ಸಾರಾಂಶ
ಬಳ್ಳಾರಿ: ಕೃಷಿ ಚಟುವಟಿಕೆಗಳ ಬಳಕೆ ಮಾಡುವ ರಾಸಾಯನಿಕಗಳಿಂದ ಜೀವ ವೈವಿಧ್ಯತೆಗೆ ಮಾರಕವಾಗದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಭಾರತ ಸರ್ಕಾರ, ಹೈದ್ರಾಬಾದ್‌ನ ಮ್ಯಾನೇಜ್ (MANAGE) ಸಂಸ್ಥೆ, ಕೃಷಿ ವಿಶ್ವವಿದ್ಯಾಲಯ ಧಾರವಾಡ ಮತ್ತು ರಾಯಚೂರು, ಕೃಷಿ ಇಲಾಖೆ - ಕೃಷಿ ತಂತ್ರಜ್ಞರ ಸಂಸ್ಥೆ ಬಳ್ಳಾರಿ ಇವರ ಸಹಯೋಗದಲ್ಲಿ ನಗರದ ಖಾಸಗಿ ಹೊಟೇಲ್''''ನಲ್ಲಿ ಏರ್ಪಡಿಸಿದ್ದ (ಕೃಷಿ ವಿಸ್ತರಣಾ ಸೇವೆ) ಕೃಷಿ ಪರಿಕರಗಳ ಮಾರಾಟಗಾರರಿಗಾಗಿ ಡಿಪ್ಲೋಮಾ ಪ್ರಮಾಣ ಪತ್ರಗಳ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಮನುಷ್ಯನ ಜೊತೆಗೆ ಉಳಿದೆಲ್ಲಾ ಜೀವಿಗಳು ಕೂಡ ಉಳಿಯಬೇಕು. ಅತಿ ಹೆಚ್ಚು ರಾಸಾಯನಿಕದಿಂದ ಭೂಮಿಯ ಫಲವತ್ತತೆಯ ಜೊತೆಗೆ ಜೀವವೈವಿಧ್ಯತೆಗೆ ಧಕ್ಕೆಯಾಗಲಿದೆ. ಪರಿಸರಕ್ಕೂ ಅಪಾರ ಪ್ರಮಾಣದ ಹಾನಿಯಾಗುತ್ತದೆ. ಹೀಗಾಗಿ ರೈತರು ಕೃಷಿ ಚಟುವಟಿಕೆಗಳ ವೇಳೆ ಪರಿಸರ ಹಾಗೂ ಜೀವ ಸಂಕುಲಕ್ಕೆ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸಬೇಕು ಎಂದರು.
ಬಳ್ಳಾರಿ ಜಿಲ್ಲೆಯಲ್ಲಿ ಕೃಷಿ ಪ್ರಗತಿಯತ್ತ ಹೆಜ್ಜೆ ಇಟ್ಟಿದೆ. ಅನೇಕರು ರಾಸಾಯನಿಕ ಕೃಷಿಯಿಂದ ಸಾವಯವ ಕೃಷಿಯ ಕಡೆಗೆ ಮನಸ್ಸು ಮಾಡಿದ್ದಾರೆ. ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು. ಪ್ರಮುಖವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗಾಗಿ ಅನುಷ್ಠಾನಗೊಳಿಸಿರುವ ಪ್ರಮುಖ ಕಾರ್ಯಕ್ರಮಗಳ ಕುರಿತು ಮಾಹಿತಿ ತಿಳಿದಿರಬೇಕು. ರೈತರು ಕೃಷಿ ಉತ್ಪನ್ನಕ್ಕೆ ಸೀಮಿತವಾಗದೆ ಮಾರುಕಟ್ಟೆಯ ಜಾಣ್ಮೆಯನ್ನು ತಿಳಿಯಬೇಕು ಎಂದು ಸಲಹೆ ನೀಡಿದರು.ಇದೇ ವೇಳೆ ಶಾಸಕ ನಾರಾ ಭರತ್ ರೆಡ್ಡಿ ಅವರು ಕೃಷಿ ಪರಿಕರಗಳ ಮಾರಾಟಗಾರರಿಗಾಗಿ ಡಿಪ್ಲೋಮಾ ಪ್ರಮಾಣ ಪತ್ರಗಳ ಪ್ರದಾನ ಮಾಡಿದರಲ್ಲದೆ, ಕೃಷಿಪರಿಕರ ಮಾರಾಟಗಾರರು ಮಾರುಕಟ್ಟೆಯ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಕೃಷಿ ಪರಿಕರಗಳ ಮಾರಾಟಕ್ಕೆ ಪದವಿ ಹಾಗೂ ಅಂಕಗಳಿಗಿಂತ ಮಾರುಕಟ್ಟೆಯ ತಿಳಿವಳಿಕೆ ಹಾಗೂ ಗ್ರಾಹಕರನ್ನು ಮನವೊಲಿಕೆ ಮಾಡುವ ಜಾಣ್ಮೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಕೃಷಿ ವಿವಿಯ ಡಾ.ಜಾಧವ ಎಸ್.ಎನ್, ಡಾ.ಬಿ.ಡಿ.ಬಿರಾದಾರ, ಸೋಮಸುಂದರ, ಎನ್.ಮಂಜುನಾಥ ಎನ್, ಡಾ.ರವಿಶಂಕರ್, ಡಾ.ಗೋವಿಂಪ್ಪ, ದಯಾನಂದ ಸೇರಿದಂತೆ ಹೈದ್ರಾಬಾದ್‌ನ ಮ್ಯಾನೇಜ್(MANAGE) ಸಂಸ್ಥೆ, ಕೃಷಿ ವಿಶ್ವವಿದ್ಯಾಲಯ ಧಾರವಾಡ ಮತ್ತು ರಾಯಚೂರು, ಕೃಷಿ ಇಲಾಖೆ - ಕೃಷಿ ತಂತ್ರಜ್ಞರ ಸಂಸ್ಥೆಯ ಮುಖ್ಯಸ್ಥರು ಹಾಗೂ ರೈತರು ಭಾಗವಹಿಸಿದ್ದರು.ಬಳ್ಳಾರಿಯಲ್ಲಿ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೃಷಿ ಪರಿಕರಗಳ ಮಾರಾಟಗಾರರಿಗಾಗಿ ಶಾಸಕ ನಾರಾ ಭರತ್ ರೆಡ್ಡಿ ಡಿಪ್ಲೋಮಾ ಪ್ರಮಾಣಪತ್ರಗಳನ್ನು ಪ್ರದಾನ ಮಾಡಿದರು.