ಸಾರಾಂಶ
ಬನಹಟ್ಟಿಯ ಮುಮುಕ್ಷ ಮಠದಲ್ಲಿ ವಚನ ಸಾಹಿತ್ಯ ಸಂರಕ್ಷಣೆ ದಿನಾಚರಣೆ ಜರುಗಿತು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ವ್ಯಕ್ತಿತ್ವದ ಕ್ರಿಯಾಶೀಲತೆಗೆ ಮೌಲ್ಯ ತಂದುಕೊಟ್ಟ ಫ.ಗು. ಹಳಕಟ್ಟಿಯವರು ವಚನ ಪರಂಪರೆಯ ಉಳಿವಿಗಾಗಿ ಬದುಕನ್ನೇ ಸವೆಸಿದರು ಎಂದು ಈರಣ್ಣ ಶಿರಹಟ್ಟಿ ಹೇಳಿದರು.ಬನಹಟ್ಟಿ ನಗರದ ಮುಮುಕ್ಷ ಮಠದಲ್ಲಿ ಬಸವ ಸಮಿತಿಯಿಂದ ನಡೆದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಹಾಗೂ ೧೪೪ನೇ ಫ.ಗು. ಹಳಕಟ್ಟಿ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿ, ಹಳಕಟ್ಟಿಯವರು ಶತಮಾನಗಳಿಂದ ಮುಚ್ಚಿ ಹೋಗಿದ್ದ ವಚನ ತಾಳೆಗರಿಗಳನ್ನು ಸಂಗ್ರಹಿಸಿ ವಚನ ಶಾಸ್ತ್ರ ಭಾಗ-೧, ವಚನ ಶಾಸ್ತ್ರ ಸಾರ ಭಾಗ-೨ ಪುಸ್ತಕಗಳನ್ನು ಮುದ್ರಣ ಮಾಡಿಸಿದರು. ಇಂದು ನಾಡಿನ ಹಲವು ಮಠಗಳಿಗೆ ಸಾಂಸ್ಕೃತಿಕವಾಗಿ ಧರ್ಮಗುರುಗಳಿಗೆ ತತ್ವಪ್ರಸಾರದ ಕಾಯಕ ಕೊಟ್ಟವರು ಫ.ಗು. ಹಳಕಟ್ಟಿಯವರು ಎಂದರು.
ಸಮಿತಿ ಅಧ್ಯಕ್ಷ ಶಂಕರ ಹೋಳಗಿ ಮಾತನಾಡಿ, ವಚನ ಕೃಷಿ ಅಸಾಮಾನ್ಯವಾದುದು. ಹಳಕಟ್ಟಿಯವರದು ನಾಡಿನಲ್ಲಿ ಬಲು ಅಪರೂಪದ ವ್ಯಕ್ತಿತ್ವ, ತ್ಯಾಗ, ಪರಿಶ್ರಮ, ನಿರಂತರ ಅಧ್ಯಯನ, ವಚನಗಳ ರಕ್ಷಣೆ, ಅವುಗಳ ಮುದ್ರಣ, ಸಂಪನ್ಮೂಲಗಳ ಕ್ರೋಡೀಕರಣಕ್ಕೆ ಅವರು ಪಟ್ಟ ಶ್ರಮಕ್ಕೆ ನಾವು ತಲೆಬಾಗಬೇಕೆಂದರು.ಮಹೇಶ ಬಂಡಿಗಣಿ, ಪ್ರಕಾಶ ಬುರುಡ, ಸಂಜು ಬರಗಲ್, ಬಸವಂತಪ್ಪ ಬಾನಕಾರ, ಅಶೋಕ ಬಸಪ್ಪಗೋಳ, ಶ್ರೀಶೈಲ ಗಣೇಶನವರ, ರಾಮಚಂದ್ರ ಹಾಸಿಲಕರ, ಏಗಪ್ಪ ಬೆಳಗಲಿ ಸೇರಿದಂತೆ ಅನೇಕರಿದ್ದರು.