ಸಾರಾಂಶ
ದಾವಣಗೆರೆ: ಕುಮಾರನಹಳ್ಳಿ- ಅರಕೆರೆ ಮಾರ್ಗಮಧ್ಯೆ ಮಾಜಿ ಸಚಿವ ಬಿ.ಸಿ. ಪಾಟೀಲ್ ಅಳಿಯ ಕೆ.ಜಿ. ಪ್ರತಾಪ್ ಕುಮಾರ್ ಕಾರಿನಲ್ಲಿ ವಿಷ ಸೇವಿಸಿ, ಅಸ್ವಸ್ಥವಾಗಿರುವ ಬಗ್ಗೆ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಅಸ್ವಸ್ಥರಾಗಿದ್ದ ಪ್ರತಾಪ್ ಅವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಗೆ ಕರೆದೊಯ್ಯುವ ವೇಳೆಯೇ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢೀಕರಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಹೇಳಿದರು.
ನಗರದ ಎಸ್‌ಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಗಿರಿ ತಾಲೂಕು ಕತ್ತಲಗೆರೆ ಗ್ರಾಮದ ಕೆ.ಜಿ. ಪ್ರತಾಪ ಕುಮಾರ ಶಿವಮೊಗ್ಗ ಕಡೆಯಿಂದ ಹೊನ್ನಾಳಿ ಕಡೆ ಬರುತ್ತಿದ್ದಾಗ ಈ ಅವಘಡ ನಡೆದಿದೆ. ಈ ಸಂಬಂಧ ಸಂಬಂಧಿಗಳು ಕೊಟ್ಟ ಮಾಹಿತಿ ಮೇರೆಗೆ ತಕ್ಷಣವೇ ಸ್ಥಳಕ್ಕೆ ಧಾವಿಸಿ ಆಸ್ಪತ್ರೆಗೆ ದಾಖಲಿಸುವ ಕೆಲಸವನ್ನು ನಮ್ಮ ಪೊಲೀಸ್ ಸಿಬ್ಬಂದಿ ಮಾಡಿದ್ದಾರೆ ಎಂದರು.ಮೃತ ಪ್ರತಾಪ್ ಕುಮಾರ ವ್ಯವಸಾಯ ಮತ್ತು ವ್ಯವಹಾರ ಮಾಡುತ್ತಿದ್ದರು. ಮೇಲ್ನೋಟಕ್ಕೆ ವೈಯಕ್ತಿಕ ಸಮಸ್ಯೆಯಿಂದ ಮನನೊಂದು ಪೆಸ್ಟಿಸೈಡ್ಸ್ ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪೆಸ್ಟಿಸೈಡ್ಸ್ ತೀವ್ರ ವಿಷವಾಗಿದ್ದರಿಂದ ತೀವ್ರ ಸುಸ್ತಾದ ಪರಿಣಾಮ ಸೇವಿಸಿದ ನಂತರ ಚಾಲನೆ ಮಾಡಿಕೊಂಡು ಬಂದಿದ್ದರಾ ಅಥವಾ ಕಾರನ್ನು ರಸ್ತೆಯ ಬದಿ ನಿಲ್ಲಿಸಿ, ಸೇವಿಸಿದ್ದಾರಾ, ಆತ್ಮಹತ್ಯೆಗೆ ಏನು ಕಾರಣ ಹೀಗೆ ಮುಂದಿನ ತನಿಖೆ ನಂತರವೇ ಸತ್ಯಾಸತ್ಯತೆ ತಿಳಿಯಬೇಕಿದೆ ಎಂದು ಎಸ್‌ಪಿ ಹೇಳಿದರು.