ಲೋಕಸಭಾ ಚುನಾವಣೆ ಬಳಿಕ ಭಾರತ ಹಿಂದೂ ರಾಷ್ಟ್ರ: ಪ್ರಮೋದ ಮುತಾಲಿಕ್

| Published : Feb 20 2024, 01:52 AM IST

ಲೋಕಸಭಾ ಚುನಾವಣೆ ಬಳಿಕ ಭಾರತ ಹಿಂದೂ ರಾಷ್ಟ್ರ: ಪ್ರಮೋದ ಮುತಾಲಿಕ್
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಾಮ ಮಂದಿರಕ್ಕಾಗಿ ಸಂಘ ಪರಿವಾರ ಹಾಗೂ ಬಿಜೆಪಿ ಹೋರಾಟ ನಡೆಸಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ಸಿನವರಿಗೆ ಶ್ರೀರಾಮನ ಹೆಸರು ತೆಗೆದುಕೊಳ್ಳಲು ಯೋಗ್ಯತೆ ಇಲ್ಲ.

ಹೊಸಪೇಟೆ: 2024ರ ಲೋಕಸಭೆ ಚುನಾವಣೆ ಬಳಿಕ ದೇಶ ಹಿಂದೂ ರಾಷ್ಟ್ರ ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿಚಾರಧಾರೆ ಹಿಂದೂ ರಾಷ್ಟ್ರದ ಕಡೆಗೆ ಇದೆ. ಈ ಹಿಂದಿನ ಪ್ರಧಾನಿಗಳು ದರ್ಗಾಕ್ಕೆ ಹೋಗಿದ್ದಾರೆ. ಮೋದಿ ಅವರು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಅವರು ಹಿಂದೂ ರಾಷ್ಟ್ರದ ಪರವಾಗಿದ್ದಾರೆ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ಹಿಂದೂ ರಾಷ್ಟ್ರವಾದರೂ ಮುಸ್ಲಿಮರು, ಕ್ರೈಸ್ತರು ಸೇರಿದಂತೆ ಇನ್ನಿತರ ಅಲ್ಪಸಂಖ್ಯಾತರು ದೇಶದಲ್ಲೇ ಇರಲಿದ್ದಾರೆ. ಆದರೆ, ಹಿಂದೂ ರಾಷ್ಟ್ರವಾಗಿ ಭಾರತ ನೂರಕ್ಕೆ ನೂರಷ್ಟು ಪರಿವರ್ತನೆ ಆಗಲಿದೆ ಎಂದರು.

ರಾಮರಾಜ್ಯ ಮಾಡಲು ಲಾಭ: ಶ್ರೀರಾಮ ಮಂದಿರಕ್ಕಾಗಿ ಸಂಘ ಪರಿವಾರ ಹಾಗೂ ಬಿಜೆಪಿ ಹೋರಾಟ ನಡೆಸಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ಸಿನವರಿಗೆ ಶ್ರೀರಾಮನ ಹೆಸರು ತೆಗೆದುಕೊಳ್ಳಲು ಯೋಗ್ಯತೆ ಇಲ್ಲ. ಕಾಂಗ್ರೆಸ್ಸಿನವರು ಬಾಬರ್‌ ಪರ ನಿಂತವರು. ನಾವು ರಾಮರಾಜ್ಯ ನಿರ್ಮಾಣಕ್ಕಾಗಿ ರಾಜಕೀಯ ಲಾಭ ಪಡೆದುಕೊಳ್ಳುತ್ತೇವೆ, ಸ್ವಾರ್ಥಕ್ಕಾಗಿ ಅಲ್ಲ. ಮಂದಿರಕ್ಕಾಗಿ ಹೋರಾಟ ನಡೆಸಿದ್ದೇವೆ. ಇದರಲ್ಲಿ ಏನು ತಪ್ಪಿಲ್ಲ ಎಂದರು.

ರಾಜ್ಯದಲ್ಲಿ 100 ಶ್ರೀರಾಮಮಂದಿರಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಘೋಷಣೆ ಮಾಡಿದ್ದ ಕಾಂಗ್ರೆಸ್ಸಿನವರು ಬಜೆಟ್‌ನಲ್ಲಿ ನಯಾಪೈಸೆ ಹಣ ನೀಡಿಲ್ಲ. ಕ್ರೈಸ್ತರಿಗೆ ₹200 ಕೋಟಿ ಮೀಸಲಿದ್ದಾರೆ. ₹100 ಕೋಟಿ ವಕ್ಫ್‌ ಬೋರ್ಡ್‌, ₹10 ಕೋಟಿ ಮಂಗಳೂರಿನ ಹಜ್ ಬೋರ್ಡ್‌ಗೆ ಇಟ್ಟಿದ್ದಾರೆ. ಆದರೆ, ಶ್ರೀರಾಮಮಂದಿರಕ್ಕೆ ₹1 ಕೋಟಿಯನ್ನೂ ಇಟ್ಟಿಲ್ಲ. ಇವರು ರಾಮನ ಜಪ ಮಾಡಿ ದುರ್ಲಾಭ ಪಡೆಯಲು ಹೊರಟಿದ್ದಾರೆ ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.