ಕಕ್ಕಟ 18ರ ಬಳಿಕ ಮನೆ ಮನೆಗೆ ಬರುವ ‘ಆಟಿ ಕಳೆಂಜ’

| Published : Aug 08 2024, 01:34 AM IST

ಸಾರಾಂಶ

ಕೊಡಗು-ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆಟಿ ತಿಂಗಳ ವಿಶೇಷವಾದಂ ಆಟಿ ಕಳಂಜ ಕುಣಿತದ ಸಾಂಪ್ರದಾಯಿಕ ಆಚರಣೆ ಕಂಡುಬರುತ್ತಿದ್ದು ಈ ಜಿಲ್ಲೆಗಳ ಕೆಲವು ಗ್ರಾಮ ವ್ಯಾಪ್ತಿಗಳಲ್ಲಿ ಆಟಿಕಳಂಜದ ಆಚರಣೆ ಇಂದಿಗೂ ಜೀವಂತವಾಗಿದೆ. ನರಿಯಂದಡ ಗ್ರಾಮದಲ್ಲಿರುವ ಅರಮನೆಪಾಲೆ ಜನಾಂಗದವರು ಆಚರಿಸಿಕೊಂಡು ಬರುತ್ತಿರುವ ‘ಆಟಿ ಕಳಂಜ’ (ಕಕ್ಕತಜ್ಜಿ) ಆಚರಣೆಯೇ ಈಗಲೂ ಸಕ್ರಿಯವಾಗಿದೆ.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಕೊಡಗು-ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆಟಿ ತಿಂಗಳ ವಿಶೇಷವಾದಂ ಆಟಿ ಕಳಂಜ ಕುಣಿತದ ಸಾಂಪ್ರದಾಯಿಕ ಆಚರಣೆ ಕಂಡುಬರುತ್ತಿದ್ದು ಈ ಜಿಲ್ಲೆಗಳ ಕೆಲವು ಗ್ರಾಮ ವ್ಯಾಪ್ತಿಗಳಲ್ಲಿ ಆಟಿಕಳಂಜದ ಆಚರಣೆ ಇಂದಿಗೂ ಜೀವಂತವಾಗಿದೆ.

ಆಧುನಿಕತೆಯ ಧಾವಂತದಲ್ಲಿ ವೈಶಿಷ್ಟ್ಯ ಪೂರ್ಣ ಸಂಸ್ಕೃತಿ ಆಚಾರ ವಿಚಾರಗಳು ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಇಂದಿಗೂ ತಮ್ಮ ಪೂರ್ವಿಕರು ಆಚರಿಸಿಕೊಂಡು ಬಂದಂತಹ ಸಂಪ್ರದಾಯವನ್ನು ಜತನದಿಂದ ಕಾಪಿಟ್ಟು ಮುಂದುವರಿಸಿಕೊಂಡು ಹೋಗುತ್ತಿರುವುದಕ್ಕೆ ‘ಆಟಿ ಕಳಂಜ’ (ಕಕ್ಕತಜ್ಜಿ) ಆಚರಣೆಯೇ ಸಾಕ್ಷಿಯಾಗಿದೆ..

ಕೊಡಗಿನಲ್ಲಿ ‘ಆಟಿ ಕಳಂಜ’:

ಕೊಡಗಿನ ಮೂಲನಿವಾಸಿ ಜನಾಂಗಗಳಲ್ಲಿ ಒಂದಾದ ನರಿಯಂದಡ ಗ್ರಾಮದಲ್ಲಿರುವ ಅರಮನೆಪಾಲೆ ಜನಾಂಗದವರು ಆಚರಿಸಿಕೊಂಡು ಬರುತ್ತಿರುವ ‘ಆಟಿ ಕಳಂಜ’ (ಕಕ್ಕತಜ್ಜಿ) ಆಚರಣೆಯೇ ಈಗಲೂ ಸಕ್ರಿಯವಾಗಿದೆ.

ಮಳೆಯ ಆಷಾಢ ತಿಂಗಳಿನಲ್ಲಿ ಕೊಡಗಿನಲ್ಲಿ ಆಟಿಯನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಆಟಿ (ಕಕ್ಕಡ) ೧೮. ಇದು ಮುಗಿದ ಬಳಿಕ ಆಚರಿಸುವ ಒಂದು ವೈಶಿಷ್ಟ್ಯಪೂರ್ಣ ಆಚರಣೆಯೇ ‘ಆಟಿ ಕಳಂಜ’. ಕೊಡಗಿನ ಮೂಲ ನಿವಾಸಿ ಜನಾಂಗಗಳಲ್ಲಿ ಒಂದಾಗಿರುವ ಅರಮನೆ ಪಾಲೆ ಜನಾಂಗದವರು ಮಾತ್ರ ಇದನ್ನು ಆಚರಿಸಿಕೊಂಡು ಬರುತ್ತಿರುವುದು ವಿಶೇಷ.

ಲಯಬದ್ಧ ವಾದ್ಯದ ಶಬ್ಧಕ್ಕೆ ಪ್ರಾಸಬದ್ದವಾಗಿ ಹಾಡು ಹೇಳುತ್ತಾ ಸಾಗುವ ತಂಡದಲ್ಲಿ ಅಜ್ಜಿ ವಿಶಿಷ್ಟ ವೇಷಭೂಷಣಗಳೊಂದಿಗೆ ನೆಕ್ಕಿ ಸೊಪ್ಪು (ಗಾಳಿ) ಸೊಪ್ಪು ಎಂದು ಕರೆಯಲಾಗುವ ಒಂದು ಬಗೆಯ ಸೊಪ್ಪಿನ ಕಟ್ಟುಗಳನ್ನು ಹೊತ್ತೊಯ್ಯುವುದು ಸಂಪ್ರದಾಯ. ಅಜ್ಜಿ ವೇಷಧಾರಿಯೊಂದಿಗೆ ಅವರ ಮುಂದೆ ಮೈಗೆಲ್ಲಾ ಕಪ್ಪು ಮಸಿ ಬಳಿದುಕೊಂಡು ಮುಖವಾಡ ತೊಟ್ಟಂತಹ ೨ ಕಳಂಜ ವಾದ್ಯದ ಶಬ್ಧಕ್ಕೆ ತಕ್ಕಂತೆ ಕುಣಿಯುತ್ತಾ ತಮ್ಮ ತಂಡದೊಂದಿಗೆ ಗ್ರಾಮಗಳಲ್ಲಿ ಸಂಚರಿಸುತ್ತಾರೆ.

ಹೀಗೆ ಗ್ರಾಮದ ಎಲ್ಲಾ ಮನೆಗಳಿಗೆ ತೆರಳುವ ಇವರು ಮನೆಮಂದಿಗೆಲ್ಲಾ ಗಾಳಿಸೊಪ್ಪನ್ನು ನಿವಾಳಿಸಿ ದೃಷ್ಟಿ ತೆಗೆದು ತಮ್ಮ ಮೈಯಿಗೆ ಬಳಿದುಕೊಂಡ ಕಪ್ಪು ಬಣ್ಣವನ್ನು ತಿಲಕ ಇಟ್ಟು ಆಶೀರ್ವಾದ ಮಾಡುವುದು ಸಂಪ್ರದಾಯ.

.............................

ದಕ್ಷಿಣ ಕನ್ನಡ ಸಹಿತ ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಆಟಿ ತಿಂಗಳಲ್ಲಿ ಈ ಆಚರಣೆ ಪ್ರಾರಂಭಗೊಳ್ಳುತ್ತಿದ್ದು ಪ್ರತಿಮನೆಯಲ್ಲಿ ನೀಡಿದ ದವಸ ಧಾನ್ಯ, ಅಕ್ಕಿ, ಉಪ್ಪುಮೆಣಸು ಮುಂತಾದ ಅಗತ್ಯ ವಸ್ತುಗಳನ್ನು ಹಾಗೂ ಹಣವನ್ನು ಮೊರ (ತಡಪೆ) ಯಲ್ಲಿ ಹಾಕಿ ಪಡೆದುಕೊಳ್ಳುವುದು ಸಂಪ್ರದಾಯ.

ಊರಿನಲ್ಲಿ ಆಟಿ ತಿಂಗಳಿನಲ್ಲಿ ದೇವಾಲಯಗಳಲ್ಲಿ ಪೂಜಾ ಕಾರ್ಯಗಳು ನಡೆಯುವುದು ಕಡಿಮೆ. ಜನರಿಗೆ ಬಂದೊದಗುವ ಕಷ್ಟಕಾರ್ಪಣ್ಯ, ರೋಗ ರುಜಿನಗಳನ್ನು ನಿವಾರಿಸಲು, ಕಷ್ಟ ನಷ್ಟಗಳನ್ನು ದೂರಮಾಡಲು ಬಂದಂತಹ ಆಚರಣೆಯೇ ಆಟಿ ಕಳಂಜ.

ಗ್ರಾಮೀಣ ಮನೆಗಳಲ್ಲಿ ದೆವ್ವ, ಪಿಶಾಚಿಗಳು ಸೇರದಂತೆ, ರೋಗ ರುಜಿನಗಳು ಬಾರದಂತೆ ಹಾಗೂ ಕೃಷಿ ಉತ್ಪತ್ತಿ, ಸಮೃದ್ಧ ಬೆಳೆ ದೊರೆಯುವಂತೆ ಮಾಡಲು ಈ ಪದ್ಧತಿ ಆಚರಿಸಲಾಗುತ್ತಿದೆ.

ಆಷಾಢ ಮಾಸದಲ್ಲಿ ಆಟಿ ಕಳಂಜ ಕುಣಿತ ತುಳುನಾಡಿನ ವಿಶೇಷ. ಆಟಿ ತಿಂಗಳಲ್ಲಿ ಸಸ್ಯಮೂಲವೇ ಆಹಾರ. ಇದೇ ಸಂದರ್ಭದಲ್ಲಿ ಕಾಲಿಡುವ ಶೀತ, ಕೆಮ್ಮು, ಜ್ವರಬಾಧೆ, ಜನತೆಯನ್ನು ಕಂಗೆಡಿಸುತ್ತದೆ. ಇದನ್ನು ನಿವಾರಿಸಲು ಆಟಿ ಕಳಂಜ ಬರುತ್ತಾನೆ ಎಂಬ ನಂಬಿಕೆ ಇದೆ.

ಕರಾವಳಿಯಲ್ಲಿ ಈ ಆಟಿ ಕಳಂಜವನ್ನು ನಲಿಕೆ ಜನಾಂಗದವರು ಕಟ್ಟುತ್ತಾರೆ. ಕಾಲಿಗೆ ಗೆಜೆ (ಗಗ್ಗರ), ಸೊಂಟಕ್ಕೆ ಕೆಂಪುಬಿಳಿ ಪಟ್ಟಿಯನ್ನು ಹೊಂದಿರುವ ಇಜಾರವನ್ನು ಅದರ ಮೇಲೆ ತೆಂಗಿನ ಗೆರಿ (ಸಿರಿ)ಯಿಂದ ಮಾಡಿದ ಜಾಲರಿಯನ್ನು ತಲೆಗೆ ಶಿರಸ್ತ್ರಾಣ ಧರಿಸಿ ಮನೆಮನೆಗೆ ಬಂದು ರೋಗ ರುಜಿನಗಳ ಮಾರಿಯನ್ನು ಓಡಿಸುವುದು ಸಾಂಪ್ರದಾಯಿಕ ಕಳಂಜನ ಕೆಲಸವಾಗಿದೆ.

----------------------------ಆಟಿ ಕಳಂಜ ಪುರಾತನ ಕಾಲದಿಂದ ನಡೆಸಿಕೊಂಡು ಬರುತ್ತಿರುವ ಸಂಪ್ರದಾಯ. ಆಧುನಿಕ ಕಾಲದಲ್ಲಿ ಯುವಜನಾಂಗ ತಮ್ಮ ಸಂಪ್ರದಾಯಗಳನ್ನು ಕಳಚಿ ಪಟ್ಟಣ ಸೇರುತ್ತಿರುವ ಸಂರ್ಭದಲ್ಲಿ ಅರಮನೆ ಪಾಲೆ ಜನಾಂಗದವರು ಜಿಲ್ಲೆಯಲ್ಲಿ ವಿಶೇಷವಾಗಿ ನಡೆಸುತ್ತಾ ಬರುತ್ತಿದ್ದಾರೆ.

-ಪೊಕ್ಕೋಳಂಡ್ರ ಧನೋಜ್‌, ನರಿಯಂದಡ ಗ್ರಾಮಸ್ಥ.

................

ನಮ್ಮ ಹಿರಿಯರ ಕಾಲದಲ್ಲಿ ಕಕ್ಕಡ ಹದಿನೆಂಟರಿಂದ ಪ್ರಾರಂಭಗೊಂಡು ೧೨ ಗ್ರಾಮಗಳಿಗೆ ತೆರಳುತ್ತಿದ್ದೆವು. ಈಗ ಕಾರಣಾಂತರಗಳಿಂದ ನಾಲ್ಕು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಕಳೆದ ವರ್ಷ ಸೂತಕದಿಂದಾಗಿ ಮಾಡಲಾಗಿಲ್ಲ. ಇದೀಗ ಪ್ರತಿ ರ್ಷದಂತೆ ಇದೇ ಶುಕ್ರವಾರ (ನಾಳೆ)ದಿಂದ ''''''''ಆಟಿ ಕಳಂಜ'''''''' ಗ್ರಾಮಗಳಲ್ಲಿ ತೆರಳಲಿದೆ.

-ಗಣೇಶ, ಆಟಿ ಕಳಂಜ ತಂಡದ ಪ್ರಮುಖ, ನರಿಯಂದಡ ಗ್ರಾಮ.

...................

ಗ್ರಾಮದಲ್ಲಿ ಪುರಾತನ ಕಾಲದಿಂದಲೂ ಆಚರಣೆಯಲ್ಲಿರುವ ಪದ್ಧತಿ ಇದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷವಾಗಿ ಕಂಡುಬರುತ್ತದೆ. ವರ್ಷಂಪ್ರತಿ ಕೊಡಗಿನ ಆಟಿ ಹದಿನೆಂಟರ ಆಚರಣೆ ಬಳಿಕ ಒಂದು ವಾರಗಳ ಕಾಲ 4 ಗ್ರಾಮದ ಮನೆಮನೆಗೆ ತೆರಳುತ್ತಾರೆ. ಗ್ರಾಮಗಳ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮನೆಗಳಿಗೆ ಕಳಂಜ, ಮೈಗೆಲ್ಲಾ ಕಪ್ಪು ಮಸಿ ಬಳಿದುಕೊಂಡು ಮುಖವಾಡ ತೊಟ್ಟಂತಹ ವೇಷಧಾರಿ ತಂಡ ಗ್ರಾಮಗಳನ್ನು ಸುತ್ತುತ್ತವೆ.

-ತೋಂಟದಬೈಲು ಅನಂತಕುಮಾರ್, ನರಿಯಂದಡ ಗ್ರಾಮಸ್ಥ.