ಹಳಿಯಾಳ: ಪಟ್ಟಣ ಹಾಗೂ ಬೆಂಗಳೂರಿನಲ್ಲಿ ಐಟಿ ಕೇಂದ್ರವನ್ನು ಹೊಂದಿರುವ ಪ್ರಾಕ್ಸಿನ್ ಟೆಕ್ ಕಂಪನಿ ಹಾಗೂ ದಾಂಡೇಲಿಯಲ್ಲಿರುವ ಜಿಟಿಟಿಸಿ ಮಧ್ಯೆ ಉದ್ಯೋಗ ಹಾಗೂ ಕೌಶಲ್ಯದ ಕುರಿತು ಅಧಿಕೃತ ಶೈಕ್ಷಣಿಕ ಹಾಗೂ ಉದ್ಯೋಗ ಒಪ್ಪಂದ ನಡೆಯಿತು.

ಪ್ರಾಕ್ಸಿನ್ ಟೆಕ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಜ್ಯೋತಿ ನಾರಾಯಣ ಠೊಸುರ ಅವರು ದಾಂಡೇಲಿಯ ಸರ್ಕಾರಿ ಟೂಲ್ ಮತ್ತು ತರಬೇತಿ ಸಂಸ್ಥೆ (ಜಿ.ಟಿ.ಟಿ.ಸಿ.)ಯೊಂದಿಗೆ ಒಪ್ಪಂದ ಮಾಡಿಕೊಂಡು, ಒಪ್ಪಂದ ಪತ್ರ ವಿನಿಮಯ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಕ್ಸಿನ್ ಟೆಕ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಜ್ಯೋತಿ ನಾರಾಯಣ ಠೊಸುರ ಅವರು, ಸಂಸ್ಥೆಯು ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಸೂಕ್ತ ತರಬೇತಿ ನೀಡಲಿದೆ. ಪ್ರಚಲಿತ ಔದ್ಯೋಗಿಕ ಮಾರುಕಟ್ಟೆ ಬಯಸುವ ಮಾನವ ಸಂಪನ್ಮೂಲವನ್ನು ಸಿದ್ಧ ಮಾಡಿಕೊಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಆಧುನಿಕ ತರಬೇತಿ ಕೌಶಲ್ಯಗಳ ಜತೆಯಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು ಸಂಸ್ಥೆ ಆದ್ಯತೆ ನೀಡುತ್ತಿದೆ. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಸೂಕ್ತ ಪ್ರೋತ್ಸಾಹ ನೀಡುವ ಜತೆಗೆ ತಮ್ಮ ಪಾಲಕರ ಜತೆಗೂಡಿ ಇರುವ ಅವರ ಪಾಲನೆ-ಪೋಷಣೆ ಮಾಡಲು ಮುಂದಾಗುವ ಯುವ ಸಮುದಾಯಕ್ಕೆ ವಿಶೇಷ ಪ್ರೋತ್ಸಾಹ ನೀಡಲು ಸಂಸ್ಥೆಯು ಉದ್ಯೋಗ ನೀಡುತ್ತಿದೆ. ಕೊರೋನಾ ಕಾಲದಲ್ಲಿ ನಾವು ಕೈಗೊಂಡ ಈ ನಮ್ಮ ನೂತನ ಉದ್ಯೋಗ ನೀತಿಗೆ ರಾಷ್ಟ್ರದೆಲ್ಲೆಡೆಯಿಂದ ಅಭಿನಂದನೆಗಳು ಹಾಗೂ ಪ್ರಶಂಸೆಗಳು ವ್ಯಕ್ತವಾದವು ಎಂದರು.

ಈ ಶೈಕ್ಷಣಿಕ ಹಾಗೂ ಉದ್ಯೋಗ ಒಪ್ಪಂದದೊಂದಿಗೆ ಸಂಸ್ಥೆಯು ಜಿಟಿಟಿಸಿ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್‌ ಅವಕಾಶಗಳನ್ನು ಕಲ್ಪಿಸಲಿದೆ. ಇಂಟರ್ನ್‌ಶಿಪ್‌ ತರಬೇತಿಯನ್ನು ಯಶಸ್ವಿಗೊಳಿಸಿದವರಿಗೆ ಸಂಸ್ಥೆ ಪೂರ್ಣ ಅವಧಿಯ ಉದ್ಯೋಗ ನೀಡಲಿದೆ. ಹಾಗೆಯೇ ಪ್ರಾಕ್ಸಿನ್ ಉದ್ಯೋಗಿಗಳ ಪ್ರಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿಗಾಗಿ ಜಿಟಿಟಿಸಿಯ ಅಧ್ಯಾಪಕರ ಸಹಕಾರ ಪಡೆಯುವುದೇ ಈ ಒಪ್ಪಂದದ ಪ್ರಮುಖ ಅಂಶವಾಗಿದೆ ಎಂದರು.

ಜಿಟಿಟಿಸಿ ಸಂಸ್ಥೆಯ ಪ್ರಾಚಾರ್ಯ ದತ್ತಾತ್ರೇಯ ಹಾಗೂ ಉದ್ಯೋಗಾಧಿಕಾರಿ ನಿಂಗಪ್ಪ, ಪ್ರಾಕ್ಸಿನ ಟೆಕ್ ಕಂಪನಿಯ ರಾಘವೇಂದ್ರ ಸಾಂಬ್ರೇಕರ, ನಯನಾ ಗೌಡಪ್ಪನವರ, ಮಣಿಕಂಠ ಸಾಂಬ್ರಾಣಿ, ಪ್ರಿಯಾ ಪಾಟೀಲ, ವಸುಂಧರಾ ನಾಯ್ಕ, ಕಲ್ಲಯ್ಯ ಪೂಜಾರಿ ಇದ್ದರು.