ಸಾರಾಂಶ
ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುಈ ಭಾಗದ ಅದರಲ್ಲಿಯೂ ರಾಯಚೂರು ಜಿಲ್ಲೆಯ ಯುವಕರು ಭಾರತೀಯ ಸೇನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಎನ್ನುವ ಸದುದ್ದೇಶದಿಂದ ಆಯೋಜಿಸಿರುವ ಅಗ್ನಿವೀರ್ಸೇನಾ ರ್ಯಾಲಿಗೆ ಅಗತ್ಯವಾದ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನದಲ್ಲಿ ಇದೇ ಆ.8 ರಿಂದ 26ವರೆಗೆ ಸೇನಾ ಭರ್ತಿ ಕಾರ್ಯವು ನಡೆಯುತ್ತಿದ್ದು, ರಾಯಚೂರು ಸೇರಿ ವಿವಿಧ ಜಿಲ್ಲೆಗಳಿಂದ ಸಾವಿರಾರು ಯುವಕರು ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದು ಅವರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಜಿಲ್ಲಾಡಳಿತದಿಂದ ಸೂಕ್ತಕ್ರಮಗಳನ್ನು ವಹಿಸಲಾಗಿದೆ.ಮುಂದೆ ಬಂದ ದಾನಿಗಳು : ಸುಮಾರು 19 ದಿನಗಳ ಕಾಲ ಈ ಸೇನಾ ಭರ್ತಿ ರ್ಯಾಲಿಯು ಜರುಗಲಿದ್ದು ಈ ಹಿನ್ನೆಲೆಯಲ್ಲಿ ನಿತ್ಯ 2000 ಜನರಿಗೆ ವಸತಿ, ಉಪಾಹಾರ, ಕುಡಿ ಯುವ ನೀರು, ಮಧ್ಯಾಹ್ನದ ಊಟ ಸೇರಿದಮತೆ ಸಾರಿಗೆ ಸೇವೆಯನ್ನು ಒದಗಿಸಲಾಗಿದೆ. ಅದಕ್ಕಾಗಿ ಜಿಲ್ಲಾಡಳಿತವು ವಿವಿಧ ಸಂಘ-ಸಂಸ್ಥೆಗಳಿಂದ ದೇಣಿಗೆಯನ್ನು ಪಡೆಯುತ್ತಿದ್ದು, ವಾಲ್ಮೀಕಿ, ಭಂಜಾರ ಭವನ, ಸಂತೋಷಿ ಹಬ್ಸೇರಿದಂತೆ ವಿವಿಧ ವಸತಿ ನಿಲಯಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಿದ್ದು, ಅಷ್ಟೇ ಅಲ್ಲದೇ ರ್ಯಾಲಿ ಸ್ಥಳಕ್ಕೆ ಆಗಮಿಸಲು ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ದೂರದ ಊರುಗಳಿಂದ ಬರುವ ಅಭ್ಯರ್ಥಿಗಳು ಕೇವಲ 10 ರು. ನೀಡಿ ಸಾರಿಗೆ ಸವಲತ್ತುನ್ನು ಪಡೆದುಕೊಳ್ಳಬಹುದಾಗಿದೆ. ಸುಮಾರು 80 ಸಾವಿರ ಜನರಿಗೆ ಊಟೋಪಚಾರ, ಇತರೆ ಸವಲತ್ತು ಕಲ್ಪಿಸುವುದಕ್ಕಾಗಿ 30 ಲಕ್ಷ ರು. ಅಂದಾಜಿಸಲಾಗಿದ್ದು, ಅಕ್ಕಿ ಗಿರಣಿ ಮಾಲೀಕರಿಂದ ಅಕ್ಕಿ, ಕಾಯಿಪಲ್ಲೆ ಸಗಟು ವ್ಯಾಪಾರಸ್ಥರ ಸಂಘದಿಂದ ಉಚಿತ ತರಕಾರಿ, ರೋಟರಿ ಕ್ಲಬ್ನಿಂದ ಕುಡಿಯುವ ನೀರು, ಈಶ್ವರಿ ದೇವಸ್ಥಾನ ಸಮಿತಿ ನೇತೃತ್ವದಲ್ಲಿ ಅಡುಗೆ, ಊಟ ಹಾಗೂ ವಸತಿ ನಿರ್ವಹಣೆಯನ್ನು ಸಹ ಮಾಡಲಾಗುತ್ತಿದೆ.
7 ವರ್ಷಗಳ ನಂತರ ರ್‍ಯಾಲಿ: ಕಳೆದ 2018ರಲ್ಲಿ ಸೇವಾ ಭರ್ತಿ ರ್ಯಾಲಿಯನ್ನು ರಾಯಚೂರು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಾವಿರಾರು ಸಂಖ್ಯೆಯ ಯುವಕರು ರ್ಯಾಲಿಯಲ್ಲಿ ಪಾಲ್ಗೊಂಡು ದೇಶ ರಕ್ಷಣೆಯ ದುಡಿಮೆಗೆ ಆಯ್ಕೆಯಾಗಿದ್ದರು. ಇಷ್ಟು ವರ್ಷಗಳ ಬಳಿಕ ಮತ್ತೆ ರ್ಯಾಲಿಯನ್ನು ಕೈಗೊಂಡಿದ್ದು, ಅಗ್ನಿವೀರ್ ಸೇವಾ ಭರ್ತಿ ರ್ಯಾಲಿಯ ಅಧಿಕಾರಿ, ಸಿಬ್ಬಂದಿಗೆ, ಸೈನಿಕರಿಗೆ ಹಾಗೂ ಇತರರಿಗೆ ಎಲ್ಲ ರೀತಿಯ ಸವಲತ್ತುಗಳನ್ನು ಜಿಲ್ಲಾಡಳಿತ ಒದಗಿಸಿದ್ದು, ದೂರದಿಂದ ಬರುವ ಯುವಕರು ಯಾವುದೇ ರೀತಿಯ ಸಮಸ್ಯೆಗಳನ್ನು ಅನುಭವಿಸದಂತೆ ಕೊಡಗೈ ದಾನಿಗಳು ಮುಂದೆ ಬಂದಿರುವುದು ಎಲ್ಲರಿಗೂ ಪ್ರೇರಣೆನೀಡಿದೆ.---
ಸೇನಾ ಭರ್ತಿ ರ್‍ಯಾಲಿ ಯಶಸ್ವಿಯಾಗಿ ನಡೆಸುವುದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅದಕ್ಕಾಗಿಯೇ ಸಮಿತಿಗಳನ್ನು ರಚಿಸಿ ಜವಾಬ್ದಾರಿ ವಹಿಸಿದ್ದು, ಜಿಲ್ಲಾಡಳಿತಕ್ಕೆ ಸಂಘ-ಸಂಸ್ಥೆಗಳು ಕೈ ಜೋಡಿಸಿರುವುದರಿಂದ ಹಲವು ಉಚಿತ ಸವಲತ್ತುಗಳನ್ನು ಕಲ್ಪಿಸಿಕೊಡಲು ಅನುಕೂಲವಾಗಿದೆ.- ಕೃಷ್ಣಾ ಶಾವಂತಗೇರಾ, ಉಪನಿರ್ದೇಶಕರು ಆಹಾರ ಇಲಾಖೆ
---ಜಿಲ್ಲಾಡಳಿತ, ಈಶ್ವರಿ ದೇವಸ್ಥಾನ ಸಮಿತಿ ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಸೇನಾ ಭರ್ತಿ ರ್ಯಾಲಿಯಲ್ಲಿ ಪಾಲ್ಗೊಳ್ಳಲು ನಗರಕ್ಕಾಗಮಿಸುವ ಅಭ್ಯರ್ಥಿಗಳಿಗೆ ಉಚಿತ ಉಪಹಾರ, ಊಟದ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುತ್ತಿದ್ದು, ಅಗತ್ಯ ದಾನಿಗಳಿಂದ ನೆರವು ಹರಿದು ಬರುತ್ತಿದೆ.
ಚಂದ್ರಶೇಖರ ಮಿರ್ಜಾಪುರ, ಈಶ್ವರಿ ದೇವಸ್ಥಾನ ಸಮಿತಿ