ಸಾರಾಂಶ
ಬಿ.ರಾಮಪ್ರಸಾದ್ ಗಾಂಧಿ
ಹರಪನಹಳ್ಳಿ: ಐತಿಹಾಸಿಕ ಹೆಗ್ಗಳಿಕೆ ಹೊಂದಿದ ಪಟ್ಟಣದ ಗೋಸಾಯಿ ಗುಡ್ಡದ ಹಿಂಭಾಗದಲ್ಲಿರುವ ಹಾಲವರ್ತಿ ಮಠದ ಲಿಂಗನಾಯಕನಹಳ್ಳಿ ಚನ್ನವೀರ ಮಹಾಶಿವಯೋಗಿಗಳು ಜು.6ರಿಂದ ಆ.3ರ ವರೆಗೆ ಒಂದು ತಿಂಗಳು ಕಾಲ ತಪೋ ಅನುಷ್ಠಾನ ಕೈಗೊಂಡಿದ್ದಾರೆ.ಮಠದ ಒಂಬತ್ತನೇ ಪಟ್ಟಾಧ್ಯಕ್ಷ ಚನ್ನವೀರ ಮಹಾಶಿವಯೋಗಿಗಳು ಹಾಲವರ್ತಿಯ ಮಠದಲ್ಲಿ ಕೈಗೊಂಡ ಅನುಷ್ಠಾನ ಕಾರ್ಯಕ್ರಮಕ್ಕೆ ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಸ್ವಾಮೀಜಿ, ಹರಪನಹಳ್ಳಿ-ಹಡಗಲಿ ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ, ಹರಪನಹಳ್ಳಿ ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ, ಹಿರೇಮಲ್ಲನಕೇರಿಯ ಚನ್ನಬಸವ ಶಿವಯೋಗಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.ಕಾರ್ಯಕ್ರಮ ಕುರಿತು ಹರಪನಹಳ್ಳಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಷಣ್ಮುಖಪ್ಪ ಪೂಜಾರ್ ಮಾತನಾಡಲಿದ್ದಾರೆ. ಕಲ್ಲಹಳ್ಳಿ, ಅರಸನಾಳು, ಹರಪನಹಳ್ಳಿ, ಸುತ್ತಮುತ್ತಲಿನ ಭಕ್ತರು ಹಾಗೂ ಶಿವಯೋಗಿಗಳ ಅನುಷ್ಠಾನ ಸೇವಾ ಸಮಿತಿ ಸಹಕಾರದೊಂದಿಗೆ ಸಕಲ ಸೌಕರ್ಯಗಳನ್ನು ಕೈಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಈ ಅಭೂತ ಪೂರ್ವ ಕ್ಷಣಕ್ಕೆ ಸಾಕ್ಷಿಯಾಗಬೇಕು ಎಂದು ಹಾಲವರ್ತಿ ಮಹಾ ಶಿವಯೋಗಿಗಳ ಭಕ್ತ ಮಂಡಳಿ ಮನವಿ ಮಾಡಿದೆ.
ಕ್ಷೇತ್ರದ ಇತಿಹಾಸ:ಚನ್ನವೀರ ಶಿವಯೋಗಿ ಮೂಲಸ್ಥಳ ಹಾಲವರ್ತಿಯಾಗಿತ್ತು. ಇದು ವಿಶಿಷ್ಟ ಜಾಗೃತ ಸ್ಥಳ. ಭಕ್ತರಲ್ಲೊಬ್ಬರಾದ ಕೆ.ಕಲ್ಲಹಳ್ಳಿ ಕೆ.ಎಂ. ಗುರುಸಿದ್ದಯ್ಯ ಹೇಳುವ ಪ್ರಕಾರ ಹರಪನಹಳ್ಳಿಯ ಪಾಳೆಗಾರ ರಾಜ ಸೋಮಶೇಖರ ನಾಯಕರಿಗೆ ಶಿವಯೋಗಿಗಳು ಆಶೀರ್ವದಿಸಿ ಇಲ್ಲಿಂದ ಪಯಣ ಬೆಳೆಸಿ ತಾಲೂಕಿನ ಕಲ್ಲಹಳ್ಳಿ, ಅರಸನಾಳು ಮಾರ್ಗವಾಗಿ ಹ್ಯಾರಡ, ಹರವಿ, ಬಲ್ಲಹುಣಸಿ, ಮೈಲಾರ, ಹಿರೇಹಡಗಲಿ ಮುಂತಾದ ಸ್ಥಳಗಳಲ್ಲಿ ಪವಾಡ ಮಾಡಿ, ಲಿಂಗನಾಯಕನಹಳ್ಳಿಯಲ್ಲಿ ನೆಲೆ ನಿಂತರು.
ಶಿವಯೋಗಿಯವರು ಕಲ್ಲಹಳ್ಳಿ ಗ್ರಾಮದಲ್ಲಿ ಸಾಗುವಾಗ ಬಿಲ್ವಪತ್ರಿ ಮರವೊಂದು ಕೈ ಮಾಡಿ ಕರೆದಿತ್ತು. ಮಂಗಲಮಯ ಪ್ರಕೃತಿ ತಾಣದಲ್ಲಿ ಅಂದು ಜಂಗಮ ದೇವನಿಗೆ ಲಿಂಗಪೂಜೆ ನಡೆದಿತ್ತು. ಆ ತಾಣದಲ್ಲಿ ಗೋವುಗಳನ್ನು ಕಾಯುತ್ತಿದ್ದ ಕಲ್ಲಹಳ್ಳಿಯ ಗೋಪಾಲಕರು ಬಿಲ್ವವೃಕ್ಷ ವನದ ಮಧ್ಯದಲ್ಲಿ ಝೇಂಕರಿಸುತ್ತಿರುವ ಓಂಕಾರನಾದಕ್ಕೆ ಮುಗ್ಧರಾಗಿ, ಶಿವಯೋಗಿಯ ಪ್ರಭಾವಕ್ಕೆ ಒಳಗಾಗಿದ್ದರು. ತಮಗಾದ ಆಗೋಚರ ಆಶ್ಚರ್ಯವನ್ನು ಊರಿನವರಿಗೆ ನಿವೇದಿಸಿದ್ದರು.ಹೀಗೆ ಹರವಿ ಗ್ರಾಮದಲ್ಲೂ ಶಿವಯೋಗಿಯವರು ನೆಲೆಸಿದ್ದ ಸ್ಥಳದಲ್ಲಿ ಪವಾಡ ನಡೆದಿತ್ತು. ಗ್ರಾಮದ ಅಯ್ಯನವರ ಆಕಳೊಂದು ನಿತ್ಯ ಆ ಸ್ಥಳಕ್ಕೆ ಹೋಗಿ ಹಾಲು ಕೊಟ್ಟು ಬರುತ್ತಿತ್ತು. ಮನೆಯಲ್ಲಿ ಆಕಳು ಹಾಲು ಹಿಂಡದಿರುವುದನ್ನು ಗಮನಿಸಿದ ಮಾಲೀಕರು, ಅದನ್ನು ಹಿಂಬಾಲಿಸಿದಾಗ ತಮ್ಮ ಗೋಮಾತೆಯು ಶಿವಯೋಗಿಗೆ ಹಾಲು ಕರೆಯುವ ಸನ್ನಿವೇಶ ಕಂಡು ಬೆರಗಾಗಿದ್ದರು. ಅಂದಿನಿಂದ ಈ ಗ್ರಾಮವನ್ನು ಹರವಿ ಎಂದು ಕರೆಯಲಾಯಿತು ಎಂದು ಹೇಳಲಾಗುತ್ತದೆ.
ಚನ್ನವೀರ ಮಹಾಶಿವಯೋಗಿ ಒಂದು ದಿನ ಮಠದ ವಟು ಜತೆ ಸಂಚಾರಕ್ಕೆ ಹೋಗಿದ್ದರು. ಲಿಂಗನಾಯಕನಹಳ್ಳಿ ಸುತ್ತ ಕಾಡು ತುಂಬಿತ್ತು. ಶ್ರೀಗಳು ಇದ್ದಕ್ಕಿದ್ದಂತೆ ತಂಬಿಗೆಯೊಡನೆ ಮಾಯವಾಗಿಬಿಡ್ತಾರೆ. ಆಗ ಕ್ರೂರ ಮೃಗವೊಂದು ವಟುವಿನ ಮೇಲೆ ಆಕ್ರಮಿಸುತ್ತದೆ. ವಟು ಭಯ ಪಟ್ಟು ಆಕ್ರಂದನ ಹೆಚ್ಚುತ್ತದೆ. ಇದನ್ನು ಕೇಳಿದ ಪೂಜ್ಯರು ಅಲ್ಲಿಂದಲೇ ಅಪ್ಪಣೆ ಮಾಡಿ, "ಹುಲಿರಾಯ ಆ ವಸ್ತು ನಮ್ಮದಪ್ಪ, ನೀನೇಕೆ ಹಿಡಿಯುವೆ " ಎಂದಾಕ್ಷಣ ಹುಲಿರಾಯ ಗುರುಗಳ ಅಪ್ಪಣೆಯಂತೆ ಅಲ್ಲಿಂದ ಕಾಲು ಕೀಳುತ್ತದೆ. ಹೀಗೆ ಶ್ರೀಗಳ ಬಗ್ಗೆ ಭಕ್ತರ ನಂಬಿಕೆ ಹೊಂದಿದ್ದಾರೆ. ಇಷ್ಟು ದಿನ ಪಾಳುಬಿದ್ದ ಮಠವನ್ನು ಇದೀಗ ಭಕ್ತವೃಂದ ಅಭಿವೃದ್ಧಿಪಡಿಸಿದೆ.