ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಬಾಬುರಾಯನ ಕೊಪ್ಪಲು ಗ್ರಾಮದಲ್ಲಿ ಶೈಕ್ಷಣಿಕ ವರ್ಷದ ಶಾಲಾ ದಾಖಲಾತಿ ಆಂದೋಲನವನ್ನು ಶಾಲಾ ಶಿಕ್ಷಕರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಜೊತೆಗೂಡಿ ನಡೆಸಿದರು.ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಹೇಮಲತಾ ಹರಿಯಾಳ ನೇತೃತ್ವದಲ್ಲಿ ಶಿಕ್ಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಗ್ರಾಮದ ಪ್ರತಿ ಬೀದಿಯಲ್ಲಿ ಬ್ಯಾನರ್ ಹಿಡಿದು ಮೆರವಣಿಗೆ ನಡೆಸಿದರು. ಸರ್ಕಾರದಿಂದ ಉಚಿತ ವಸತಿ ಜೊತೆಗೆ ಸಮವಸ್ತ್ರ ಸೇರಿದಂತೆ ಇತರ ಸೌಲಭ್ಯಗಳನ್ನು ನೀಡುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಉತ್ತಮ ಶಿಕ್ಷಣ ಕೊಡಿಸಿ ಎಂದು ಜಾಗೃತಿ ಮೂಲಕ ಪೋಷಕರಲ್ಲಿ ಶಿಕ್ಷಕರು ಮನವಿ ಮಾಡಿದರು.
ನಂತರ ಕಾರ್ಯಕ್ರಮದಲ್ಲಿ ಗ್ರಾಮದ ಶಾಲಾ ಮಹಾ ಪೋಷಕ ಸುಬ್ರಮಣ್ಯ ಮಾತನಾಡಿ, ಶಾಲೆಗೆ ದಾಖಲಾಗಿರುವ ವಿದ್ಯಾರ್ಥಿಗಳು ತಮ್ಮ ಸ್ನೇಹಿತರಿಗೂ ಶಾಲೆಯಲ್ಲಿನ ಸೌಲಭ್ಯಗಳ ತಿಳಿ ಹೇಳಿ ಅವರನ್ನು ಸರ್ಕಾರಿ ಶಾಲೆಗೆ ಕರೆತಂದು ಸೇರಿಸಬೇಕು. ಇದರಿಂದ ನಿಮ್ಮ ಸ್ನೇಹಿತರಿಗೂ ಸರ್ಕಾರದ ಸೌಲಭ್ಯಗಳನ್ನು ಸಿಗುವಂತೆ ಮಾಡಿ ಶಾಲಾ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಬಹುದು. ಪೋಷಕರು ಸಹ ಖಾಸಗಿ ಶಾಲೆಗಳ ಕಡೆ ಮುಖ ಮಾಡದೆ ತಮ್ಮ ಮಕ್ಕಳನ್ನು ಕರೆ ತಂದು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಕರೆ ನೀಡಿದರು.ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಶಂಕರ್ ಬಾಬು ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ನುರಿತ ಪ್ರತಿಭಾವಂತ ಶಿಕ್ಷಕರಿದ್ದು, ಖಾಸಗಿ ಶಾಲೆಗಿಂತ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಹಾಗಾಗಿ ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಿಂದ ಜಿಲ್ಲೆಗೆ ಹೆಸರು ಬಂದಿದೆ. ಪೋಷಕರು ಗಮನ ಹರಿಸಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಸರ್ಕಾರಿ ಶಾಲೆ ಉಳಿಸಬೇಕು ಎಂದರು.
ಇದೇ ವೇಳೆ ಪತ್ರಕರ್ತ ಗಂಜಾಂ ಮಂಜು ಹಾಗೂ ಶಾಲಾ ಹಿಂದಿ ಶಿಕ್ಷಕಿಯನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕ ರಾದ ಮಲ್ಲೇಶ್, ಶ್ರೀನಿವಾಸ್ ಸೇರಿದಂತೆ ಇತರ ಶಿಕ್ಷಕ ವೃಂದ ಹಾಗೂ ಮಕ್ಕಳು, ಪೊಷಕರು ಇದ್ದರು.