ಸಾರಾಂಶ
ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಯಲ್ಲಿ ಸಚಿವರ ಕುಟುಂಬಸ್ಥರು, ಮಧ್ಯವರ್ತಿಗಳು ಹಾಗೂ ಕಾಣದ ಕೈಗಳ ಕೈವಾಡ ಹೆಚ್ಚಳ
ಬೆಂಗಳೂರು : ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಯಲ್ಲಿ ಸಚಿವರ ಕುಟುಂಬಸ್ಥರು, ಮಧ್ಯವರ್ತಿಗಳು ಹಾಗೂ ಕಾಣದ ಕೈಗಳ ಕೈವಾಡ ಹೆಚ್ಚಾಗುತ್ತಿದ್ದು, ಹಣ ಬಿಡುಗಡೆಗೆ ಜ್ಯೇಷ್ಠತೆ ಪಾಲಿಸದೆ ವಿಶೇಷ ಎಲ್‌ಓಸಿ ಸೃಷ್ಟಿಸಿ ಬೇಕಾದವರಿಗೆ ಹಣ ಬಿಡುಗಡೆ ಮಾಡುತ್ತಿದ್ದಾರೆ ಎಂದು ರಾಜ್ಯ ಗುತ್ತಿಗೆದಾರರ ಸಂಘ ‘ಹೊಸ ಬಾಂಬ್’ ಸಿಡಿಸಿದೆ.
ಅಲ್ಲದೆ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರ ಕುಟುಂಬದ ವ್ಯಕ್ತಿ ಹಾಗೂ ಸಣ್ಣ ನೀರಾವರಿ ಸಚಿವ ಬೋಸರಾಜು ಅವರ ಪುತ್ರ ರವಿ ಬೋಸರಾಜು ಅವರು ಹಣ ಬಿಡುಗಡೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದೂ ನೇರ ಆರೋಪ ಮಾಡಿದ್ದಾರೆ.
ಈ ಬಗ್ಗೆ ರಾಜ್ಯ ಗುತ್ತಿಗೆದಾರರ ಸಂಘ ಅಧ್ಯಕ್ಷ ಆರ್. ಮಂಜುನಾಥ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಆರ್.ಮಂಜುನಾಥ್, ಬಿಜೆಪಿಗಿಂತ ಕಾಂಗ್ರೆಸ್ ಅವಧಿಯಲ್ಲೇ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ. ಸರ್ಕಾರದಲ್ಲಿ ಸಚಿವರ ಸಂಬಂಧಿಕರಿಂದಲೇ ಕಮಿಷನ್ ಪಡೆಯಲಾಗುತ್ತಿದೆ. ಹೆಚ್ಚು ಕಮಿಷನ್ ಕೊಟ್ಟವರಿಗೆ ಕಾಮಗಾರಿಗಳ ಬಾಕಿ ಹಣ ಬಿಡುಗಡೆಯಾಗುತ್ತದೆ ಎಂದು ಆರೋಪಿಸಿದ್ದಾರೆ.
ಸಂಘದ ಪತ್ರದಲ್ಲೇನಿದೆ?:
ಗುತ್ತಿಗೆದಾರರ ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ, ‘ಲೋಕೋಪಯೋಗಿ, ಜಲಸಂಪನ್ಮೂಲ ಹಾಗೂ ಸಣ್ಣ ನೀರಾವರಿ ಇಲಾಖೆಗಳಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರಿಗೆ ಹಣ ಬಿಡುಗಡೆಗೆ ಮಧ್ಯವರ್ತಿಗಳು ಹಾಗೂ ‘ಕಾಣದ ಕೈಗಳು’ ಕಾಟ ಕೊಡುತ್ತಿವೆ. ಜ್ಯೇಷ್ಠತೆ ಪಾಲಿಸದೆ ಸ್ಪೆಷಲ್ ಎಲ್‍ಓಸಿ ಸೃಷ್ಟಿಸಿ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ಆರೋಪ ಮಾಡಲಾಗಿದೆ.
ಸರ್ಕಾರದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ನಾಲ್ಕು ನೀರಾವರಿ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರನ್ನು ಕರೆಸಿ ಸಭೆ ನಡೆಸಿ ಕಾಣದ ಕೈಗಳ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರ ಜೊತೆ ಚರ್ಚಿಸಿ ಎಂದು ಗುತ್ತಿಗೆದಾರರ ಸಂಘ ಒತ್ತಾಯಿಸಿದೆ.
ಭ್ರಷ್ಟಾಚಾರ ಕಡಿಮೆಯಾಗಿಲ್ಲ:
ಕಾಂಗ್ರೆಸ್ ಅವಧಿಯಲ್ಲಿ ಯಾವ ರೀತಿಯಲ್ಲೂ ಭ್ರಷ್ಟಾಚಾರ ಕಡಿಮೆಯಾಗಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಎನ್.ಎಸ್.ಬೋಸರಾಜು ಇಲಾಖೆಗಳಲ್ಲಿ ಹಣ ಬಿಡುಗಡೆಯಲ್ಲಿ ವ್ಯಾಪಕ ನಿಯಮ ಉಲ್ಲಂಘನೆ ಆಗುತ್ತಿದೆ. ಬೋಸರಾಜು ಹಾಗೂ ಸತೀಶ್ ಜಾರಕಿಹೊಳಿ ಅವರ ಕುಟುಂಬಸ್ಥರು ಹಣಬಿಡುಗಡೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಮಧ್ಯವರ್ತಿಗಳು ಹಾಗೂ ಕಾಣದ ಕೈಗಳ ಕೈವಾಡದಿಂದ ಸಣ್ಣ ಹಾಗೂ ಮಧ್ಯಮ ಗುತ್ತಿಗೆದಾರರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಸುದ್ದಿಗಾರರೊಂದಿಗೆ ಮಂಜುನಾಥ್ ತಿಳಿಸಿದ್ದಾರೆ.
ಸಚಿವರ ಕುಟುಂಬಸ್ಥರ ಹಸ್ತಕ್ಷೇಪ: ಲೋಕೋಪಯೋಗಿ ಇಲಾಖೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಕುಟುಂಬದ ಸದಸ್ಯರೊಬ್ಬರು ಮಧ್ಯಪ್ರವೇಶಿಸಿದ್ದು, ಜ್ಯೇಷ್ಠತೆ ಆಧಾರದ ಮೇಲೆ ವಿಶೇಷ ಎಲ್‌ಒಸಿ ಕೊಡುತ್ತಾರೆ. ಬೋಸರಾಜು ಅವರ ಪುತ್ರ ಸಹ ಮಧ್ಯಪ್ರವೇಶ ಮಾಡುತ್ತಾರೆ.ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾ.3 ರಂದು ಸಭೆ ನಡೆಸಿ ಎಲ್ಲಾ ಸಮಸ್ಯೆ ಬಗೆಹರಿಸಲಾಗುವುದು. 5 ರಿಂದ 50 ಲಕ್ಷ ಮೊತ್ತದ ಕಾಮಗಾರಿಗಳ ಗುತ್ತಿಗೆದಾರರಿಗೆ ಆದ್ಯತೆ ಮೇರೆಗೆ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಜಲಸಂಪನ್ಮೂಲ ಇಲಾಖೆಯಲ್ಲಿ ದೊಡ್ಡ ಗುತ್ತಿಗೆದಾರರ ಹಣವಷ್ಟೇ ಬಿಡುಗಡೆಯಾಗುತ್ತಿದೆ ಎಂದು ಮಂಜುನಾಥ್ ದೂರಿದ್ದಾರೆ.