ಸಾರಾಂಶ
ಬಳ್ಳಾರಿ: ಬೇಸಿಗೆ ರಜೆಯ ಬಳಿಕ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಶುಕ್ರವಾರ ಪುನರಾರಂಭಗೊಂಡವು. ರಜೆಯ ಮಜಾದ ಗುಂಗಿನಲ್ಲಿದ್ದ ಚಿಣ್ಣರು ಭಾರದ ಮನಸಿನ ಹೆಜ್ಜೆಯೊಂದಿಗೆ ಶಾಲೆಯತ್ತ ಹೆಜ್ಜೆ ಹಾಕಿದರೆ, ಕೆಲ ವಿದ್ಯಾರ್ಥಿಗಳು ಸಂಭ್ರಮದಿಂದಲೇ ಶಾಲೆಗಳ ಅಂಗಳದತ್ತ ಜಿಗಿಯುವ ದೃಶ್ಯಗಳು ಕಂಡು ಬಂದವು.
ಶಾಲೆಗಳ ಪುನಾರಂಭ ಹಿನ್ನೆಲೆ ಶಾಲೆಗಳನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಮಕ್ಕಳ ಕೈ ಹಿಡಿದು ಪೋಷಕರು ಶಾಲೆಯತ್ತ ತೆರಳುತ್ತಿರುವುದು ಕಂಡು ಬಂತು. ಶಾಲೆಯ ಅಂಗಳಕ್ಕೆ ವಿದ್ಯಾರ್ಥಿಗಳು ಆಗಮಿಸುತ್ತಿದ್ದಂತೆಯೇ ಶಿಕ್ಷಕರು ಹೂಗುಚ್ಚ ನೀಡಿ ಸ್ವಾಗತಿಸಿಕೊಂಡರು. ಶಾಲಾರಂಭದ ಮೊದಲ ದಿನವೇ ಮಕ್ಕಳಿಗೆ ಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಕಾರ್ಯ ನಡೆಯಿತು. ಹೊಸ ಸಮವಸ್ತ್ರ ಕೈಗೆ ಸಿಗುತ್ತಿದ್ದಂತೆಯೇ ಮಕ್ಕಳು ಹಿರಿಹಿರಿ ಹಿಗ್ಗಿದರು. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಶುಕ್ರವಾರ ಅಧಿಕೃತವಾಗಿ ಶೈಕ್ಷಣಿಕ ವರ್ಷ ಆರಂಭಿಸಿದವು. ಖಾಸಗಿ ಶಾಲೆಗಳು ಈಗಾಗಲೇ ಶುರುಗೊಂಡಿವೆ.ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಆರಂಭ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಮೇ 29ರಿಂದಲೇ ಅಗತ್ಯ ಸಿದ್ಧತೆ ಮಾಡಿಕೊಂಡಿತ್ತು. ಶಾಲೆಗಳ ಸ್ವಚ್ಚತೆ, ಕುಡಿವನೀರು, ಶೌಚಾಲಯ ಸೇರಿದಂತೆ ಅಗತ್ಯ ಸೌಕರ್ಯಗಳ ಕುರಿತು ಪರಿಶೀಲನೆ ಹಾಗೂ ದುರಸ್ತಿ ಕಾರ್ಯ ನಡೆದಿತ್ತು.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಹಂತ ಹಂತವಾಗಿ ಬಂದಿರುವ ಪುಸ್ತಕ ಹಾಗೂ ಸಮವಸ್ತ್ರಗಳನ್ನು ಜೋಡಿಸಿಟ್ಟುಕೊಳ್ಳುವುದು ಹಾಗೂ ಶಾಲೆ ಆರಂಭದ ದಿನದಂದು ಎಸ್‌ಡಿಎಂಸಿ ಸೇರಿದಂತೆ ಗ್ರಾಮದ ಮುಖಂಡರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ವಿತರಣೆ ಸಮಾರಂಭ ಹಮ್ಮಿಕೊಳ್ಳುವುದರ ಕುರಿತು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮೇ 31ರಿಂದ ಶಾಲೆಗಳು ಶುರುಗೊಳ್ಳಲಿದ್ದು, ಪೋಷಕರು ಮಕ್ಕಳನ್ನು ಕಳಿಸಿಕೊಡುವಂತೆ ಶಿಕ್ಷಕರು ಮನವರಿಕೆ ಮಾಡಿಕೊಟ್ಟಿದ್ದರು. ಅಂತೆಯೇ ಶುಕ್ರವಾರ ಶಾಲೆಗಳನ್ನು ಸಿಂಗರಿಸಿಕೊಂಡು ಮಕ್ಕಳ ಆಗಮನಕ್ಕಾಗಿ ಶಿಕ್ಷಕರು ಎದುರುಗೊಂಡರು.ಜೂನ್ ತಿಂಗಳು ಪೂರ್ತಿ ದಾಖಲಾತಿ ಪ್ರಕ್ರಿಯೆ ನಡೆಯಲಿದೆ. ಮುಂದಿನ ತರಗತಿಗೆ ಉತ್ತೀರ್ಣಗೊಳ್ಳುವ ಮಕ್ಕಳ ನೋಂದಣಿ ಸೇರಿದಂತೆ ಹೊಸದಾಗಿ ಮಕ್ಕಳ ದಾಖಲಾತಿಗೆ ಅಗತ್ಯ ಕ್ರಮ ವಹಿಸಲಾಗಿದೆ. ಈ ಬಾರಿ ಹೆಚ್ಚು ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು ಬೇಕಾದ ಸಿದ್ಧತೆ ಹಾಗೂ ಕ್ರಮಗಳನ್ನು ಕೈಗೊಳ್ಳುವಂತೆ ಆಯಾ ವಲಯದ ಶಿಕ್ಷಣಾಧಿಕಾರಿಗಳು ಹಾಗೂ ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ ಎಂದು ಡಿಡಿಪಿಐ ಡಿ.ಉಮಾದೇವಿ ಅವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 2024/25ನೇ ಸಾಲಿನಲ್ಲಿ ಕೆಕೆಆರ್‌ಡಿಬಿ ಯೋಜನೆ ಮೂಲಕ ನೂತನವಾಗಿ 119 ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಶಿಕ್ಷಣ ನೀಡಲಾಗುತ್ತಿದ್ದು, ಶುಕ್ರವಾರ ಇಂಗ್ಲೀಷ್ ಮಾಧ್ಯಮ ಶಾಲೆಗಳು ಸಹ ಶುರುಗೊಂಡವು. ಈಗಾಗಲೇ ಎಲ್‌ಕೆಜಿಗೆ 566, ಯುಕೆಜಿಗೆ 363, ಇಂಗ್ಲೀಷ್ ಮಾಧ್ಯಮದ 1ನೇ ತರಗತಿಗೆ 312 ಮಕ್ಕಳು ಪ್ರವೇಶ ಪಡೆದಿದ್ದಾರೆ. ಇದರಿಂದ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಓದಿಸಬೇಕು ಎಂಬ ಬಡವರ ಕನಸು ನನಸಾಗಿದೆ. ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಕಲಿಕೆಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ನಿಲುವು ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆದಂತಾಗಿದೆ.ಜಿಲ್ಲೆಯಲ್ಲಿ ಶಾಲೆಗಳು ಪುನಾರಂಭಗೊಂಡಿದ್ದು, ಮಕ್ಕಳು ಸಂತಸದಿಂದಲೇ ಶಾಲೆಗೆ ಬಂದಿದ್ದಾರೆ. ಮಕ್ಕಳಿಗೆ ಸಿಹಿ ವಿತರಣೆ ಮಾಡಿ ಶಾಲೆಗೆ ಆಹ್ವಾನಿಸಿಕೊಳ್ಳಲಾಗಿದೆ. ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ ಮತ್ತಷ್ಟೂ ಉತ್ತಮ ಕಲಿಕೆಗೆ ಕ್ರಮ ವಹಿಸುತ್ತೇವೆ ಎನ್ನುತ್ತಾರೆ ಡಿಡಿಪಿಐ ಉಮಾದೇವಿ.