ಜ್ಞಾನವಾಪಿ ಬಳಿಕ ಮತ್ತೊಂದು ಮಸೀದಿ ಎಎಸ್‌ಐ ಸಮೀಕ್ಷೆಗೆ ಕೋರ್ಟ್‌ ಆದೇಶ

| Published : Mar 12 2024, 02:06 AM IST

ಸಾರಾಂಶ

ಉತ್ತರಪ್ರದೇಶ ವಾರಾಣಸಿಯ ಜ್ಞಾನವಾಪಿ ಮಸೀದಿ ಈ ಹಿಂದೆ ದೇಗುಲವಾಗಿತ್ತೇ ಎಂಬುದರ ಕುರಿತು ಪುರಾತತ್ವ ಇಲಾಖೆಯಿಂದ ಸಮೀಕ್ಷೆ ನಡೆದ ಬೆನ್ನಲ್ಲೇ ಮಧ್ಯಪ್ರದೇಶದಲ್ಲೂ 11ನೇ ಶತಮಾನದ ದೇಗುಲ/ ಮಸೀದಿಯೊಂದರ ಸಮೀಕ್ಷೆಗೆ ಮಧ್ಯಪ್ರದೇಶ ಹೈಕೋರ್ಟ್‌ ಆದೇಶಿಸಿದೆ.
ಭೋಪಾಲ್‌: ಉತ್ತರಪ್ರದೇಶ ವಾರಾಣಸಿಯ ಜ್ಞಾನವಾಪಿ ಮಸೀದಿ ಈ ಹಿಂದೆ ದೇಗುಲವಾಗಿತ್ತೇ ಎಂಬುದರ ಕುರಿತು ಪುರಾತತ್ವ ಇಲಾಖೆಯಿಂದ ಸಮೀಕ್ಷೆ ನಡೆದ ಬೆನ್ನಲ್ಲೇ ಮಧ್ಯಪ್ರದೇಶದಲ್ಲೂ 11ನೇ ಶತಮಾನದ ದೇಗುಲ/ ಮಸೀದಿಯೊಂದರ ಸಮೀಕ್ಷೆಗೆ ಮಧ್ಯಪ್ರದೇಶ ಹೈಕೋರ್ಟ್‌ ಆದೇಶಿಸಿದೆ.ಮಧ್ಯಪ್ರದೇಶ ಧಾರ್‌ನಲ್ಲಿ ಭೋಜ್‌ಶಾಲಾ ದೇಗುಲ ಸಮುಚ್ಚಯ ಮತ್ತು ಕಮಾಲ್‌ ಮೌಲಾ ಮಸೀದಿಯೇ ಸಮೀಕ್ಷೆಗೆ ಒಳಪಡಲಿರುವ ವಿವಾದಿತ ಕಟ್ಟಡ.

ಹಿಂದೂಗಳು ಇದನ್ನು ಭೋಜ ರಾಜ ನಿರ್ಮಿಸಿದ ವಾಗ್ದೇವಿ (ಸರಸ್ವತಿ) ದೇಗುಲ ಎನ್ನುತ್ತಾರೆ ಹಾಗೂ ಅಲ್ಲಾವುದ್ದೀನ್‌ ಖಿಲ್ಜಿ ಆಡಳಿತದಲ್ಲಿ ಧ್ವಂಸಗೊಳಿಸಿ ಮಸೀದಿಯಾಗಿ ಪರಿವರ್ತಿಸಲಾಗಿದೆ ಎಂದು ದೂರುತ್ತಾರೆ. ಆದರೆ ಇದು ದೇಗುಲವಲ್ಲ, ಕಮಲ್‌ ಮೌಲಾ ಮಸೀದಿ ಎಂಬುದು ಮುಸ್ಲಿಮರ ವಾದ.

ಇಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸುವ ಸಂಬಂಧ ಉಭಯ ಬಣಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಆಗಾಗ್ಗೆ ನಿರ್ಮಾಣ ಆಗುತ್ತಿರುತ್ತದೆ. ಅದರಲ್ಲೂ ಸರಸ್ವತಿ ಆರಾಧನೆಯ ಬಸಂತ ಪಂಚಮಿಯು ಮುಸ್ಲಿಮರ ನಮಾಜ್‌ ನಡೆಯುವ ಶುಕ್ರವಾರವೇ ಬಂದಾಗ ಪೂಜೆ/ ಪ್ರಾರ್ಥನೆ ವಿವಾದ ಮತ್ತಷ್ಟು ಭುಗಿಲೇಳುತ್ತದೆ.

ಹೀಗಾಗಿ 2003ರಿಂದ ಇಲ್ಲಿ ಪ್ರತಿ ಮಂಗಳವಾರ ಹಿಂದೂಗಳಿಗೆ ಪೂಜೆ ಸಲ್ಲಿಸಲು ಮತ್ತು ಪ್ರತಿ ಶುಕ್ರವಾರ ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಆದರೆ, ಪುರಾತತ್ವ ಇಲಾಖೆ ವಶದಲ್ಲಿರುವ ಈ ದೇಗುಲವನ್ನು ಮರಳಿ ತಮ್ಮ ವಶಕ್ಕೆ ಒಪ್ಪಿಸಬೇಕು ಎಂದು ಹಿಂದೂ ಸಂಘಟನೆಗಳು ವಾದಿಸಿದ್ದವು. ಇದನ್ನು ಮುಸ್ಲಿಂ ಬಣ ವಿರೋಧಿಸಿತ್ತು. ಈ ಕುರಿತು ವಾದ-ಪ್ರತಿವಾದ ಆಲಿಸಿದ್ದ ನ್ಯಾಯಾಲಯ ಇದೀಗ ವಿವಾದಿತ ಪ್ರದೇಶದ ಇತಿಹಾಸ ಅರಿಯಲು ಪುರಾತತ್ವ ಇಲಾಖೆಯಿಂದ ಸಮೀಕ್ಷೆಗೆ ಆದೇಶಿಸಿದೆ.

ವಿಶೇಷವೆಂದರೆ ಕಾಶಿ ಜ್ಞಾನವಾಪಿ ಮಸೀದಿ, ಮಥುರಾ ಕೃಷ್ಣ ಮಂದಿರ ಪ್ರಕರಣದಲ್ಲಿ ಹಿಂದೂಗಳ ಪರ ವಕೀಲರಾಗಿರುವ ವಿಷ್ಣು ಶಂಕರ್‌ ಜೈನ್‌ ಅವರ ಕೋರಿಕೆ ಅನ್ವಯ ಇಲ್ಲಿ ಸಮೀಕ್ಷೆಗೆ ಆದೇಶ ಹೊರಬಿದ್ದಿದೆ. 1902-03ರಲ್ಲಿ ಎಎಎಸ್‌ಐ ನಡೆಸಿದ್ದ ಉತ್ಖನನದ ವೇಳೆ ಇದು ಮೂಲ ಹಿಂದೂ ದೇಗುಲ ಎಂದು ಕಂಡುಬಂದಿತ್ತು.