ಫುಡ್ ಪಾರ್ಕ್ ಸ್ಥಾಪನೆಗೆ ಒಡಂಬಡಿಕೆ

| Published : Feb 19 2025, 12:47 AM IST

ಸಾರಾಂಶ

ಹಾಸನಕ್ಕೆ ೭೨೦ ಕೋಟಿ ರುಪಾಯಿಗಳ ವೆಚ್ಚದ ಫುಡ್ ಪಾರ್ಕ್ ಸ್ಥಾಪನೆಗೆ ಒಡಂಬಡಿಕೆಯಾಗಿದ್ದು, ಇದಕ್ಕೆ ಅಗತ್ಯವಾದ ಸಾಲ ಸೌಲಭ್ಯದ ಅವಶ್ಯಕತೆ ಇದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್.ಕೆ.ಸಿ.ಸಿ.ಐ.) ರಾಜ್ಯಾಧ್ಯಕ್ಷ ಬಾಲಕೃಷ್ಣ ಮಾಹಿತಿ ನೀಡಿದರು. ಹೊಸ ತಲೆಮಾರಿನ ಉದ್ದಿಮೆಗಳು ಜಿಲ್ಲಾಮಟ್ಟದಲ್ಲಿ ಪ್ರಾರಂಭಿಸುವ ಸಲುವಾಗಿ ಕರ್ನಾಟಕ ರಾಜ್ಯ ಕೈಗಾರಿಕೋದ್ಯಮಿಗಳ ಸಂಘ ನಿರಂತರವಾಗಿ ಶ್ರಮಿಸುತ್ತಿದ್ದು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಜೊತೆಯಲ್ಲೂ ಈ ಬಗ್ಗೆ ಹಲವು ಸುತ್ತಿನ ಮಾತುಕಥೆಗಳು ನಡೆದಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಹಾಸನಕ್ಕೆ ೭೨೦ ಕೋಟಿ ರುಪಾಯಿಗಳ ವೆಚ್ಚದ ಫುಡ್ ಪಾರ್ಕ್ ಸ್ಥಾಪನೆಗೆ ಒಡಂಬಡಿಕೆಯಾಗಿದ್ದು, ಇದಕ್ಕೆ ಅಗತ್ಯವಾದ ಸಾಲ ಸೌಲಭ್ಯದ ಅವಶ್ಯಕತೆ ಇದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್.ಕೆ.ಸಿ.ಸಿ.ಐ.) ರಾಜ್ಯಾಧ್ಯಕ್ಷ ಬಾಲಕೃಷ್ಣ ಮಾಹಿತಿ ನೀಡಿದರು. ನಗರದಲ್ಲಿ ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಿರು ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳು ಸ್ಥಾಪಿಸಲು ಹಾಸನ ಸೂಕ್ತ ಸ್ಥಳವಾಗಿದ್ದು, ಅಗತ್ಯ ರಸ್ತೆ ಹಾಗೂ ಮೂಲ ಸೌಕರ್ಯಕ್ಕೆ ಜಿಲ್ಲಾಡಳಿತ ಹಾಗೂ ಸರ್ಕಾರ ಇನ್ನೂ ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹ ನೀಡಿದಲ್ಲಿ ಹಾಸನ ಮುಂದಿನ ದಿನಗಳಲ್ಲಿ ಔದ್ಯೋಗಿಕ ಕೇಂದ್ರವಾಗಿ ಬೆಳೆದು ಸಾವಿರಾರು ಯುವಕರಿಗೆ ಉದ್ಯೋಗ ನೀಡುವ ತಾಣವಾಗಬಲ್ಲದು. ಹಾಸನದಲ್ಲಿ ಪ್ರವಾಸೋದ್ಯಮಕ್ಕೆ ಅತಿ ಹೆಚ್ಚಿನ ಅವಕಾಶವಿದ್ದು ಪ್ರವಾಸೋದ್ಯಮ ಬೆಳೆದರೆ ಜಿಲ್ಲೆಯ ಬೆಳವಣಿಗೆ ಹಾಗೂ ಆರ್ಥಿಕ ಬೆಳವಣಿಗೆ ಎರಡೂ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಉದ್ಯಮಿಗಳು ಗಮನಹರಿಸಬೇಕೆಂದರು. ಹೊಸ ತಲೆಮಾರಿನ ಉದ್ದಿಮೆಗಳು ಜಿಲ್ಲಾಮಟ್ಟದಲ್ಲಿ ಪ್ರಾರಂಭಿಸುವ ಸಲುವಾಗಿ ಕರ್ನಾಟಕ ರಾಜ್ಯ ಕೈಗಾರಿಕೋದ್ಯಮಿಗಳ ಸಂಘ ನಿರಂತರವಾಗಿ ಶ್ರಮಿಸುತ್ತಿದ್ದು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಜೊತೆಯಲ್ಲೂ ಈ ಬಗ್ಗೆ ಹಲವು ಸುತ್ತಿನ ಮಾತುಕಥೆಗಳು ನಡೆದಿದೆ ಎಂದು ಹೇಳಿದರು. ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ ಪ್ರಕಾಶ್ ಮಾತನಾಡಿ, ಹಾಸನ ಕೈಗಾರಿಕಾ ಪ್ರದೇಶದಲ್ಲಿ ಉದ್ಯಮಿಗಳಿಗೆ ಅನುಕೂಲವಾಗಲೆಂದು ರಿಯಾಯಿತಿ ದರದಲ್ಲಿ ಭೂಮಿ ನೀಡಲಾಗಿದ್ದು, ಯಾರಾದರೂ ತಮ್ಮ ನಿಯೋಜಿತ ಯೋಜನೆಗಳನ್ನು ಅನುಷ್ಠಾನಗೊಳಿಸಲು ವಿಫಲರಾದರೆ ಅಥವಾ ನೀಡಿದ ಭೂಮಿಯನ್ನು ಸದ್ಬಳಕೆ ಮಾಡದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಂಡು ಅಗತ್ಯವಿರುವವರಿಗೆ ಭೂಮಿಯನ್ನು ಮರುಹಂಚಿಕೆ ಮಾಡಲಾಗುವುದು. ಹಾಸನದಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಈಗಾಗಲೇ ಯೋಜನೆಯ ಸಿದ್ಧವಾಗುತ್ತಿದ್ದು, ಈ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೂಕ್ತ ಸಹಕಾರ ನೀಡುವ ಭರವಸೆಯನ್ನು ಈಗಾಗಲೇ ನೀಡಿದ್ದಾರೆ ಎಂಬ ಮಾಹಿತಿಯನ್ನು ನೀಡಿದರು. ಎಫ್.ಕೆ.ಸಿ.ಸಿ.ಐ. ನಿರ್ದೇಶಕ ಎಚ್.ಎ. ಕಿರಣ್ ಮಾತನಾಡಿ, ಯುವಜನರಲ್ಲಿ ಉದ್ಯಮಶೀಲತೆಯ ಬಗ್ಗೆ ಉತ್ಸಾಹ ಹೆಚ್ಚಿಸಲು ಮಂಥನ್ ಕಾರ್ಯಕ್ರಮವನ್ನು ಎಫ್ ಕೆ ಸಿ ಸಿ ಐ ಪ್ರತಿವರ್ಷ ನಡೆಸುತ್ತಿದೆ.ಮಂಥನ್ ಎನ್ನುವುದು ಬ್ಯುಸಿನೆಸ್ ಪ್ಲಾನ್ ಪ್ರಸ್ತುತಪಡಿಸುವ ಸ್ಪರ್ಧೆಯಾಗಿದ್ದು, ರಾಜ್ಯದ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮೊ ವಿದ್ಯಾರ್ಥಿಗಳು ತಮ್ಮಲ್ಲಿನ ಹೊಸ ಬ್ಯುಸಿನೆಸ್‌ಗೆ ಸಂಬಂಧಿಸಿದ ಆಲೋಚನೆಗಳನ್ನು ಎಫ್ಕೆಸಿಸಿಐ ವೇದಿಕೆ ಕಲ್ಪಿಸಿ ಉತ್ತಮ ಪ್ಲಾನ್‌ಗಳಿಗೆ ೧೦ ಲಕ್ಷದವರೆಗೆ ಬಹುಮಾನ ನೀಡುವುದರ ಜೊತೆಯಲ್ಲಿ ಉದ್ದಿಮೆ ಸ್ಥಾಪಿಸಲು ಸೂಕ್ತ ಸಹಕಾರ ಬಂಡವಾಳ ಹಾಗೂ ಸಲ ಸೌಲಭ್ಯಕ್ಕೆ ಎಫ್‌ಕೆಸಿಸಿಐ ಸಹಕರಿಸುತ್ತಿದೆ ಎಂದರು. ಎಫ್.ಕೆ.ಸಿ.ಸಿ.ಐ. ಮಾಜಿ ಅಧ್ಯಕ್ಷ ರಮೇಶ್ ಎನ್ ಲಹೋಟಿ ಮಾತನಾಡಿ, ಕಾಲೇಜು ಮಟ್ಟದಲ್ಲಿಯೇ ಕೌಶಲ್ಯ ತರಬೇತಿ ನೀಡುವುದರಿಂದ ಉದ್ಯಮಸ್ನೇಹಿ ಹಾಗೂ ನೈಪುಣ್ಯಯುತ ಉದ್ದಿಮೆದಾರರನ್ನು ಹಾಗೂ ಕಾರ್ಮಿಕರನ್ನು ತಯಾರುಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆಗಳು ಸಹ ಕಾರ್ಯನಿರ್ವಹಿಸಬೇಕಾಗಿದ್ದು, ಇತ್ತೀಚೆಗೆ ಹಾಸನ ವಿಶ್ವವಿದ್ಯಾಲಯ ಮುಚ್ಚುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂಬ ಮಾಹಿತಿ ತಿಳಿದ ಬಳಿಕ ನಮ್ಮ ಸಂಘದ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ವಿಶ್ವವಿದ್ಯಾಲಯವನ್ನು ಮುಚ್ಚದಂತೆ ಮನವಿ ಮಾಡಲಾಗುವುದು ಹಾಗೂ ಅಲ್ಲಿ ಕೌಶಲ್ಯ ತರಬೇತಿ ಕೇಂದ್ರವನ್ನು ಸ್ಥಾಪನೆ ಮಾಡಲು ಒತ್ತಾಯಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ ರಮೇಶ್ ಎನ್ ಲಹೋಟಿ, ಸಾಯಿರಾಮ್ ಪ್ರಸಾದ್, ಎಫ್.ಕೆ.ಸಿ.ಸಿ.ಐ. ನಿರ್ದೇಶಕ ಎಚ್.ಎ. ಕಿರಣ್, ಇತರರು ಉಪಸ್ಥಿತರಿದ್ದರು.