ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರದ ಯಾವುದೇ ವಸತಿ ಯೋಜನೆಗಳಲ್ಲಿ 2021ರ ಬಳಿಕ ಒಂದೇ ಒಂದು ಮನೆ ಮಂಜೂರು ಆಗಿಲ್ಲ!ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಈ ವಿಚಾರವನ್ನು ಬೆಳಕಿಗೆ ತಂದರು. ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಸತಿ ಯೋಜನೆಗಳು ಮಂಜೂರಾಗಿವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ 2021-22ರ ಬಳಿಕ ಯಾವುದೇ ಹೊಸ ಮನೆ ಮಂಜೂರಾತಿ ಆಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಟ
ಜಿಪಂ ಸಿಇಒ ಡಾ.ಆನಂದ್ ಮಾತನಾಡಿ, 2018ರಲ್ಲಿ ಮಾಡಿದ ಸರ್ವೇ ಪ್ರಕಾರ ಜಿಲ್ಲೆಯಲ್ಲಿ ಆ ಕಾಲದಲ್ಲೇ 49 ಸಾವಿರಕ್ಕೂ ಅಧಿಕ ವಸತಿ ರಹಿತರಿದ್ದರು ಎಂದರು. ಇದು ಗಂಭೀರ ವಿಚಾರವಾಗಿದ್ದು, ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಒತ್ತಾಯಿಸಿದರು.ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, 49 ಸಾವಿರದಷ್ಟು ವಸತಿ ರಹಿತರು ಇದ್ದರೂ 4 ವರ್ಷಗಳಿಂದ ಒಂದೂ ಮನೆ ಮಂಜೂರಾಗಿಲ್ಲ ಎಂದರೆ ಏನರ್ಥ? ಸರ್ಕಾರಿ ಜಾಗ ಇದ್ದರೂ ಮನೆ ಕೊಡಲು ಸಾಧ್ಯವಾಗಿಲ್ಲ ಎಂದಾದರೆ ಅದಕ್ಕೆ ಕಾರಣಕರ್ತರಾದ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಶ್ತು ಕ್ರಮ ಜರುಗಿಸಬೇಕು, ಬಡವರಿಗೆ ಮನೆ ಮಂಜೂರು ಮಾಡುವಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು ಎಂದು ಸೂಚನೆ ನೀಡಿದರು.
ಮುಗಿಯದ ಜಲಜೀವನ್ ಕಾಮಗಾರಿ:24x7 ಕುಡಿಯುವ ನೀರು ಪೂರೈಕೆಯ ಜಲಜೀವನ್ ಮಿಷನ್ 2019ರಲ್ಲಿ ಆರಂಭಗೊಂಡು ಎರಡು ವರ್ಷಗಳ ಹಿಂದೆ ಮುಕ್ತಾಯವಾಗಬೇಕಿದ್ದರೂ ಇನ್ನೂ ಅರ್ಧದಷ್ಟೂ ಕಾಮಗಾರಿ ಮುಗಿದಿಲ್ಲ. ಶೇ. 45ರಷ್ಟು ಮಾತ್ರವೇ ಕಾಮಗಾರಿ ಪೂರ್ಣವಾಗಿದೆ. 2025ರ ಮಾರ್ಚ್ ಒಳಗೆ ಉಳಿದ ಶೇ.50ಕ್ಕೂ ಅಧಿಕ ಕಾಮಗಾರಿ ಹೇಗೆ ಮುಗಿಸ್ತೀರಿ ಎಂದು ಅಧಿಕಾರಿಗಳನ್ನು ದಿನೇಶ್ ಗುಂಡೂರಾವ್ ತರಾಟೆಗೆ ತೆಗೆದುಕೊಂಡರು.
ಈಗಾಗಲೇ ಒದಗಿಸಿರುವ ಸಂಪರ್ಕಗಳಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಪುತ್ತೂರು ಶಾಸಕ ಅಶೋಕ್ ರೈ ದೂರಿದರೆ, ನಗರದಲ್ಲಿ ಜಲಸಿರಿ ಯೋಜನೆ ಕಾಮಗಾರಿಗಳಿಂದಾಗಿ ಎಲ್ಲೆಡೆ ರಸ್ತೆ ಅಗೆದು ತೊಂದರೆ ಸೃಷ್ಟಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು. ಪ್ರತಿಕ್ರಿಯಿಸಿದ ಗುಂಡೂರಾವ್, ಈ ರೀತಿ ಕಾಮಗಾರಿ ನಡೆದರೆ ಇನ್ನು ಐದು ವರ್ಷ ಕಳೆದರೂ ಮುಗಿಯದು. ಕಳಪೆ ಕಾಮಗಾರಿ ಬಗ್ಗೆ ಸಾಕಷ್ಟು ದೂರುಗಳೂ ಇವೆ. ನಗರದಲ್ಲಿ ಜಲಸಿರಿ ಯೋಜನೆಯ ಕಾಮಗಾರಿಯ ಮೇಲ್ವಿಚಾರಣೆಯನ್ನು ಪಾಲಿಕೆ ಆಯುಕ್ತರು ನೋಡಬೇಕು ಎಂದು ಸೂಚನೆ ನೀಡಿದರು.ಆದ್ಯತೆಯಲ್ಲಿ ಕೃಷಿ ಸಾಲ ನೀಡಿ:
ಶೂನ್ಯ ದರದಲ್ಲಿ 5 ಲಕ್ಷ ರು.ವರೆಗಿನ ಕೃಷಿ ಸಾಲವನ್ನು ಆದ್ಯತೆ ನೆಲೆಯಲ್ಲಿ ವಿತರಿಸಬೇಕು. ನಷ್ಟವಾಗುತ್ತದೆ ಎಂಬ ಕಾರಣ ಕೊಟ್ಟು ಕೃಷಿ ಸಾಲ ನೀಡೋದನ್ನು ನಿರ್ಲಕ್ಷಿಸಬಾರದು ಎಂದು ಸಚಿವರು ತಾಕೀತು ಮಾಡಿದರು.ಸಂಸದ ಕ್ಯಾ.ಬ್ರಿಜೇಶ್ ಚೌಟ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂಪಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಡಿಸಿಎಫ್ ಅಂತೋನಿ ಮರಿಯಪ್ಪ, ಮೆಸ್ಕಾಂ ಎಂಡಿ ಪದ್ಮಾವತಿ ಮತ್ತಿತರರು ಇದ್ದರು.ವಾಟರ್ ಫ್ರಂಟ್ ತಡೆಗೋಡೆ ಕುಸಿತ: ವಾರದೊಳಗೆ ವರದಿಗೆ ಸೂಚನೆ
ನೇತ್ರಾವತಿ ರಿವರ್ ಫ್ರಂಟ್ ಯೋಜನೆಯ ನಿರ್ಮಾಣ ಹಂತದ ತಡೆಗೋಡೆ ಕುಸಿದು ಬಿದ್ದಿರುವ ಬಗ್ಗೆ ಸೂಕ್ತ ಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸಭೆಯಲ್ಲಿ ಒತ್ತಾಯಿಸಿದರು. 742 ಮೀಟರ್ ತಡೆಗೋಡೆ ಮಾಡಲಾಗಿದ್ದು, ಅದರಲ್ಲಿ ಸರಿಯಾಗಿ ಮಣ್ಣು ತುಂಬಿಸಲು ಅವಕಾಶ ಸಿಗದೆ ಮಳೆ ಬಂದಿದ್ದರಿಂದ 12 ಮೀ. ತಡೆಗೋಡೆ ಕುಸಿದಿದೆ. ಗುತ್ತಿಗೆದಾರರಿಂದ ಅದನ್ನು ಸರಿಪಡಿಸಲು ಸೂಚಿಸಲಾಗಿದೆ ಎಂದು ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧಿಕಾರಿ ಮಾಹಿತಿ ನೀಡಿದರು.ಬಂದರು ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆ ವಿಳಂಬವಾಗಿದೆ ಎಂದು ಸಂಸದ ಬ್ರಿಜೇಶ್ ಚೌಟ ಹಾಗೂ ಶಾಸಕ ವೇದವ್ಯಾಸ ಕಾಮತ್ ಆಕ್ಷೇಪಿಸಿದರು. ತಡೆಗೋಡೆ ಕುಸಿತದ ಬಗ್ಗೆ ತನಿಖೆ ನಡೆಸಿ ಒಂದು ವಾರದೊಳಗೆ ವರದಿ ನೀಡುವಂತೆ ಸಚಿವ ದಿನೇಶ್ ಗುಂಡೂರಾವ್ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ವಿದ್ಯುದಾಘಾತದಿಂದ ಸಾವು: 10 ದಿನದೊಳಗೆ ವರದಿಬೆಳ್ತಂಗಡಿಯ ಶಿಬಾಜೆಯಲ್ಲಿ ವಿದ್ಯುತ್ ಆಘಾತದಿಂದ ಯುವತಿ ಸಾವಿಗೀಡಾಗುವ ಮೊದಲು ಆ ಜಾಗ ಅಪಾಯದಲ್ಲಿದ್ದ ಕುರಿತು ಮೆಸ್ಕಾಂಗೆ ಎರಡು ಬಾರಿ ಸಾರ್ವಜನಿಕರಿಂದ ದೂರು ಸಲ್ಲಿಕೆಯಾಗಿತ್ತು. ಆದರೂ ನಿರ್ಲಕ್ಷ್ಯ ವಹಿಸಿದ್ದರಿಂದ ಯುವತಿ ಸಾವು ಸಂಭವಿಸಿದೆ. ಮೆಸ್ಕಾಂಗೆ ನೀಡಿದ ದೂರು ಮತ್ತು ಯುವತಿ ಸಾವಿನ ಕಾರಣ ಒಂದೇ ಆದರೆ ಅಧಿಕಾರಿಗಳ ಮೇಲೆ ಕ್ರಮ ಆಗಲೇಬೇಕು ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಒತ್ತಾಯಿಸಿದರು. ಈ ಕುರಿತು 10 ದಿನದೊಳಗೆ ಸ್ವತಂತ್ರ ಅಧಿಕಾರಿಗಳ ಮೂಲಕ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಉಸ್ತುವಾರಿ ಸಚಿವ ಸೂಚಿಸಿದರು.