ ೧೧ರಂದು ಚಿಣ್ಣರ ಚಿಲಿಪಿಲಿ, ಗ್ರಾಮದ ಮಕ್ಕಳಿಂದ ಮನೋರಂಜನೆ, ಎಪ್ರಿಲ್ ೧೨ ಜನಪದ ಹಬ್ಬ, ಬಸವರಾಜ್ ಗುಬ್ಬಿ ಕಲ್ಲೇಶ್ವರ ಜಾನಪದ ತಂಡ ಮುಗುಳಿ ಇವರಿಂದ ನಡೆಯಲಿದೆ. ಏಪ್ರಿಲ್ ೧೩ರಂದು ನಾಟ್ಯ ಕಾರಂಜಿ, ಶರಣು ಬಡ್ಡಿ, ಮೋನಿಕಾ ಸಂಗಮೇಶ್ ಪರಗಿ ಸ್ಥಳೀಯ ಪ್ರತಿಭೆಗಳಿಂದ ಭರತನಾಟ್ಯ ಪ್ರದರ್ಶನಗಳು ಜರುಗಲಿವೆ.ಏಪ್ರಿಲ್ ೧೪ರಂದು ಸಂಗೀತ ಲಹರಿ ಪ್ರಭು ಬೆಟ್ಟದೂರ ನೇತೃತ್ವದ ಆನಂದ್ ಮೆಲೋಡಿಸ್ ಇವರಿಂದ, ಏಪ್ರಿಲ್ ೧೫ ಚೈತ್ರ ಸಂಜೆ, ಕರ್ನಾಟಕ ಪ್ರಖ್ಯಾತ ವಾಗ್ಮಿಗಳಾದ ಸುಧಾ ಬರುಗೂರು ಇವರಿಂದ, ಏಪ್ರಿಲ್ ೧೬ರಂದು ಸರಿಗಮಪ ಸಂಭ್ರಮ ಕಲರ್ಸ್ ಕನ್ನಡ ಕೋಗಿಲೆ ಖ್ಯಾತಿಯ ಮಹನ್ಯ ಪಾಟಿಲ್ ಹಾಗೂ ಜಿ ಟಿವಿ ಸರಿಗಮಪದ ರನ್ನರ್ ಆಫ್ ಆದ ರಮೇಶ್ ಲಮಾಣಿ ಇವರಿಂದ ಕಾರ್ಯಕ್ರಮಗಳು ಜರುಗಲಿವೆ.