ಸಾರಾಂಶ
ಹನೂರಿನಲ್ಲಿ ಕೃತಜ್ಞತಾ ಸಭೆ । ಕೈ ಅಪಪ್ರಚಾರದಿಂದ ಬಿಜೆಪಿಗೆ ಸೋಲುಕಾಂಗ್ರೆಸ್-ಬಿಜೆಪಿ
ಕನ್ನಡಪ್ರಭ ವಾರ್ತೆ ಹನೂರುಸಂವಿಧಾನ ವಿರೋಧಿ ಕೆಲಸ ಮಾಡುತ್ತಿರುವುದು ಕಾಂಗ್ರೆಸ್‌ನವರು. ಸಂವಿಧಾನದ ಪುಸ್ತಕ ತೋರಿಸಿ ಅಧಿಕಾರಕ್ಕೆ ಬಂದು ಎಸ್ಸಿ-ಎಸ್ಟಿ ಹಣವನ್ನು ದುರುಪಯೋಗ ಮಾಡುತ್ತಿದ್ದಾರೆ. ಇವರು ನಿಜವಾದ ಸಂವಿಧಾನ ವಿರೋಧಿಗಳು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಪಟ್ಟಣದ ವಾಸವಿ ಮಹಲ್ ಕಲ್ಯಾಣ ಮಂಟಪದಲ್ಲಿ ಹನೂರು ಮತ್ತು ಮಲೆ ಮಹದೇಶ್ವರ ಬಿಜೆಪಿ ಮಂಡಲ ವತಿಯಿಂದ ಕಾರ್ಯಕರ್ತರಿಗೆ ಹಮ್ಮಿಕೊಳ್ಳಲಾಗಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದರು.ಭಾರತದಲ್ಲಿ ಸಂವಿಧಾನವನ್ನು ರಕ್ಷಣೆ ಮಾಡುತ್ತಿರುವುದು ಬಿಜೆಪಿ. ಆದರೆ ಕಾಂಗ್ರೆಸ್ ಪಕ್ಷದವರ ಅಪಪ್ರಚಾರದಿಂದ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗೆ ಸೋಲಾಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೊದಲ ವರ್ಷವೇ ಸರ್ಕಾರದ 5 ಗ್ಯಾರಂಟಿ ಯೋಜನೆಗೆ ಎಸ್‌ಸಿಪಿ ಮತ್ತು ಟಿಎಸ್‌ಪಿ ಹಣವನ್ನು ಬಳಕೆ ಮಾಡಿಕೊಳ್ಳುವ ಮೂಲಕ ಸಂವಿಧಾನದ ಆಶಯಕ್ಕೆ ಧಕ್ಕೆ ತಂದಿದೆ. ಈ ಸಾಲಿನಲ್ಲಿಯೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನಾಂಗದವರಿಗೆ ಮೀಸಲಿಟ್ಟಿದ್ದ 14,562 ಕೋಟಿ ರು. ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುವ ಮೂಲಕ ದ್ರೋಹ ಮಾಡಿದೆ ಎಂದು ದೂರಿದರು.
ಗರಿಕೆಕಂಡಿಯಿಂದ ಹಂದಿಯೂರು ಗ್ರಾಮದವರೆಗೆ ತಮಿಳುನಾಡು ರಾಜ್ಯದವರು ಅರಣ್ಯವನ್ನು ಅಗಲೀಕರಣ ಮಾಡಿ ರಸ್ತೆ ಅಭಿವೃದ್ಧಿಪಡಿಸಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಸ್ಥಳೀಯ ಶಾಸಕರು ಹಾಗೂ ಸಂಸದರು ಹೆಚ್ಚು ಗಮನ ಹರಿಸಬೇಕು. ಈಗ ದೊಡ್ಡ ಸಾಹೇಬರು ಎಂಪಿ ಯಾಗಿದ್ದಾರಲ್ಲ ಅವರು ಮಾಡಿಸಬೇಕು ಎಂದು ವ್ಯಂಗ್ಯವಾಡಿದರು.ಪರಾಜಿತ ಅಭ್ಯರ್ಥಿ ಎಸ್.ಬಾಲರಾಜು ಮಾತನಾಡಿ, ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಸುಳ್ಳು ಅಪಪ್ರಚಾರಗಳನ್ನು ಮಾಡಿದ್ದರಿಂದ ನನಗೆ ಸೋಲಾಗಿದೆ. ಸಂವಿಧಾನದ ಆಶಯಗಳ ಬಗ್ಗೆ ಮಾತನಾಡುವ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ದಲಿತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಕಿಡಿಕಾರಿದ ಅವರು, ಇಂದಿನ ಸೋಲೆ ಮುಂದಿನ ಗೆಲುವಿಗೆ ಮೆಟ್ಟಿಲಾಗಲಿದೆ. ಇವರ ಅಪಪ್ರಚಾರವೇ ಮುಂದಿನ ದಿನಗಳಲ್ಲಿ ಇವರಿಗೆ ತಿರುಗುಬಾಣವಾಗಲಿದೆ. ಇವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಯುವ ಮುಖಂಡ ನಿಶಾಂತ್ ಮಾತನಾಡಿ, ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದವರ ಅಪಪ್ರಚಾರ ಮಾಡಿದ್ದರಿಂದ ಅತಿ ದೊಡ್ಡ ಸಮಾಜಗಳು ಬಿಜೆಪಿಗೆ ಮತ ನೀಡಲಿಲ್ಲ. ಇದರಿಂದ ನಮ್ಮ ಅಭ್ಯರ್ಥಿಗೆ ಹಿನ್ನಡೆಯಾಗಿದೆ. ಪಕ್ಷದ ಮುಖಂಡರು ಮುಂದಿನ ದಿನಗಳಲ್ಲಿ ಬರುವ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಕಾರ್ಯಕರ್ತರಿಗೆ ಬೆಂಬಲ ನೀಡುವುದಾಗಿ ತಿಳಿಸಿದರು.ಬಿಜೆಪಿ ಹಿರಿಯ ಮುಖಂಡ ಡಾ. ದತ್ತೇಶ್ ಕುಮಾರ್ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್, ಮಂಡಲ ಅಧ್ಯಕ್ಷರಾದ ವೃಷಭೇಂದ್ರ, ಚಂಗವಾಡಿ ರಾಜು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್ ಜತ್ತಿ, ಚಾಮರಾಜನಗರ ಉಸ್ತುವಾರಿ ಪಣೇಶ್, ಮುಖಂಡರಾದ ಡಾ.ಪ್ರೀತನ್ ನಾಗಪ್ಪ, ನೂರೊಂದು ಶೆಟ್ಟಿ, ಜಯಸುಂದ್ರ, ಕೃಷ್ಣೇಗೌಡ, ರಾಮ್ ಚರಣ್, ಅರವಿಂದ್, ಅನಿಲ್, ಮಹೇಶ್, ವಿಜಯ್ ಸೇರಿ ಇತರರಿದ್ದರು.
ಸಮಸ್ಯೆ ಬಗೆಹರಿಸದಿದ್ದರೆ ಪಾದಯಾತ್ರೆಇಂಡಿಗನತ್ತ ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲು ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಇಲಾಖೆಯವರ ಜತೆ ಚರ್ಚೆ ನಡೆಸಿದ್ದೇನೆ. ರಸ್ತೆ ಮಾಡಲು ದೆಹಲಿಯಿಂದ ಅನುಮತಿ ಪಡೆಯಬೇಕಾಗಿದ್ದು, ಈಗಾಗಲೇ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಅವರು ಸಮಸ್ಯೆಯನ್ನು ಬಗೆಹರಿಸದಿದ್ದರೆ ಕೊಟ್ಟ ಮಾತಿನಂತೆ ಅಲ್ಲಿನ ಕಾಡಂಚಿನ ಜನರ ಅಭಿವೃದ್ಧಿಗಾಗಿ ಒತ್ತಾಯಿಸಿ ಮಲೆ ಮಹದೇಶ್ವರ ಬೆಟ್ಟದಿಂದ ಚಾಮರಾಜನಗರದವರೆಗೆ ಪಾದಯಾತ್ರೆ ಮಾಡಿಯೇ ಮಾಡುತ್ತೇನೆ ಎಂದು ಕೊಳ್ಳೇಗಾಲ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್ ಮಹೇಶ್ ಹೇಳಿದರು.