ಸರ್ಕಾರಿ ಸಾರಿಗೆ ಬಸ್‌ ಪ್ರಯಾಣ ದರ ಹೆಚ್ಚಳದ ನಂತರ ಇದೀಗ ಮೆಟ್ರೋ ಪ್ರಯಾಣ ದರವೂ ದುಬಾರಿ!

| N/A | Published : Feb 09 2025, 01:15 AM IST / Updated: Feb 09 2025, 07:06 AM IST

ಸರ್ಕಾರಿ ಸಾರಿಗೆ ಬಸ್‌ ಪ್ರಯಾಣ ದರ ಹೆಚ್ಚಳದ ನಂತರ ಇದೀಗ ಮೆಟ್ರೋ ಪ್ರಯಾಣ ದರವೂ ದುಬಾರಿ!
Share this Article
  • FB
  • TW
  • Linkdin
  • Email

ಸಾರಾಂಶ

ಬಿಎಂಟಿಸಿ ಬಸ್‌ ದರ ಏರಿಕೆ ಬೆನ್ನಲ್ಲೇ ನಮ್ಮ ಮೆಟ್ರೋ ಪ್ರಯಾಣ ದರವೂ ಏರಿಕೆ ಆಗಿದೆ. ಕನಿಷ್ಠ 10ನಿಂದ ಗರಿಷ್ಠ 90ರವರೆಗೆ ದರ ಏರಿಸಲಾಗಿದೆ.

 ಬೆಂಗಳೂರು : ಸರ್ಕಾರಿ ಸಾರಿಗೆ ಬಸ್‌ ಪ್ರಯಾಣ ದರ ಹೆಚ್ಚಳದ ನಂತರ ಇದೀಗ ನಮ್ಮ ಮೆಟ್ರೋ ರೈಲು ಪ್ರಯಾಣ ದರ ಶೇಕಡ 40ರಿಂದ 50ರಷ್ಟು ಹೆಚ್ಚಳ ಮಾಡಲಾಗಿದ್ದು, ನೂತನ ದರ ಫೆ.9 ರಿಂದಲೇ ಜಾರಿಗೆ ಬರಲಿದೆ.

ಬಸ್‌ ಪ್ರಯಾಣ ದರ ಹೆಚ್ಚಳ ಮಾಡಿದ ಒಂದೇ ತಿಂಗಳಲ್ಲಿ ನಮ್ಮ ಮೆಟ್ರೋ ರೈಲು ಪ್ರಯಾಣ ದರ ಹೆಚ್ಚಿಸಲಾಗಿದೆ. ಬಸ್‌ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಿದ್ದರೆ, ಮೆಟ್ರೋ ರೈಲು ಪ್ರಯಾಣ ದರವನ್ನು ಶೇ.40ರಿಂದ 50ರಷ್ಟು ಹೆಚ್ಚಿಸಿ ಜನರಿಗೆ ಶಾಕ್‌ ನೀಡಲಾಗಿದೆ. ಮೆಟ್ರೋ ಪ್ರಯಾಣ ದರದಲ್ಲಿ ಮೊದಲ 2 ಕಿ.ಮೀ. ಸಂಚಾರಕ್ಕೆ ಯಾವುದೇ ಹೆಚ್ಚಳ ಮಾಡಿಲ್ಲ. ನಂತರದ ಪ್ರಯಾಣ ದರವನ್ನು ಭಾರೀ ಏರಿಕೆ ಮಾಡಲಾಗಿದೆ. ಅದರಲ್ಲೂ ಅಂತಿಮ ಹಂತದ ಪ್ರಯಾಣ ದರ ಶೇ.50ರಷ್ಟು ಹೆಚ್ಚಿಸಲಾಗಿದೆ.

ನಿರ್ವಹಣಾ ವೆಚ್ಚ ಹೆಚ್ಚಾದ ಕಾರಣದಿಂದಾಗಿ ಮೆಟ್ರೋ ರೈಲು ಪ್ರಯಾಣವನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ. ಅಲ್ಲದೆ, ಪ್ರಯಾಣ ದರ ಹೆಚ್ಚಳ ಸಂಬಂಧ ರಚಿಸಲಾಗಿದ್ದ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯ ಸಮಿತಿ ಶಿಫಾರಸಿನ ಮೇಲೆ ದರ ಏರಿಕೆ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಇಂದಿನಿಂದಲೇ ಜಾರಿ:

ನಮ್ಮ ಮೆಟ್ರೋ ಪ್ರಯಾಣ ದರ 2017ರಲ್ಲಿ ಏರಿಕೆ ಮಾಡಿದ ನಂತರದಿಂದ ದರ ಏರಿಕೆ ಮಾಡಿಲ್ಲ. ಹೀಗಾಗಿ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ ಎಂಬುದು ಬಿಎಂಆರ್‌ಸಿಎಲ್‌ ವಾದವಾಗಿದೆ. ಮೊದಲ 2 ಕಿ.ಮೀ. ಪ್ರಯಾಣ ದರ ₹10 ಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಉಳಿದಂತೆ 2ರಿಂದ 4 ಕಿ.ಮೀ. ಪ್ರಯಾಣದ ದರವನ್ನು ₹15 ರಿಂದ ₹20ಕ್ಕೆ ಹೆಚ್ಚಿಸಲಾಗಿದೆ. ಹೀಗೆ ಪ್ರತಿ ಹಂತದ ಪ್ರಯಾಣಕ್ಕೂ ಕನಿಷ್ಠ ₹5ರಿಂದ ಗರಿಷ್ಠ ₹20 ವರೆಗೆ ಹೆಚ್ಚಿಸಲಾಗಿದೆ. ಅದೇ ರೀತಿ ಅಂತಿಮ ಹಂತದ ಅಂದರೆ 30 ಕಿ.ಮೀ.ಗೂ ಹೆಚ್ಚಿನ ಪ್ರಯಾಣದ ದರವನ್ನು ₹60ರಿಂದ ₹90ಕ್ಕೆ ಹೆಚ್ಚಿಸಲಾಗಿದೆ. ಈ ನೂತನ ದರ ಭಾನುವಾರದಿಂದಲೇ ಜಾರಿಗೊಳ್ಳಲಿದೆ.ಸ್ಮಾರ್ಟ್‌ ಕಾರ್ಡ್‌ಗೆ ಹೆಚ್ಚುವರಿ ರಿಯಾಯಿತಿ

ಇದೇ ವೇಳೆ ಸ್ಮಾರ್ಟ್‌ಕಾರ್ಡ್‌ ಬಳಕೆದಾರಿಗೆ ನೀಡುತ್ತಿದ್ದ ರಿಯಾಯಿತಿಯನ್ನು ಹೆಚ್ಚಿಸಿದೆ. ಸದ್ಯ ಸ್ಮಾರ್ಟ್‌ ಕಾರ್ಡ್‌ ಬಳಕೆದಾರರಿಗೆ ಶೇ.5ರಷ್ಟು ರಿಯಾಯಿತಿ ಸಿಗುತ್ತಿತ್ತು. ‘ಪೀಕ್‌ ಅವರ್‌’ ಅಲ್ಲದ ಅವಧಿಯಲ್ಲಿ ಪ್ರಯಾಣಿಸಿದರೆ ಮಾತ್ರ ಹೆಚ್ಚುವರಿಯಾಗಿ ಶೇ.5ರಷ್ಟು (ಒಟ್ಟು ಶೇ.10) ರಿಯಾಯಿತಿ ಸಿಗಲಿದೆ. ಅಂದರೆ ಕಾರ್ಯಾಚರಣೆ ಆರಂಭದಿಂದ ಬೆಳಗ್ಗೆ 8 ಗಂಟೆವರೆಗೆ, ಮಧ್ಯಾಹ್ನ 12ರಿಂದ 4 ಗಂಟೆ ಹಾಗೂ ರಾತ್ರಿ 9 ಗಂಟೆ ನಂತರ ಪ್ರಯಾಣಿಸುವವರಿಗೆ ಈ ರಿಯಾಯಿತಿ ಸಿಗಲಿದೆ. ಈ ರಿಯಾಯಿತಿ ರಾಷ್ಟ್ರೀಯ ರಜಾ ದಿನದಲ್ಲೂ ದೊರಕುವಂತೆ ಮಾಡಲಾಗಿದೆ.ಆದರೆ, ಈವರೆಗೆ ಸ್ಮಾರ್ಟ್‌ಕಾರ್ಡ್‌ಗಳಲ್ಲಿ ಕನಿಷ್ಠ ಮೊತ್ತ ₹50 ಇದ್ದರೆ ಸಾಕಾಗುತ್ತಿತ್ತು. ಅದನ್ನು ₹90ಕ್ಕೆ ಹೆಚ್ಚಳ ಮಾಡಲಾಗಿದೆ. ಅದರೊಂದಿಗೆ ಗುಂಪು ಟಿಕೆಟ್‌ಗಳಲ್ಲಿ ರಿಯಾಯಿತಿ ಹೆಚ್ಚಿಸಲಾಗಿದ್ದು, 25ರಿಂದ 99 ಜನರು ಒಟ್ಟಿಗೆ ಟಿಕೆಟ್‌ ಖರೀದಿಸಿದರೆ ಶೇ.10ರಿಂದ ಶೇ.15ಕ್ಕೆ ರಿಯಾಯಿತಿ ಹೆಚ್ಚಿಸಲಾಗಿದೆ. 1 ಸಾವಿರಕ್ಕೂ ಹೆಚ್ಚಿನ ಗುಂಪಿಗೆ ಶೇ.20ರಿಂದ ಶೇ.25ರಷ್ಟು ಹೆಚ್ಚಳ ಮಾಡಲಾಗಿದೆ.ಕ್ಯೂಆರ್‌ ಕೋಡ್‌

ರಿಯಾಯಿತಿ ರದ್ದು

ಕ್ಯೂಆರ್‌ ಕೋಡ್‌ ಬಳಕೆದಾರರಿಗೆ ಇದ್ದ ಶೇಕಡ 5ರ ರಿಯಾಯಿತಿಯನ್ನು ರದ್ದು ಮಾಡಲಾಗಿದೆ. ಹಾಗೆಯೇ, ಪ್ರವಾಸಿ ಕಾರ್ಡ್‌ಗಳ ದರವನ್ನೂ ಪರಿಷ್ಕರಿಸಲಾಗಿದ್ದು, ಒಂದು ದಿನದ ಕಾರ್ಡ್‌ಗೆ ₹200 ರಿಂದ ₹300, 3 ದಿನಗಳ ಕಾರ್ಡ್‌ಗೆ ₹400ರಿಂದ ₹600 ಹಾಗೂ 5 ದಿನಗಳ ಕಾರ್ಡ್‌ ದರ ₹600 ರಿಂದ ₹800ಕ್ಕೆ ಏರಿಕೆ ಮಾಡಲಾಗಿದೆ.

ಪ್ರಯಾಣ ದರ ಹೆಚ್ಚಳದ ವಿವರ

ದೂರ (ಕಿ.ಮೀ.)ಪರಿಷ್ಕೃತ ದರ

0-2₹10

2-4₹20

4-6₹30

6-8₹40

8-10 ₹50

10-15₹60

15-20₹70

20-25₹80

25 ಕಿ.ಮೀ. ಮೇಲ್ಪಟ್ಟು₹90