ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕು ಕೃಷಿಕ ಸಮಾಜಕ್ಕೆ ೧೪ ವರ್ಷಗಳ ಬಳಿಕ ಕಾರ್ಯಕಾರಿ ಸಮಿತಿಗೆ ಚುನಾವಣೆ ಮುಹೂರ್ತ ನಿಗದಿಯಾಗಿದ್ದು, ಚುನಾವಣೆಗೆ ಕೃಷಿ ಇಲಾಖೆ ಸಿದ್ಧತೆ ಮಾಡಿಕೊಳ್ಳಲು ಶುರು ಮಾಡಿದೆ.ಕಳೆದ ೨೦೧೦ರಲ್ಲಿ ಕೃಷಿಕ ಸಮಾಜದ ಚುನಾವಣೆ ನಡೆದಿತ್ತು. ಚುನಾವಣೆ ಅವಧಿ ಮುಗಿಯುವ ಸಮಯದಲ್ಲಿ ಸಮಾಜದ ಶುಲ್ಕದ ವಿಚಾರ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದಾದ ಬಳಿಕ ೨೦೧೦ ರಲ್ಲಿದ್ದ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯೇ ೧೪ ವರ್ಷಗಳ ಕಾಲ ನಿರಂತರ ಆಡಳಿತ ನಡೆಸಿಕೊಂಡು ಬಂದಿದೆ. ಈಗ ಕೃಷಿಕ ಸಮಾಜದ ೧೫ ಮಂದಿ ಕಾರ್ಯಕಾರಿ ಸಮಿತಿಗೆ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಚುನಾವಣೆ ರಂಗೇರುವುದು ಬಹುತೇಕ ಖಚಿತವಾಗಿದೆ. ಕಳೆದ ೧೪ ವರ್ಷಗಳಿಂದ ಕೃಷಿಕ ಸಮಾಜದ ಅಧ್ಯಕ್ಷರಾಗಿ ಕೆ.ಸಿ.ಮಧು ಅಧಿಕಾರ ನಡೆಸಿದ್ದಾರೆ. ಕೃಷಿಕ ಸಮಾಜದ ಚುನಾವಣೆ ಯಾವಾಗ ಎಂದು ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಗಳಲ್ಲಿ ಪ್ರಶ್ನೆ ಏಳುತ್ತಿತ್ತು.
ನ್ಯಾಯಾಲಯದ ತೀರ್ಪು ಹೊರ ಬಿದ್ದ ಬಳಿಕ ಕೃಷಿ ಇಲಾಖೆ ತಾಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಗೆ ಚುನಾವಣೆ ಬರುವ ತಿಂಗಳ ಡಿ.೧೫ ರಂದು ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಕಳೆದ ೨೦೧೦ರಲ್ಲಿ ಕೃಷಿಕ ಸಮಾಜದ ಚುನಾವಣೆ ನಡೆದಿದ್ದು, ಈಗ ೧೪ ವರ್ಷಗಳ ಬಳಿಕ ಚುನಾವಣೆ ಘೋಷಣೆಯಾಗಿರುವ ಕಾರಣ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಸ್ಪರ್ಧೆ ಮಾಡುವ ಕಾರಣ ಈ ಬಾರಿಯ ಕೃಷಿಕ ಸಮಾಜದ ಚುನಾವಣೆ ಮಹತ್ವ ಬರಲಿದೆ.ಸಹಾಯಕ ಕೃಷಿ ನಿರ್ದೇಶಕ ಶಶಿಧರ್ ಕನ್ನಡಪ್ರಭದೊಂದಿಗೆ ಮಾತನಾಡಿ ,೨೦೧೦ರಿಂದ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆದಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ನ್ಯಾಯಾಲಯ ಆದೇಶದ ಬಳಿಕ ಕೃಷಿಕ ಸಮಾಜದ ಚುನಾವಣೆ ಡಿ.೧೫ ರಂದು ಘೋಷಣೆ ಮಾಡಲಾಗಿದ್ದು,೧೫ ಮಂದಿ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಸಬೇಕಿದೆ ಎಂದರು. ಈಗಾಗಲೇ ಕೃಷಿಕ ಸಮಾಜದ ಅಜೀವ ಸದಸ್ಯರಲ್ಲಿ ೪೪೧ ಮಂದಿ ಸದಸ್ಯರು ಇದ್ದಾರೆ . ಚುನಾವಣೆ ನಡೆಸಲು ಕೃಷಿ ಇಲಾಖೆ ಎಲ್ಲಾ ತಯಾರಿ ನಡೆಸಿದೆ ಎಂದರು.ಕೃಷಿಕ ಸಮಾಜದ ಚುನಾವಣೆ:
ತಾಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಚುನಾವಣೆ ಡಿ.೧೫ ಕ್ಕೆ ನಿಗದಿಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಶಶಿಧರ್ ತಿಳಿಸಿದ್ದಾರೆ. ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಸೂಚನಾ ಫಲಕದಲ್ಲಿ ತಾಲೂಕು ಕೃಷಿಕ ಸಮಾಜದ ಅಜೀವ ಸದಸ್ಯರ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ತಾತ್ಕಾಲಿಕ ಪಟ್ಟಿಯನ್ನು ಗಮನಿಸಿ ,ತಿದ್ದುಪಡಿ ಇದ್ದಲ್ಲಿ ಕೂಡಲೇ ಅಧಿಕಾರಿಗಳ ಗಮನಕ್ಕೆ ತರಲು ಪ್ರಕಟಣೆಯಲ್ಲಿ ಕೋರಿದ್ದಾರೆ. ನ.೩೦ ರಿಂದಲೇ ನಾಮಪತ್ರ ವಿತರಸಲಾಗುತ್ತಿದೆ. ನಾಮಪತ್ರ ಸಲ್ಲಿಸಲು ಡಿ.೬ ಕೊನೆ ದಿನ.ಡಿ.೯ ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನ ಎಂದಿದ್ದಾರೆ. ೧೫ ರಂದು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಚುನಾವಣೆ ನಡೆಯಲಿದ್ದು,ಮತದಾನದ ಬಳಿಕ ಫಲಿತಾಂಶ ಘೋಷಣೆ ಆಗಲಿದೆ ಎಂದಿದ್ದಾರೆ. ಹೆಚ್ಚಿನ ವಿವರಗಳಿಗೆ ಗುಂಡ್ಲುಪೇಟೆ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಮೊಬೈಲ್ ೮೨೭೭೯ ೩೦೭೭೪ ಸಂಪರ್ಕಿಸುವಂತೆ ಕೋರಿದ್ದಾರೆ.