ವಿಶೇಷಚೇತನರು, ಹಿರಿಯ ನಾಗರೀಕರು, ವಿಧವೆಯರು ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಸರ್ಕಾರದ ಮಾಸಾಶನ (ಪಿಂಚಣಿ)ಕ್ಕೆ ವಾರ್ಷಿಕ ಆದಾಯ ಮಿತಿ ನಿಗದಿಪಡಿಸಿದ ಸರ್ಕಾರದ ಕ್ರಮವನ್ನು ಖಂಡಿಸಿ ವಿಶಿಷ್ಟ ಅಂಗವಿಕಲರ ಮತ್ತು ಬುದ್ಧಿಮಾಂದ್ಯರ ಸಂಘದ ನೇತೃತ್ವದಲ್ಲಿ ಫಲಾನುಭವಿಗಳು ನಗರದ ಜಿಲ್ಲಾಡಳಿತ ಭವನದ ಎದುರು ಸೋಮವಾರ ಪ್ರತಿಭಟಿಸಿದ್ದಾರೆ.

- ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ವಿಶಿಷ್ಟ ಅಂಗವಿಕಲರು, ಬುದ್ಧಿಮಾಂದ್ಯರ ಸಂಘ ಆಗ್ರಹ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ವಿಶೇಷಚೇತನರು, ಹಿರಿಯ ನಾಗರೀಕರು, ವಿಧವೆಯರು ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಸರ್ಕಾರದ ಮಾಸಾಶನ (ಪಿಂಚಣಿ)ಕ್ಕೆ ವಾರ್ಷಿಕ ಆದಾಯ ಮಿತಿ ನಿಗದಿಪಡಿಸಿದ ಸರ್ಕಾರದ ಕ್ರಮವನ್ನು ಖಂಡಿಸಿ ವಿಶಿಷ್ಟ ಅಂಗವಿಕಲರ ಮತ್ತು ಬುದ್ಧಿಮಾಂದ್ಯರ ಸಂಘದ ನೇತೃತ್ವದಲ್ಲಿ ಫಲಾನುಭವಿಗಳು ನಗರದ ಜಿಲ್ಲಾಡಳಿತ ಭವನದ ಎದುರು ಸೋಮವಾರ ಪ್ರತಿಭಟಿಸಿದರು.

ನಗರದ ಡಿಸಿ ಕಚೇರಿ ಎದುರು ಸಂಘದ ನೇತೃತ್ವದಲ್ಲಿ ಪ್ರತಿಭಟಿಸಿದ ಪಿಂಚಣಿದಾರರು, ಫಲಾನುಭವಿಗಳು ಜಿಲ್ಲಾಡಳಿತದ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಿ, ಮಾಸಾಶನಕ್ಕೆ ಆದಾಯ ಮಿತಿಯನ್ನು ₹32 ಸಾವಿರಗಳಿಗೆ ನಿಗದಿಪಡಿಸಿದ್ದನ್ನು ಕೈಬಿಡುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.

ಸಂಘದ ಮುಖಂಡರು ಮಾತನಾಡಿ, ರಾಜ್ಯ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ವಿಕಲಚೇತನರು, ವಿಧವೆಯರು, ಕಿವಿ ಮತ್ತು ಮೂಗರು, ಹಿರಿಯ ನಾಗರೀಕರಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ನೀಡುತ್ತಿದೆ. ಈವರೆಗೆ ಯಾವುದೇ ಆದಾಯ ಮಿತಿಯಿಲ್ಲದೇ ಮಾಸಾಶನ ನೀಡಲಾಗುತ್ತಿತ್ತು. ಆದರೆ, ಈಗ ಏಕಾಏಕಿ ವಾರ್ಷಿಕ ಆದಾಯ ಮಿತಿಯನ್ನು ₹32 ಸಾವಿರಕ್ಕೆ ನಿಗದಿಪಡಿಸಿದ್ದು ನ್ಯಾಯಸಮ್ಮತವಲ್ಲ ಎಂದು ಆಕ್ಷೇಪಿಸಿದರು.

ವಿವಿಧ ಕಾರಣಗಳನ್ನು ನೀಡಿ ಐದಾರು ತಿಂಗಳಿನಿಂದ ಹಲವು ಪಿಂಚಣಿದಾರರಿಗೆ ಮಾಸಾಶನ ಸ್ಥಗಿತಗೊಳಿಸಲಾಗಿದೆ. ಅದರಲ್ಲೂ ವಿಶೇಷವಾಗಿ ದುಡಿಯುವ ಶಕ್ತಿ ಇಲ್ಲದ ವಿಕಲಚೇತನರು ಸರ್ಕಾರದ ಮಾಸಾಶನವನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಪಿಂಚಣಿ ನಿಂತಿರುವುದರಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದಾರೆ. ತುತ್ತು ಅನ್ನಕ್ಕೂ ಈಗ ಪರದಾಡುವ ಸ್ಥಿತಿ ಬಂದೊದಗಿದೆ ಎಂದು ಅಳಲು ತೋಡಿಕೊಂಡರು.

2016ರ ವಿಕಲಚೇತನರ ಹಕ್ಕುಗಳ ಕಾಯ್ದೆ (ಆರ್‌ಪಿಡಬ್ಲ್ಯೂಡಿ ಆಕ್ಟ್) ಸೆಕ್ಷನ್ 24, 2007ರ ಹಿರಿಯ ನಾಗರೀಕ ಕಲ್ಯಾಣ ಕಾಯ್ದೆ ಸೆಕ್ಷನ್ 19-20೦, ಹಾಗೂ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ (ಎನ್‌ಎಸ್‌ಎಪಿ)ದ ನಿಯಮಗಳ ಪ್ರಕಾರ ಅಶಕ್ತರಿಗೆ ಗೌರವಯುತ ಮಾಸಾಶನ ನೀಡುವುದು ಸರ್ಕಾರದ ಜವಾಬ್ದಾರಿ. ಮಾಸಾಶನ ಸರ್ಕಾರ ನೀಡುವ ಭಿಕ್ಷೆಯಲ್ಲ. ನಮಗಾಗಿ ನಾವು-ನಮ್ಮಿಂದಲೇ ನಾವು'''''''', ಸಾಮಾಜಿಕ ಭದ್ರತೆಯು ನಮ್ಮ ಸಂವಿಧಾನಾತ್ಮಕ ಹಕ್ಕು ಹಾಗೂ ಪಿಂಚಣಿಯೇ ನಮ್ಮ ಬದುಕು ಎಂದು ಪ್ರತಿಭಟನಾಕಾರರು ತಮ್ಮ ಹಕ್ಕು ಎಂದು ಅವರು ಹೇಳಿದರು.

ದೇಶದ ಇತರೆ ರಾಜ್ಯಗಳಲ್ಲಿ ವಿಕಲಚೇತನರಿಗೆ ಯಾವುದೇ ಆದಾಯ ಮಿತಿ ಇಲ್ಲದೇ ಪ್ರತಿ ತಿಂಗಳು ₹3 ಸಾವಿರದಿಂದ ₹5 ಸಾವಿರವರೆಗೆ ಮಾಸಾಶನ ನೀಡಲಾಗುತ್ತಿದೆ. ಆದರೆ, ನಮ್ಮ ರಾಜ್ಯದಲ್ಲಿ ನೀಡುವ ಅಲ್ಪಸ್ವಲ್ಪ ಮಾಸಾಶನದಲ್ಲಿ ಜೀವನ ನಡೆಸುವುದೇ ಕಷ್ಟ. ಸರ್ಕಾರ ವಾರ್ಷಿಕ ಆದಾಯ ಮಿತಿಯನ್ನು ಕೇವಲ ₹32 ಸಾವಿರಗಳೆಂದು ನಿಗದಿಪಡಿಸಿರುವುದು ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸವಾಗಿದೆ ಎಂದು ದೂರಿದರು.

ಸಾಮಾಜಿಕ ಭದ್ರತಾ ಪಿಂಚಣಿದಾರರಿಗೆ ಹೇರಿರುವ ₹32 ಸಾವಿರಗಳ ಆದಾಯ ಮಿತಿ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ತಡೆಹಿಡಿದ ಪಿಂಚಣಿ ತಕ್ಷಣ ಬಿಡುಗಡೆ ಮಾಡಬೇಕು. ವಿಕಲಚೇತನರಿಗೆ ನೀಡುವ ಮಾಶಾಸನ ₹5 ಸಾವಿರಕ್ಕೆ ಹೆಚ್ಚಿಸಬೇಕು. ಸರ್ಕಾರಿ- ಖಾಸಗಿ ಉದ್ಯೋಗಗಳ ನೇಮಕಾತಿಯಲ್ಲಿ ವಿಕಲಚೇತನರ ಮೀಸಲಾತಿಯಲ್ಲಿ ಎಲ್ಲ ವಿಧದ ವಿಕಲಚೇತನರಿಗೂ ಸಮಾನ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಮುಂಬರುವ ಗ್ರಾಪಂ, ತಾಪಂ, ಜಿಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿಕಲಚೇತನ ಅಭ್ಯರ್ಥಿಗಳು ಸ್ಪರ್ಧಿಸಲು ಕ್ಷೇತ್ರಗಳನ್ನು ಮೀಸಲಿಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರ ಮುಖಾಂತರ ರಾಜ್ಯ ಸರ್ಕಾರಕ್ಕೆ ಸಂಘದಿಂದ ಮನವಿ ಅರ್ಪಿಸಲಾಯಿತು.

ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ಗಫರ್, ಮಂಜುಳಮ್ಮ, ಸೈಯದ್ ಕೌಶಿಕ್, ಆದಿಲ್ ಬಾಷಾ, ಡಾ.ಮಹಾಬಲೇಶ್ವರ, ಮಂಜಪ್ಪ, ಮಹಾಂತೇಶ ಸೇರಿದಂತೆ ವಿಕಲಚೇತನರು, ಮೂಗರು ಸೇರಿದಂತೆ ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿದ್ದರು.

- - -

-20ಕೆಡಿವಿಜಿ5: ಸಾಮಾಜಿಕ ಭದ್ರತಾ ಯೋಜನೆಗಳಡಿ ಸರ್ಕಾರದ ಮಾಸಾಶನಕ್ಕೆ ವಾರ್ಷಿಕ ಆದಾಯ ಮಿತಿ ನಿಗದಿ ಖಂಡಿಸಿ ವಿಶಿಷ್ಟ ಅಂಗವಿಕಲರ ಮತ್ತು ಬುದ್ಧಿಮಾಂದ್ಯರ ಸಂಘದ ನೇತೃತ್ವದಲ್ಲಿ ಫಲಾನುಭವಿಗಳು ದಾವಣಗೆರೆ ಡಿಸಿ ಕಚೇರಿ ಎದುರು ಸೋಮವಾರ ಪ್ರತಿಭಟಿಸಿದರು.