ತಾಲೂಕಿನ ಮಂಡ್ಲಿಕೊಪ್ಪದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ ಸುಮಾರು ೪ ಲಕ್ಷ ಮೌಲ್ಯದ ಕೃಷಿ ಸಾಮಗ್ರಿ ಹಾಗೂ ಫಸಲು ನೀಡುವ ಅಡಕೆ, ತೆಂಗಿನ ಮರಗಳು ಸುಟ್ಟು ಕರಕಲಾದ ಘಟನೆ ನಡೆದಿದೆ.

ಫಸಲು ನೀಡುವ ಅಡಕೆ, ತೆಂಗಿನ ಮರಗಳು ಸುಟ್ಟು ಕರಕಲು

ಕನ್ನಡಪ್ರಭ ವಾರ್ತೆ ಸಿದ್ದಾಪುರ

ತಾಲೂಕಿನ ಮಂಡ್ಲಿಕೊಪ್ಪದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ ಸುಮಾರು ₹೪ ಲಕ್ಷ ಮೌಲ್ಯದ ಕೃಷಿ ಸಾಮಗ್ರಿ ಹಾಗೂ ಫಸಲು ನೀಡುವ ಅಡಕೆ, ತೆಂಗಿನ ಮರಗಳು ಸುಟ್ಟು ಕರಕಲಾದ ಘಟನೆ ನಡೆದಿದೆ.

ಇಲ್ಲಿನ ಸುಮಾ ಹೆಗಡೆ ಎನ್ನುವವರಿಗೆ ಸೇರಿದ ಮನೆಯ ತೋಟದ ಸಮೀಪ ಈ ಅವಘಡ ಸಂಭವಿಸಿದೆ. ಅಣಬೆ (ಮಶ್ರುಮ್) ಉದ್ಯಮಕ್ಕಾಗಿ ಶೇಖರಿಸಿಡಲಾಗಿದ್ದ ಸುಮಾರು ₹೧ ಲಕ್ಷ ೯೬ ಸಾವಿರ ಮೌಲ್ಯದ ೭೦೦ ರೋಲ್ ಹುಲ್ಲು ಹಾಗೂ ₹೭೫ ಸಾವಿರ ಮೌಲ್ಯದ ೪ ಲೋಡ್‌ಗಳಷ್ಟು ಜೋಳದ ದಂಟು, ಬೆಂಕಿಯ ತೀವ್ರತೆಗೆ ಶೆಡ್‌ಗೆ ಅಳವಡಿಸಲಾಗಿದ್ದ ₹೩೨ ಸಾವಿರ ಮೌಲ್ಯದ ಶೀಟ್, ₹೧೫ ಸಾವಿರ ಮೌಲ್ಯದ ಪೈಪ್, ₹೬ ಸಾವಿರ ಬೆಲೆಬಾಳುವ ಎಲೆಕ್ಟ್ರಿಕಲ್ ವೈರ್ ಹಾಗೂ ₹೧೦ ಸಾವಿರ ಮೌಲ್ಯದ ಪ್ಯಾನಲ್ ಬೋರ್ಡ್‌ಗಳು ನಾಶವಾಗಿವೆ. ಇದರೊಂದಿಗೆ ತೋಟಕ್ಕೆ ಅಳವಡಿಸಿದ್ದ ₹೧೦ ಸಾವಿರ ಮೌಲ್ಯದ ಡ್ರಿಪ್ ಪೈಪ್‌ಗಳು ಕರಗಿ ಹೋಗಿವೆ. ದುರಂತದಲ್ಲಿ ತೋಟದಲ್ಲಿದ್ದ ಸುಮಾರು ೫೦ ಅಡಕೆ ಮರಗಳು ಹಾಗೂ ೪ ತೆಂಗಿನ ಮರಗಳು ಸುಟ್ಟು ಹೋಗಿದ್ದು, ಇವುಗಳ ಮೌಲ್ಯ ₹೩೫ ಸಾವಿರ, ಇತರೆ ವಸ್ತುಗಳು ಸೇರಿದಂತೆ ಒಟ್ಟಾರೆ ₹೩. ೯೯ ಲಕ್ಷದಷ್ಟು ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಸತತ ಕಾರ್ಯಾಚರಣೆ:

ಬೆಳಗ್ಗೆ ೧೧ ಗಂಟೆಯ ಸುಮಾರಿಗೆ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಸಂಜೆ ೬ ಗಂಟೆಯವರೆಗೂ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.