ಸಾರಾಂಶ
ಹಾವೇರಿ: ದೇಶದ ಆರೋಗ್ಯ ರೈತರು ಬೆಳೆಯುವ ಬೆಳೆಗಳನ್ನು ಅವಲಂಬಿಸಿದೆ. ಕೃಷಿ ಕಾಯಕ ಹಾಗೂ ಪ್ರಸಾದ ಪ್ರಜ್ಞೆಯೊಂದಿಗೆ ದಾಸೋಹ ಭಾವದಿಂದ ಶರಣರು ಬದುಕಿ ತೋರಿಸಿದರು. ಶರಣ ಸಂಸ್ಕೃತಿ ಮೂಲವೇ ರೈತಾಪಿ ಸಂಸ್ಕೃತಿಯಾಗಿದೆ. ಕೃಷಿ ಸಂಸ್ಕೃತಿಯೇ ಎಲ್ಲ ಸಂಸ್ಕೃತಿ ಮತ್ತು ನಾಗರಿಕತೆಗಳ ಮೂಲವಾಗಿದೆ ಎಂದು ಕೊಲ್ಲಾಪುರದ ಕನ್ನೇರಿಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.ತಾಲೂಕಿನ ಅಗಡಿ ಗ್ರಾಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಸಾವಯವ ಕೃಷಿ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕ ವ್ಯವಸ್ಥೆ ನಮ್ಮ ರೈತರ ಬದುಕನ್ನು ಹದಗೆಡಿಸುತ್ತಿದ್ದು, ಅವರಲ್ಲಿ ಹೊಸ ಭ್ರಮೆಗಳನ್ನು ಹುಟ್ಟಿಸುತ್ತಿದೆ. ಹೆಚ್ಚು ಉತ್ಪನ್ನ, ಹೆಚ್ಚು ಲಾಭ ವಾಣಿಜ್ಯ ಬೆಳೆ ಶ್ರೀಮಂತಿಕೆ ಮಾರ್ಗ ಮುಂತಾದ ಭ್ರಮೆಗಳಿಂದಾಗಿ ರೈತ ಸಾಲದ ಬಲೆಗೆ ಬೀಳುತ್ತಿದ್ದಾನೆ. ಶ್ರಮ ಸಂಸ್ಕೃತಿ ಮರೆಯಾಗುತ್ತಿದೆ. ಕಾರ್ಪೊರೇಟ್ ಸಂಸ್ಕೃತಿ ಕೃಷಿಯನ್ನು ಆವರಿಸಿದ್ದು, ಇಂದು ಕೃಷಿಯನ್ನು ನಂಬಿ ರೈತರು ಜೀವನವನ್ನು ನಡೆಸಲಾಗುತ್ತಿಲ್ಲ. ಜಮೀನಿಗೆ ರಾಸಾಯನಿಕ ಬಳಸುವುದರಿಂದ ಭೂಮಿಯ ಫಲವತ್ತತೆ ಹಾಳಾಗುತ್ತದೆ ಎಂದರು. ಶಿಕ್ಷಣ ಚಿಂತಕ, ಸಾವಯವ ಕೃಷಿ ಸಂಪನ್ಮೂಲ ವ್ಯಕ್ತಿ ನಿಜಲಿಂಗಪ್ಪ ಬಸೇಗಣ್ಣಿ ಮಾತನಾಡಿ, ಹೊಸ ನಾಗರಿಕತೆ ದೈಹಿಕ ಶ್ರಮವನ್ನು ತಪ್ಪಿಸಿಕೊಳ್ಳುವುದನ್ನು ಕಲಿಸುತ್ತಿದೆ. ಇದಕ್ಕೆಲ್ಲ ಮುಖ್ಯ ಕಾರಣ ನಮ್ಮ ಶಿಕ್ಷಣ ಪದ್ಧತಿ. ಹೆಚ್ಚು ಪ್ರಮಾಣದಲ್ಲಿ ಬೆಳೆಯುವ ಹುಚ್ಚಿನಲ್ಲಿ ಮಿತಿಮೀರಿ ಕ್ರಿಮಿನಾಶಕ, ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿ ಬಂಜರು ಆಗುತ್ತಿದೆ. ಸಿರಿಧಾನ್ಯಗಳ ಬಳಕೆ ಹಾಗೂ ಸಾವಯವ ಕೃಷಿ ಬಗ್ಗೆ ಆಸಕ್ತಿ ಮೂಡಬೇಕು, ವಿದ್ಯಾವಂತರು ಕೃಷಿಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು. ನಮ್ಮ ಆರೋಗ್ಯ ಅಡಿಗೆ ಮನೆಯಲ್ಲಿದೆ. ಆಹಾರ ಔಷಧಿ ಆಗಬೇಕು, ಔಷಧಿ ಆಹಾರವಾಗಬಾರದು. ಗ್ರಾಮದ ಮಠ-ಮಂದಿರಗಳು ಆರ್ಥಿಕವಾಗಿ ಹಿಂದುಳಿದ ಕನಿಷ್ಠ ಇಬ್ಬರು ಮಕ್ಕಳನ್ನು ದತ್ತು ಪಡೆದು ಶಿಕ್ಷಣವನ್ನು ನೀಡುವಂತಾಗಬೇಕು ಎಂದರು. ಸಾವಯವ ಕೃಷಿಕ ಚಿನ್ನಪ್ಪ ಬಸೇಗಣ್ಣಿ ಮಾತನಾಡಿ, ಕನ್ನೇರಿಮಠದ ಪೂಜ್ಯರ ಕೃಷಿ ಪದ್ಧತಿಯನ್ನು ನಾನು ಅಳವಡಿಸಿಕೊಂಡು ಬೇರೆಯವರಿಗೂ ಸಾವಯವ ಕೃಷಿ ಹರಿವು ಮೂಡಿಸುತ್ತಿದ್ದೇನೆ. ಕನ್ನೇರಿ ಮಠಕ್ಕೆ ಹೋಗಿ ನಾನು ಪ್ರಭಾವಿತನಾಗಿದ್ದೇನೆ. ಸಾವಯವ ಕೃಷಿಗೆ ಸಾವಿಲ್ಲ, ಇದು ರೈತನನ್ನು ಬದುಕಿಸುತ್ತದೆ, ಅಲ್ಲದೇ ಗಿಡ-ಮರಗಳನ್ನು ಬದುಕಿಸುತ್ತಿದೆ ಎಂದರು.ಕಮಿಟಿ ಅಧ್ಯಕ್ಷ ಬಸಪ್ಪ ಬಳಲಕೊಪ್ಪ ಅಧ್ಯಕ್ಷತೆ ವಹಿಸಿ ವಹಿಸಿದ್ದರು. ಗುರುಸಿದ್ಧ ಸ್ವಾಮೀಜಿ, ಗುರುಲಿಂಗ ಸ್ವಾಮೀಜಿ, ಮಹಂತ ಸ್ವಾಮೀಜಿ, ಕಮಿಟಿಯ ಶಿವಾನಂದ ಬಳೆಗಾರ, ಕಲ್ಲವೀರಪ್ಪ ಮಠಪತಿ, ಈರಣ್ಣ, ಶಿವು ನೀಲಪ್ಪನವರ, ಮಂಜು ಕಡ್ಲಿ, ಅನಿಲ್ ಗೌಳಿ, ಹೇಮಂತ ಸಣ್ಣಪ್ಪನವರ, ಮಂಜು ಡಂಬರಮತ್ತೂರ, ಕೇಶವ ಅಕ್ಕಿ, ಜಗದೀಶ ಬಡಿಗೇರ ಇದ್ದರು. ಮಂಜಯ್ಯ ಹಿರೇಮಠ ಸ್ವಾಗತಿಸಿದರು. ನ್ಯಾಯವಾದಿ ಮಹಾಂತೇಶ ಮೂಲಿಮನಿ ನಿರೂಪಿಸಿದರು. ನಾಗರಾಜ ಬಸೇಗಣ್ಣಿ ವಂದಿಸಿದರು.