38 ವರ್ಷ ನಂತರ ಟ್ರಾನ್ಸಿಸ್ಟರ್ ರೇಡಿಯೋ ಕೇಸ್‌ ಮುಕ್ತಾಯ!

| Published : Jun 25 2024, 12:30 AM IST

ಸಾರಾಂಶ

ಮನೆಯ ಹಿಂಬಾಗಿಲು ಒಡೆದು ಸ್ಟ್ಯಾಂಡ್‌ನಲ್ಲಿ ಇಟ್ಟಿದ್ದ ₹250 ಮೌಲ್ಯದ ಟ್ರಾನ್ಸಿಸ್ಟರ್ ರೇಡಿಯೋ ಕಳವು ಮಾಡಿದ್ದ ಪ್ರಕರಣವನ್ನು ಆರೋಪಿ ಮೃತಪಟ್ಟಿದ್ದಾನೆ ಎಂಬ ಹಿನ್ನೆಲೆ 38 ವರ್ಷದ ನಂತರ ಪೊಲೀಸ್ ಇಲಾಖೆ ಪ್ರಕರಣ ಮುಕ್ತಾಯಗೊಳಿಸಿದೆ.

- ಹರಿಹರ ತಾಲೂಕಿನಲ್ಲಿ ಕಳವು ಕೃತ್ಯ ಆರೋಪಿ 2008ರಲ್ಲೇ ಸಾವು- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಮನೆಯ ಹಿಂಬಾಗಿಲು ಒಡೆದು ಸ್ಟ್ಯಾಂಡ್‌ನಲ್ಲಿ ಇಟ್ಟಿದ್ದ ₹250 ಮೌಲ್ಯದ ಟ್ರಾನ್ಸಿಸ್ಟರ್ ರೇಡಿಯೋ ಕಳವು ಮಾಡಿದ್ದ ಪ್ರಕರಣವನ್ನು ಆರೋಪಿ ಮೃತಪಟ್ಟಿದ್ದಾನೆ ಎಂಬ ಹಿನ್ನೆಲೆ 38 ವರ್ಷದ ನಂತರ ಪೊಲೀಸ್ ಇಲಾಖೆ ಪ್ರಕರಣ ಮುಕ್ತಾಯಗೊಳಿಸಿದೆ.

ಹರಪನಹಳ್ಳಿ ತಾಲೂಕು ಯಲ್ಲಾಪುರದ ಕೊರಚರಹಟ್ಟಿ ವಾಸಿಯಾಗಿದ್ದ ಲಕ್ಕ ಅಲಿಯಾಸ್‌ ಮ್ಯಾಂಡ್ರಿಗುತ್ತಿ ಲಕ್ಕಪ್ಪ (52), ಹರಪನಹಳ್ಳಿ ತಾಲೂಕು ಮಾಚೇನಹಳ್ಳಿಯ ಹುಲುಗ ಅಲಿಯಾಸ್‌ ಬಾಬಯ್ಯ (40) ವಿರುದ್ಧ ದೂರು ದಾಖಲಾಗಿತ್ತು. ಹರಿಹರ ತಾಲೂಕಿನ ಗುರುಸಿದ್ದಪ್ಪ ಎಂಬುವರು 29.8.1986ರಲ್ಲಿ ತಮ್ಮ ಮನೆ ಹಿಂಬಾಗಿಲನ್ನು ಒಡೆದು, ರೇಡಿಯೋ ಸ್ಟ್ಯಾಂಡ್‌ನಲ್ಲಿಟ್ಟಿದ್ದ ವಿನೋ ಕಾರ್ಟಿಕ್ ಹೆಸರಿನ ₹250 ಮೌಲ್ಯದ ಟ್ರಾನ್ಸಿಸ್ಟರ್‌ ರೇಡಿಯೋ ಕಳವು ಮಾಡಿರುವ ಬಗ್ಗೆ, ಅದನ್ನು ಪತ್ತೆ ಮಾಡಿಕೊಡುವಂತೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣದಲ್ಲಿ ಲಕ್ಕ ಅಲಿಯಾಸ್ ಮ್ಯಾಂಡ್ರಿಗುತ್ತಿ ಲಕ್ಕಪ್ಪ, ಹುಲುಗ ಅಲಿಯಾಸ್‌ ಬಾಬಯ್ಯ ಆರೋಪಿಗಳಾಗಿದ್ದರು. ಈ ಪೈಕಿ ಹುಲುಗ ನಿರಪರಾಧಿ ಎಂದಾಗಿತ್ತು. ತಲೆಮರೆಸಿಕೊಂಡಿದ್ದ 1ನೇ ಆರೋಪಿ ಲಕ್ಕ ಅಲಿಯಾಸ್‌ ಮ್ಯಾಂಡ್ರಿಗುತ್ತಿ ಲಕ್ಕಪ್ಪನ ಪತ್ತೆಗೆ ಎಎಸ್ಐ ನಾಗರಾಜ, ಅನಿಲಕುಮಾರ, ಪ್ರಸನ್ನಕಾಂತ ಸಿಬ್ಬಂದಿ ಕಳೆದ ಜೂನ್‌.18ರಂದು ಲಕ್ಕಪ್ಪ ವಾಸವಿದ್ದ ಸ್ಥಳಕ್ಕೆ ಹೋಗಿ ಮತ್ತೆ ವಿಚಾರಿಸಿದ್ದಾರೆ. ಆಗ ಲಕ್ಕಪ್ಪ 2008ರಲ್ಲೇ ಮೃತಪಟ್ಟ ಮಾಹಿತಿ ಸಿಕ್ಕಿದೆ. ಈ ಕಾರಣಕ್ಕೆ 38 ವರ್ಷದ ಹಿಂದಿನ ಪ್ರಕರಣವನ್ನು ಇದೀಗ ಪೊಲೀಸ್ ಇಲಾಖೆ ಮುಕ್ತಾಯಗೊಳಿಸಿದೆ.

- - -

(-ಫೋಟೋ: ಸಾಂದರ್ಭಿಕ ಚಿತ್ರ)