ಕೆಂಪೇಗೌಡ ಲೇಔಟ್‌ಗೆ ಮತ್ತೆ 3973 ಎಕರೆ ವಶ

| Published : Mar 22 2024, 02:15 AM IST / Updated: Mar 22 2024, 12:36 PM IST

ಸಾರಾಂಶ

ಕೆಂಪೇಗೌಡ ಲೇಔಟ್‌ಗೆ ಮತ್ತೆ ಬಿಡಿಎ 3973 ಎಕರೆ ಜಾಗ ವಶಕ್ಕೆ ಪಡೆಯಲು ನಿರ್ಧರಿಸಿದೆ. ಇದರಲ್ಲಿ ಪೆರಿಫೆರಲ್‌ ರಸ್ತೆಗೆ ಜಾಗಕೊಟ್ಟ ರೈತರಿಗೆ ಪರಿಹಾರ ನೀಡಲು ಚಿಂತನೆ ನಡೆಸಿದೆ.

ಸಂಪತ್‌ ತರೀಕೆರೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಅಧಿಸೂಚಿತ ಪ್ರದೇಶದ ವ್ಯಾಪ್ತಿಯಿಂದ ಕೈಬಿಟ್ಟಿದ್ದ ಭೂಮಿಯೂ ಸೇರಿದಂತೆ ಬರೋಬ್ಬರಿ 3973 ಎಕರೆ ರೈತರ ಭೂಮಿಯನ್ನು ಮತ್ತೆ ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಿದ್ಧತೆ ನಡೆಸಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣದಲ್ಲಿ ಹಿಂದಿನ ಅಂತಿಮ ಅಧಿಸೂಚನೆಯಲ್ಲಿ ಕೈಬಿಟ್ಟಿರುವ ಜಮೀನು ವಿವರಗಳು ಮತ್ತು ಇದುವರೆಗೂ ಭೂಸ್ವಾಧೀನವಾಗದೇ ಇರುವ ಜಮೀನುಗಳನ್ನು ಸೇರಿಸಿ ಸಮಗ್ರವಾಗಿ ಬಡಾವಣೆ ನಿರ್ಮಿಸಲು ಬಿಡಿಎ ನಿರ್ಧರಿಸಿದೆ. 

ಹೀಗಾಗಿ, ಸಮಗ್ರ ನಿರ್ಮಾಣ ಹಾಗೂ ಸಂಪರ್ಕ ರಸ್ತೆಗಳ ನಿರ್ಮಾಣಕ್ಕಾಗಿ ಬಡಾವಣೆಯ ಸುತ್ತಮುತ್ತ 11 ಗ್ರಾಮಗಳಲ್ಲಿ ಒಟ್ಟು 2105.35 ಎಕರೆ (ಅಂತಿಮ ಅಧಿಸೂಚನೆಯಲ್ಲಿ ಕೈಬಿಟ್ಟಿರುವ 827 ಎಕರೆ 16 ಗುಂಟೆ ಜಮೀನು ಸೇರಿದಂತೆ) ಅಧಿಸೂಚನೆ ಹೊರಡಿಸಿ ಭೂಸ್ವಾಧೀನಪಡಿಸಿಕೊಳ್ಳಲು ಬಿಡಿಎ ತಯಾರಿ ನಡೆಸಿದೆ.

ಜೊತೆಗೆ ಬಡಾವಣೆಯ ಸುತ್ತಮುತ್ತಲ ಯಲಚೆಗುಪ್ಪೆ, ಯಲಚೆಗುಪ್ಪೆ-ರಾಮಪುರ, ಚೆನ್ನೇನಹಳ್ಳಿ ಮತ್ತು ಎಂ.ಕೃಷ್ಣಸಾಗರ ಗ್ರಾಮಗಳಲ್ಲಿ 1868 ಎಕರೆ ಭೂಮಿಯೂ ಸೇರಿದಂತೆ ಒಟ್ಟು 3973 ಎಕರೆ ಭೂ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದೆ. 

ಅದಕ್ಕಾಗಿ ಸರ್ವೆ ನಡೆಸಲು ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಲು ಸಿದ್ಧತೆ ನಡೆಸಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ. ಪೆರಿಫೆರಲ್‌ ಸಂತ್ರಸ್ತ

ರೈತರಿಗೆ ಪರಿಹಾರ?
ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ (ಪೆರಿಫೆರಲ್‌ ರಿಂಗ್‌ ರೋಡ್‌) ಯೋಜನೆಗೆ ಜಮೀನು ನೀಡುವ ರೈತರಿಗೆ ಮತ್ತು ಭೂಮಾಲಿಕರಿಗೆ 40:60 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ಭೂಮಿಯನ್ನು ಪರಿಹಾರವಾಗಿ ನೀಡಬೇಕಾಗುತ್ತದೆ. 

ಅದಕ್ಕಾಗಿ ಡಾ। ಶಿವರಾಮ ಕಾರಂತ ಬಡಾವಣೆ ಹಾಗೂ ಮುಂದುವರೆದ ಬಡಾವಣೆ (ಎಕ್ಸ್‌ಟೆನ್ಷನ್‌) ಮತ್ತು ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಭೂಮಿ ಸ್ವಾಧೀನಪಡಿಸಿಕೊಂಡು ಅಭಿವೃದ್ಧಿ ಪಡಿಸುವ ಮೂಲಕ ಪಿಆರ್‌ಆರ್‌ ರೈತರಿಗೆ ಪರಿಹಾರದ ರೂಪದಲ್ಲಿ ನಿವೇಶನ ಕೊಡುವ ಉದ್ದೇಶವನ್ನು ಬಿಡಿಎ ಹೊಂದಿದೆ.

ಅದಕ್ಕಾಗಿ ಕೆಂಪೇಗೌಡ ಬಡಾವಣೆಯಲ್ಲಿ ಅಂತಿಮ ಅಧಿಸೂಚನೆಯಲ್ಲಿ ಕೈಬಿಟ್ಟಿರುವ ಜಮೀನು ಮತ್ತು ಇದುವರೆಗೂ ಭೂಸ್ವಾಧೀನವಾಗದೇ ಇರುವ ಜಮೀನು ಹಾಗೂ ಲೇಔಟ್‌ನ ಸುತ್ತಮುತ್ತಲ ಗ್ರಾಮಗಳ ಜಮೀನು ಸೇರಿದಂತೆ 3973 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾಧಿಕಾರ ಯೋಜಿಸಿದೆ. 

ಇಲ್ಲಿ ಪಡೆದ ಭೂಮಿಯನ್ನು ಅಭಿವೃದ್ಧಿಪಡಿಸಿ ಪಿಆರ್‌ಆರ್‌ಗೆ ಭೂಮಿ ಕೊಟ್ಟಂತಹ ರೈತರಿಗೆ ನಿವೇಶನಗಳನ್ನು ಪರಿಹಾರವಾಗಿ ಕೊಡುವ ಚಿಂತನೆಯೂ ಪ್ರಾಧಿಕಾರಕ್ಕಿದೆ ಎನ್ನಲಾಗಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆಂದು 2014ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ 12 ಗ್ರಾಮಗಳಲ್ಲಿ ಸುಮಾರು 4,043 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿತ್ತು. 

ಆದರೆ ಪ್ರಸ್ತುತ 2694 ಎಕರೆ ಭೂಸ್ವಾಧೀನಪಡಿಸಿಕೊಂಡು ಎಂಜಿನಿಯರಿಂಗ್ ತಂಡಕ್ಕೆ ಹಸ್ತಾಂತರಿಸಲಾಗಿದ್ದು 2,200 ಎಕರೆಯಲ್ಲಿ ಸುಮಾರು 22 ಸಾವಿರ ನಿವೇಶನಗಳನ್ನು ನಿರ್ಮಿಸಲಾಗಿದೆ. 

ಈ ಪೈಕಿ ಸಾರ್ವಜನಿಕರಿಗೆ 10 ಸಾವಿರ, ಕೆಂಪೇಗೌಡ ಲೇಔಟ್‌ಗೆ ಮತ್ತು ಅರ್ಕಾವತಿ ಬಡಾವಣೆಗೆ ಭೂಮಿ ನೀಡಿದ ಭೂ ಮಾಲೀಕರಿಗೆ ಪರಿಹಾರಾರ್ಥವಾಗಿ ಉಳಿದ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. 11 ಗ್ರಾಮಗಳಲ್ಲಿ ಎಷ್ಟೆಷ್ಟು ಭೂಮಿ?

ಕನ್ನಲ್ಲಿಯಲ್ಲಿ 458 ಎಕರೆ, ಭೀಮನಕುಪ್ಪೆ 380 ಎಕರೆ, ಕೆಂಚನಪುರ 305, ಸೂಲಿಕೆರೆ 245, ಮಂಗನಹಳ್ಳಿಯಲ್ಲಿ 55 ಎಕರೆ, ಬಿ.ರಾಮಸಾಗರ 12, ಸೀಗೇಹಳ್ಳಿ 95, ಕೊಮ್ಮಘಟ್ಟ 166, ರಾಮಸಂದ್ರದಲ್ಲಿ 137 ಎಕರೆ, ಕೊಡಿಗೇಹಳ್ಳಿಯಲ್ಲಿ 134 ಎಕರೆ, ಕೆ.ಕೃಷ್ಣಸಾಗರ 16, ಚಲ್ಲಘಟ್ಟ 93 ಸೇರಿದಂತೆ 11 ಗ್ರಾಮಗಳಲ್ಲಿ ಒಟ್ಟು 2105 ಎಕರೆ ಭೂಮಿಯನ್ನು ಗುರುತಿಸಲಾಗಿದೆ.

ನಾಲ್ಕು ಹಳ್ಳಿಗಳಲ್ಲಿ 1868 ಎಕರೆ: ಯಲಚಗುಪ್ಪೆ 984, ತಾವರೆಕೆರೆ ಹೋಬಳಿಯ ಚನ್ನೇನಹಳ್ಳಿ 563, ಕೆಂಗೇರಿ ಹೋಬಳಿಯ ಎಂ. ಕೃಷ್ಣಸಾಗರ 150, ಯಲಚಗುಪ್ಪೆ-ರಾಮಪುರ 169 (ಒಟ್ಟು 1868 ಎಕರೆ) ಎಕರೆಯನ್ನು ಅಧಿಸೂಚನೆ ಹೊರಡಿಸಿ ಭೂಸ್ವಾಧೀನಪಡಿಸಿಕೊಳ್ಳಲು ಬಿಡಿಎ ನಿರ್ಧರಿಸಿದೆ.