ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಪ್ತ ಕಾಂಗ್ರೆಸ್ ಮುಖಂಡ, ಇನಾಯತ್ ಆಲಿಗೆ ದೆಹಲಿಯಿಂದ ನೋಟಿಸ್ ಜಾರಿಗೊಳಿಸಲಾಗಿದೆ.
ಮಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಪ್ತಗೂ ನೊಟೀಸ್ ಜಾರಿಗೊಳಿಸಿದೆ. ಮಂಗಳೂರಿನ ಉದ್ಯಮಿ, ಡಿಕೆಶಿ ಆಪ್ತ ಕಾಂಗ್ರೆಸ್ ಮುಖಂಡ, ಇನಾಯತ್ ಆಲಿಗೆ ದೆಹಲಿಯಿಂದ ನೋಟಿಸ್ ಜಾರಿಗೊಳಿಸಲಾಗಿದೆ. ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ(ಇಡಿ)ದಿಂದ ತನಿಖೆಗೆ ಹಾಜರಾಗುವಂತೆ ಭಾನುವಾರ ನೊಟೀಸ್ ನೀಡಲಾಗಿದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಕರಣದಲ್ಲಿ ಇಡಿ ನೀಡಿರುವ ದೂರಿನ ಮೇರೆಗೆ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ ಎಫ್ಐಆರ್ ದಾಖಲಿಸಿತ್ತು.
ಪ್ರಕರಣ ಏನು?: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಆರ್ಥಿಕ ವಹಿವಾಟಿಗೆ ಸಂಬಂಧಿಸಿ ಅ. 3 ರಂದು ಸೋನಿಯಾ ಮತ್ತು ರಾಹುಲ್ ಗಾಂಧಿ ಮೇಲೆ ಇಡಿ ಪ್ರಕರಣ ದಾಖಲಿಸಿತ್ತು. ಅದೇ ಪ್ರಕರಣದಲ್ಲಿ ಈಗ ಡಿಸಿಎಂ ಡಿ.ಕೆ.ಶಿವ ಕುಮಾರ್ ಮತ್ತು ಅವರ ಸಹೋದರ ಡಿ.ಕೆ.ಸುರೇಶ್‌ಗೆ ನೋಟಿಸ್ ಜಾರಿಗೊಳಿಸಿತ್ತು. ಪ್ರಸಕ್ತ ಡಿಕೆಶಿ ಜೊತೆಗೆ ವ್ಯವಹಾರ ಪಾಲುದಾರಿಕೆ ಹೊಂದಿರುವ ಇನಾಯತ್ ಆಲಿಗೂ ನೋಟಿಸ್ ಜಾರಿಗೊಳಿಸಿದ್ದು, ಒಂದು ವಾರದೊಳಗೆ ತನಿಖೆಗೆ ಹಾಜರಾಗುವಂತೆ ದೆಹಲಿ ಪೊಲೀಸರು ಇನಾಯತ್ ಆಲಿ ಮನೆಗೆ ಬಂದು ನೋಟಿಸ್ ನೀಡಿ ತೆರಳಿದ್ದಾರೆ.ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ಸಂಸ್ಥೆಯಿಂದ ಕಳೆದ ಹಲವು ವರ್ಷಗಳಿಂದ ಇನಾಯತ್ ಆಲಿಯ ತನಿಖೆಯಾಗಿತ್ತು. ಅದರ ಮುಂದುವರಿದ ಭಾಗವಾಗಿ ಈಗ ದೆಹಲಿ ಆರ್ಥಿಕ ವಿಭಾಗದ ಪೊಲೀಸರು ತನಿಖೆಗೆ ಕರೆದಿದ್ದಾರೆ. ನ್ಯಾಷನಲ್ ಹೆರಾಲ್ಡ್‌ಗೆ ಇನಾಯತ್ ಆಲಿ ಕೂಡ ಆರ್ಥಿಕ ಸಹಾಯ ಒದಗಿಸಿದ್ದರು. ವೈಯಕ್ತಿಕ ಹಿನ್ನೆಲೆ, ಕಾಂಗ್ರೆಸ್ ಜೊತೆಗಿನ ಸಂಬಂಧ, ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ನೀಡಿದ ದೋಣಿಗೆ ಬಗ್ಗೆ ಪ್ರಮಾಣಪತ್ರ ನೀಡುವಂತೆ ನೋಟಿಸ್‌ನಲ್ಲಿ ಸೂಚನೆ ನೀಡಲಾಗಿದೆ ಎಂದು ತಿಳಿಯಲಾಗಿದೆ. ಅಲ್ಲದೆ ಯಾವ ರೀತಿ ದೇಣಿಗೆ ನೀಡಲಾಗಿದೆ. ಈ ಹಣ ಯಾವುದಕ್ಕೆ ಬಳಕೆಯಾಗಿದೆ ಎಂಬ ಬಗ್ಗೆ ನೋಟಿಸ್‌ನಲ್ಲಿ ವಿವರ ಕೇಳಲಾಗಿದೆ ಎಂದು ತಿಳಿಯಲಾಗಿದೆ.
ಇನಾಯತ್ ಆಲಿ ಅವರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದು, ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು.