ಸಾರಾಂಶ
ಕೂಡ್ಲೂರು ಗ್ರಾಮದಲ್ಲಿ ಘಟನೆ । ಹೆರಿಗೆ ಸೌಲಭ್ಯವಿರುವ ಸಾರ್ವಜನಿಕ ಆರೋಗ್ಯ ಕೇಂದ್ರ । 24 ಗಂಟೆ ಸೇವೆ ನೀಡಲು ಒತ್ತಾಯಕನ್ನಡಪ್ರಭ ವಾರ್ತೆ ಹನೂರು
24 ಗಂಟೆಗಳ ಹೆರಿಗೆ ಸೌಲಭ್ಯ ಇರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಸ್ಪತ್ರೆ ಸಿಬ್ಬಂದಿ ಆಸ್ಪತ್ರೆಗೆ ಬೀಗ ಜಡಿದು ಹೋಗಿದ್ದರಿಂದ ಚಿಕಿತ್ಸೆಗೆ ಬಂದ ರೋಗಿಗಳು ಪರದಾಡಿದ ಘಟನೆ ತಾಲೂಕಿನ ಗಡಿ ಗ್ರಾಮ ಕೂಡ್ಲೂರು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.ತಾಲೂಕಿನ ಕೂಡ್ಲೂರು ಸರ್ಕಾರಿ ಪ್ರಾಥಮಿಕ ಆಸ್ಪತ್ರೆ ಸಿಬ್ಬಂದಿ ಭಾನುವಾರ ಸಂಜೆ ಬಾಗಿಲು ಮುಚ್ಚಿ ಗೇಟ್‌ಗೆ ಬೀಗ ಜಡಿದು ಹೋಗಿದ್ದರು. ಇದರಿಂದ ಚಿಕಿತ್ಸೆಗೆ ಬಂದ ರೋಗಿಗಳು ಪರದಾಡಿದರು. ಆಸ್ಪತ್ರೆಯಲ್ಲಿ ನಾಮಫಲಕ ಮಾತ್ರ 24 ಗಂಟೆಗಳ ಸೇವೆ ಎಂದಿದ್ದು, ಆದರೆ ನಾಮಫಲಕಕ್ಕೆ ಮಾತ್ರ ಈ ನಿಯಮ ಸೀಮಿತವಾಗಿದೆ.
24 ಗಂಟೆಗಳ ಸೇವೆಗೆ ನಾಗರಿಕರ ಆಗ್ರಹ:ಸರ್ಕಾರಿ ಆಸ್ಪತ್ರೆಯನ್ನೇ ನಂಬಿರುವ ಕೂಡ್ಲೂರು ಗ್ರಾಮದ ಸುತ್ತಮುತ್ತಲಿನ ಜನರು ರಾತ್ರಿ ವೇಳೆಯಲ್ಲಿ ಬಸ್ಸಿನ ವ್ಯವಸ್ಥೆ, ಸರ್ಕಾರಿ ಆಸ್ಪತ್ರೆಯ ಸೇವೆಯೂ ಇಲ್ಲದೆ ತೊಂದರೆ ಅನುಭವಿಸಬೇಕಾಗಿದ್ದು, ಆರೋಗ್ಯ ಇಲಾಖೆ ಕೇಂದ್ರದಲ್ಲಿ 24 ಗಂಟೆಗಳ ಸೇವೆ ಸಲ್ಲಿಸುವ ನಿವಾಸಿ ವೈದ್ಯಾಧಿಕಾರಿಗಳನ್ನು ನೇಮಿಸುವಂತೆ ಗ್ರಾಮಸ್ಧರು ಒತ್ತಾಯಿಸುತ್ತಾರೆ. ಕೋಟ್..
ಆರೋಗ್ಯ ಇಲಾಖೆ ಅಧಿಕಾರಿಗಳು ಗಡಿ ಗ್ರಾಮ ಕೂಡ್ಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು. 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಸಿಬ್ಬಂದಿ ವರ್ಗವನ್ನು ನೇಮಕ ಮಾಡಬೇಕು. ಇಲ್ಲದಿದ್ದರೆ ಸಂಘ-ಸಂಸ್ಥೆಗಳ ಜೊತೆಗೂಡಿ ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ.ಅಮ್ಜದ್ ಖಾನ್, ಅಧ್ಯಕ್ಷ, ರಾಜ್ಯ ರೈತ ಸಂಘ, ಹನೂರು ತಾಲೂಕು ಘಟಕ. ಕೋಟ್..
ಭಾನುವಾರ ರಾತ್ರಿ ಕೂಡ್ಲೂರು ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ಹಾಜರಿರದ ಬಗ್ಗೆ ಕಾರಣ ಕೇಳಲಾಗಿದೆ. ಈ ತಿಂಗಳ ಕೊನೆಯಲ್ಲಿ ಇನ್ನೂ ಒಬ್ಬ ಆರೋಗ್ಯ ಸಿಬ್ಬಂದಿಯನ್ನು ನೇಮಕ ಮಾಡುವ ಮೂಲಕ 24 ಗಂಟೆಗಳ ಸೇವೆ ನೀಡಲು ಕ್ರಮ ಕೈಗೊಳ್ಳಲಾಗುವುದು.ಡಾ. ಚಿದಾನಂದ, ಡಿಎಚ್‌ಒ, ಚಾಮರಾಜನಗರ ಜಿಲ್ಲೆ. ಫೋಟೋ: 8ಸಿಎಚ್ಎನ್11
ಹನೂರು ತಾಲೂಕಿನ ಕೂಡ್ಲೂರು ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಭಾನುವಾರ ರಾತ್ರಿ ಗೇಟಿಗೆ ಬೀಗ ಹಾಕಿದ್ದರಿಂದ ರೋಗಿಗಳ ಆಸ್ಪತ್ರೆಯ ಮುಂಭಾಗ ನಿಂತಿರುವುದು.