ಸಾರಾಂಶ
ಕೃಷ್ಣ ಎನ್. ಲಮಾಣಿ
ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ರೈತರು ಹೊಲ ಹದಗೊಳಿಸಿ ಬಿತ್ತನೆ ಕಾರ್ಯ ಆರಂಭಿಸಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೂಡ ದಾಸ್ತಾನು ಮಾಡಲಾಗಿದ್ದು, ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆ ಕೂಡ ಮಾಡಲಾಗುತ್ತಿದೆ.ಜಿಲ್ಲೆಯ ಆರು ತಾಲೂಕುಗಳಲ್ಲೂ ಈ ಬಾರಿ ಉತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ ಜೂ. 9ರ ವರೆಗೆ 128 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, 183.5 ಮಿ.ಮೀ. ಮಳೆಯಾಗಿದೆ. ಶೇ. 43ರಷ್ಟು ವಾಡಿಕೆ ಮಳೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ವಾರ್ಷಿಕ 643 ಮಿ.ಮೀ. ವಾಡಿಕೆ ಮಳೆಯಾಗಬೇಕಿದ್ದು, ಈ ಬಾರಿ ಆಶಾಭಾವ ಹೊಂದಲಾಗಿದೆ.
ಮುಂಗಾರು ಬಿತ್ತನೆ ಕಾರ್ಯ ಆರಂಭ: ವಿಜಯನಗರ ಜಿಲ್ಲೆಯಲ್ಲಿ 2,94,602 ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ 69,298 ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಬಿತ್ತನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಶೇ. 24ರಷ್ಟು ಬಿತ್ತನೆ ಮಾಡಲಾಗಿದೆ. ಜಿಲ್ಲೆಯಲ್ಲಿ 1,97,754 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿ ಹೊಂದಲಾಗಿದೆ. ಈಗಾಗಲೇ 57 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. 5,000 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ 3,768 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆ ಮಾಡಲಾಗಿದೆ. 4,610 ಹೆಕ್ಟೇರ್ ಪ್ರದೇಶದಲ್ಲಿ ಸಜ್ಜೆ ಬಿತ್ತನೆ ಗುರಿ ಹೊಂದಲಾಗಿದ್ದು, 764 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. 7,300 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಗುರಿ ಹೊಂದಲಾಗಿದ್ದು, 3,610 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಸೂರ್ಯಕಾಂತಿ 6,750 ಹೆಕ್ಟೇರ್ ಪ್ರದೇಶದಲ್ಲಿ ಗುರಿ ಹೊಂದಲಾಗಿದ್ದು, 1,029 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. 5,200 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಗುರಿ ಹೊಂದಲಾಗಿದ್ದು, 386 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. 345 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಗುರಿ ಇದ್ದು, 53 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. 38,200 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಇನ್ನೂ 14,000 ಹೆಕ್ಟೇರ್ ಪ್ರದೇಶದಲ್ಲಿ ಬತ್ತ ಬೆಳೆಯುವ ಗುರಿ ಹೊಂದಲಾಗಿದೆ.ಬಿತ್ತನೆ ಬೀಜ ವಿತರಣೆ: ಈಗಾಗಲೇ ಜಿಲ್ಲೆಯಲ್ಲಿ 6,500 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದ್ದು, ಈ ಪೈಕಿ 3,581 ಕ್ವಿಂಟಲ್ ಬಿತ್ತನೆ ಬೀಜವನ್ನು 18 ರೈತ ಸಂಪರ್ಕ ಕೇಂದ್ರಗಳು 13 ಉಪ ಕೇಂದ್ರಗಳ ಮೂಲಕ ವಿತರಣೆ ಮಾಡಲಾಗಿದೆ.
ರಸ ಗೊಬ್ಬರ ವಿತರಣೆ: ವಿಜಯನಗರ ಜಿಲ್ಲೆಯಲ್ಲಿ 1,03,360 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದೆ. ಈ ಪೈಕಿ ಜೂನ್ ವರೆಗೆ 50,883 ಮೆಟ್ರಿಕ್ ಟನ್ ಬೇಡಿಕೆ ಇದೆ. 58,952 ಮೆಟ್ರಿಕ್ ಟನ್ ದಾಸ್ತಾನು ಹೊಂದಲಾಗಿತ್ತು. ಈ ಪೈಕಿ 33,526 ಮೆಟ್ರಿಕ್ ಟನ್ ವಿವಿಧ ಕೇಂದ್ರಗಳು ಹಾಗೂ ಗೊಬ್ಬರ ಮಾರಾಟ ಮಳಿಗೆಗಳಿಂದ ರೈತರಿಗೆ ಪೂರೈಕೆ ಮಾಡಲಾಗಿದೆ. ಇನ್ನೂ ಗೊಬ್ಬರ ದಾಸ್ತಾನಿದೆ. ಜಿಲ್ಲೆಯಲ್ಲಿ ರಸ ಗೊಬ್ಬರ ಕೊರತೆ ಇಲ್ಲ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ''''ಕನ್ನಡಪ್ರಭ''''ಕ್ಕೆ ಸ್ಪಷ್ಟಪಡಿಸಿದರು.ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಗರಿಗೆದರಿದ್ದು, ಮಳೆ ಉತ್ತಮವಾಗಿ ಬೀಳುತ್ತಿರುವುದರಿಂದ ಹರಪನಹಳ್ಳಿ, ಹೊಸಪೇಟೆ, ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ಮತ್ತು ಹೂವಿನಹಡಗಲಿ ಭಾಗದಲ್ಲಿ ರೈತರು ಹೊಲಗಳನ್ನು ಹದ ಮಾಡಿ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಅದರಲ್ಲೂ ವಿಜಯನಗರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಹಾಗಾಗಿ ಬಿತ್ತನೆ ಕಾರ್ಯವೂ ಭರದಿಂದಲೇ ಸಾಗಿದೆ.ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ಶೇ. 43ರಷ್ಟು ಹೆಚ್ಚಿಗೆ ಮಳೆಯಾಗಿದ್ದು, ಶೇ. 24ರಷ್ಟು ಬಿತ್ತನೆಯೂ ಆಗಿದೆ. ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಕೂಡ ಮಾಡಿಕೊಳ್ಳಲಾಗಿದ್ದು, ಈಗಾಗಲೇ ಬಿತ್ತನೆ ಕಾರ್ಯವೂ ಆರಂಭವಾಗಿದೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಬಿತ್ತನೆ ಬೀಜ ಕೂಡ ವಿತರಣೆ ಮಾಡಲಾಗುತ್ತಿದೆ ಎಂದು ವಿಜಯನಗರ ಕೃಷಿ ಉಪ ನಿರ್ದೇಶಕ ಡಾ. ನಯೀಂ ಪಾಷಾ ಹೇಳಿದರು.
ಈ ಬಾರಿ ಉತ್ತಮ ಮಳೆಯಾಗುತ್ತಿದೆ. ಹಾಗಾಗಿ ಬಿತ್ತನೆ ಮಾಡುತ್ತಿದ್ದೇವೆ. ನಮ್ಮ ನಾಲ್ಕು ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ, ತೊಗರಿ ಬಿತ್ತನೆ ಮಾಡುತ್ತಿದ್ದೇವೆ. ಮೆಕ್ಕೆಜೋಳ ಬಿತ್ತನೆಗೆ ಇದು ಸಕಾಲವಾಗಿದೆ. ಹಾಗಾಗಿ ನಾವು ಬಿತ್ತನೆ ಮಾಡುತ್ತಿದ್ದೇವೆ. ಈಗಾಗಲೇ ಹಲವು ರೈತರು ಕೂಡ ಹೊಲಗಳನ್ನು ಉಳುಮೆ ಮಾಡಿದ್ದಾರೆ. ಬಿತ್ತನೆಗೆ ಹದಗೊಳಿಸಿದ್ದಾರೆ ಎಂದು ಕಮಲಾಪುರದ ರೈತ ಈರಪ್ಪ ಹೇಳಿದರು.