ಸಾರಾಂಶ
--
- ಕೊಪ್ಪದ ಮನೆಗೆ ಊಟಕ್ಕೆ ಬಂದ ನಕ್ಸಲರು- ಕೂಂಬಿಂಗ್ ವೇಳೆ 3 ಬಂದೂಕುಗಳು ವಶ- ಯುಎಪಿಎ ಅಡಿ ಕೇಸು, ತಪಾಸಣೆ ತೀವ್ರ- ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಕಡೇಗುಂದಿ ಗ್ರಾಮದಲ್ಲಿ ನಕ್ಸಲರು ಪ್ರತ್ಯಕ್ಷ
- ಸುಬ್ಬೇಗೌಡ ಎಂಬುವರ ಮನೆಯಲ್ಲಿ ಅಡುಗೆ ತಯಾರಿಸಿ, ಊಟ ಮಾಡಿದ ತಂಡ
- ದೂರು ದಾಖಲು. ನಕ್ಸಲರಿಗಾಗಿ ತೀವ್ರ ಶೋಧ. ಈ ವೇಳೆ 3 ಬಂದೂಕು, ಗುಂಡು ಪತ್ತೆ
- 2008ರ ಎನ್‌ಕೌಂಟರ್ ಬಳಿಕ ಕೇರಳದತ್ತ ತೆರಳಿದ್ದ ನಕ್ಸಲರು ರಾಜ್ಯದಲ್ಲಿ ಮತ್ತೆ ಪತ್ತೆ
---ಕನ್ನಡಪ್ರಭವಾರ್ತೆ ಚಿಕ್ಕಮಗಳೂರು
ಮಲೆನಾಡಿನಲ್ಲಿ ಹದಿನಾರು ವರ್ಷಗಳ ಬಳಿಕ ಮತ್ತೆ ನಕ್ಸಲರ ಹೆಜ್ಜೆಗುರುತು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕೊಪ್ಪ ತಾಲೂಕಿನ ಕಡೇಗುಂದಿ ಗ್ರಾಮದ ಅರಣ್ಯ ವ್ಯಾಪ್ತಿಯ ಒಂಟಿ ಮನೆಗೆ ನಕ್ಸಲೀಯರು ಬಂದು ಹೋಗಿದ್ದು ದೃಢಪಟ್ಟಿದ್ದು, ಕೂಂಬಿಂಗ್ ಕಾರ್ಯಾಚರಣೆ ವೇಳೆ ಈ ಪ್ರದೇಶದಲ್ಲಿ ಮೂರು ಬಂದೂಕು ಹಾಗೂ ಮದ್ದುಗುಂಡುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.ಕಡೇಗುಂದಿ ನಕ್ಸಲ್ ಚಟುವಟಿಕೆಗೆ ಸಂಬಂಧಿಸಿ ಜಯಪುರ ಪೊಲೀಸ್ ಠಾಣೆಯಲ್ಲಿ ಮುಂಡಗಾರು ಲತಾ, ಜಯಣ್ಣ ಸೇರಿ ಇತರರ ಮೇಲೆ ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ) ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಕೊಪ್ಪ ಉಪ ವಿಭಾಗ ಡಿವೈಎಸ್ಪಿ ಅವರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಕೇರಳ ಕಡೆ ಹೋಗಿದ್ದ ನಕ್ಸಲರು:ಚಿಕ್ಕಮಗಳೂರಿನ ಮಾವಿನ ಹೊಲದಲ್ಲಿ 2008ರ ನವೆಂಬರ್ 18ರಂದು ನಕ್ಸಲರಾದ ಮನೋಹರ್, ನವೀನ್ ಹಾಗೂ ಅಭಿಷೇಕ್ ಪೊಲೀಸರ ಎನ್‌ಕೌಂಟರ್ ಬಳಿಕ ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿದ್ದ ನಕ್ಸಲೀಯರು ಕೇರಳದತ್ತ ತೆರಳಿದ್ದರು. ನಂತರ ಹಲವು ಮಂದಿ ನಕ್ಸಲ್ ಬೆಂಬಲಿಗರು ಮುಖ್ಯವಾಹಿನಿಗೆ ಬಂದಿದ್ದರು. ಹಾಗಾಗಿ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಸಂಪೂರ್ಣವಾಗಿ ನಿಂತೇ ಹೋಗಿದೆ ಎಂಬ ತೀರ್ಮಾನಕ್ಕೆ ಪೊಲೀಸ್ ಇಲಾಖೆ ಬಂದಿತ್ತು. ಆದರೂ ಕರಾವಳಿ ಮತ್ತು ಮಲೆನಾಡಿನ 17 ಕಡೆ ನಕ್ಸಲ್ ನಿಗ್ರಹ ಪಡೆ ಕೇಂದ್ರಗಳನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ಈ ಮಧ್ಯೆ ಆಗಾಗ್ಗೆ ಈ ಭಾಗದಲ್ಲಿ ನಕ್ಸಲರು ಓಡಾಡುತ್ತಿರುವ ಸುದ್ದಿ ಹರಿದಾಡಿದ್ದರೂ ಅದ್ಯಾವುದೂ ಖಚಿತಪಟ್ಟಿರಲಿಲ್ಲ.
ಆದರೆ ಹದಿನಾರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮತ್ತೆ ಮಲೆನಾಡು ಭಾಗದಲ್ಲಿ ನಕ್ಸಲರ ಚಲನವಲನ ದೃಢಪಟ್ಟಿದೆ. ಕೊಪ್ಪ ತಾಲೂಕಿನ ಕಡೇಗುಂದಿ ಗ್ರಾಮದ ಅರಣ್ಯ ವ್ಯಾಪ್ತಿಯ ಸುಬ್ಬೇಗೌಡ ಎಂಬುವರ ಒಂಟಿ ಮನೆಯಲ್ಲಿ ಮುಂಡಗಾರು ಲತಾ, ಜಯಣ್ಣ ಹಾಗೂ ಇತರರು ಅಡುಗೆ ಸಿದ್ಧಪಡಿಸಿ ಊಟ ಮಾಡಿಕೊಂಡು ಹೋಗಿರುವುದು ಖಚಿತವಾಗಿದೆ. ಈ ಸಂಬಂಧ ನಕ್ಸಲ್ ನಿಗ್ರಹ ಪಡೆ ಅಧಿಕಾರಿಯೊಬ್ಬರು ನೀಡಿದ ದೂರಿನನ್ವಯ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ದಿಢೀರ್ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಇದೇ ಪ್ರದೇಶದಲ್ಲಿ ನಕ್ಸಲೀಯರಿಗೆ ಸೇರಿದೆ ಎನ್ನಲಾದ ಮೂರು ಎಸ್‌ಬಿಎಂಎಲ್ ಬಂದೂಕುಗಳು ಹಾಗೂ ಮದ್ದು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.ಕೂಂಬಿಂಗ್ ಚುರುಕು:
ಈ ನಡುವೆ ಶೃಂಗೇರಿ ಹಾಗೂ ಕೊಪ್ಪ ತಾಲೂಕುಗಳಲ್ಲಿ ನಕ್ಸಲ್ ನಿಗ್ರಹ ಪಡೆ ಹಾಗೂ ಸ್ಥಳೀಯ ಪೊಲೀಸರು ಹುಡುಕಾಟ ಕಾರ್ಯಾಚರಣೆ ಶುರು ಮಾಡಿದ್ದಾರೆ. ಶೃಂಗೇರಿ ತಾಲೂಕಿನ ಮುಂಡಗಾರು, ಬುಕಡಿಬೈಲು, ಸುಂಕದಮಕ್ಕಿ, ಎಡೆದಳ್ಳಿ, ತನಿಕೋಡು ಸುತ್ತಮುತ್ತ ಮಂಗಳವಾರ ಬೆಳಗಿನ ಜಾವದಿಂದಲೇ ಕೂಂಬಿಂಗ್ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ಶೃಂಗೇರಿ- ಜಯಪುರ ರಸ್ತೆಯಲ್ಲಿರುವ ಗಡಿಕಲ್ ಬಳಿ ನಾಕಾಬಂದಿ ವ್ಯವಸ್ಥೆ ಮಾಡಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಕೊಪ್ಪ ತಾಲೂಕಿನ ಎಡಗುಂದ, ಜಯಪುರ ಸೇರಿ ಸುತ್ತಮುತ್ತಲ ಪ್ರದೇಶಗಳಲ್ಲೂ ಕಾರ್ಯಾಚರಣೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಒಟ್ಟು 4 ನಕ್ಸಲ್ ನಿಗ್ರಹ ಪಡೆಗಳಿದ್ದು, ಇಲ್ಲಿನ ಸಿಬ್ಬಂದಿ ಜತೆಗೆ ಸ್ಥಳೀಯ ಪೊಲೀಸರನ್ನೂ ಕೂಂಬಿಂಗ್‌ಗೆ ಬಳಸಿಕೊಳ್ಳಲಾಗಿದೆ.ಹಿರಿಯ ಅಧಿಕಾರಿಗಳು ಮೊಕ್ಕಾಂ:
ರಾಜ್ಯದಲ್ಲಿ ನಕ್ಸಲೀಯರ ಉಪಟಳ ನಿಂತೇ ಹೋಗಿದೆ ಎಂದು ತಿಳಿದುಕೊಂಡಿದ್ದ ಪೊಲೀಸ್ ಇಲಾಖೆಗೆ ಇದೀಗ ಜಿಲ್ಲೆಯಲ್ಲಿ ಮತ್ತೆ ನಕ್ಸಲೀಯರ ಚಟುವಟಿಕೆ ಕಾಣಿಸಿಕೊಂಡಿರುವುದು ತಲೆ ನೋವಾಗಿದೆ. ಆಂತರಿಕ ಭದ್ರತೆಯ ಎಡಿಜಿಪಿ ಪ್ರಣವ್ ಮೊಹಾಂತಿ, ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್, ಚಿಕ್ಕಮಗಳೂರು ಜಿಲ್ಲಾ ರಕ್ಷಣಾಧಿಕಾರಿ ಡಾ.ವಿಕ್ರಂ ಅಮಟೆ, ಎಎನ್‌ಎಫ್ ವರಿಷ್ಠಾಧಿಕಾರಿ ಹಿತೇಂದ್ರಕುಮಾರ್ ದಯಾಮ ಅವರು ಶೃಂಗೇರಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಕಾರ್ಯಾಚರಣೆಯ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.