ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಹೆಬ್ಬಾಳದ ಜಿಕೆವಿಕೆಯಲ್ಲಿ ಪ್ರಸಕ್ತ ಸಾಲಿನ ಕೃಷಿ ಮೇಳವನ್ನು ‘ಹವಾಮಾನ ಚತುರ ಡಿಜಿಟಲ್ ಕೃಷಿ’ ಎಂಬ ಘೋಷವಾಕ್ಯದೊಂದಿಗೆ ನ.14 ರಿಂದ 17 ರವರೆಗೂ ಆಯೋಜಿಸಿದೆ.ಅಧಿಕ ಇಳುವರಿ ನೀಡುವ ಮುಸುಕಿನ ಜೋಳ, ಅಲಸಂದೆ, ಸೂರ್ಯಕಾಂತಿ, ನೇಪಿಯರ್‌ನ ನೂತನ ತಳಿ ಲೋಕಾರ್ಪಣೆಯಾಗಲಿವೆ. ಕಳೆ ನಿರ್ಮೂಲನೆ, ಕೀಟ ಹತೋಟಿ ಸೇರಿದಂತೆ 17 ನವೀನ ತಾಂತ್ರಿಕತೆಗಳೂ ಬಿಡುಗಡೆಯಾಗಲಿವೆ. ಸೆ.23 ರಿಂದ ಮಳಿಗೆ ಕಾಯ್ದಿರಿಸುವಿಕೆ ಪ್ರಾರಂಭವಾಗಲಿದ್ದು ಹೆಚ್ಚಿನ ಮಾಹಿತಿಗೆ ದೂ: 080-23638883, 23330153 ಸಂಪರ್ಕಿಸಬಹುದು ಎಂದು ವಿವಿಯ ವಿಸ್ತರಣಾ ನಿರ್ದೇಶಕ ವಿ.ಎಲ್.ಮಧುಪ್ರಸಾದ್ ತಿಳಿಸಿದ್ದಾರೆ.
4 ಹೊಸ ತಳಿ ಲೋಕಾರ್ಪಣೆ:ಮುಸುಕಿನ ಜೋಳದಲ್ಲಿ ಎಂಎಎಚ್ 15-84 ಎಂಬ ಮಧ್ಯಮಾವಧಿಯ ತಳಿಯನ್ನುವಿವಿ ಕಂಡು ಹಿಡಿದಿದ್ದು, ಹೆಕ್ಟೇರ್‌ಗೆ 92 ರಿಂದ 95 ಕ್ವಿಂಟಾಲ್ ಇಳುವರಿ ಬರಲಿದೆ. 80 ರಿಂದ 85 ದಿನಗಳ ಅವಧಿಯ ಅಲಸಂದೆಯ ಕೆಬಿಸಿ-12 ತಳಿಯನ್ನು ವಿವಿ ಆವಿಷ್ಕರಿಸಿದ್ದು ಹೆಕ್ಟೇರ್‌ಗೆ 14 ಕ್ವಿಂಟಾಲ್‌ವರೆಗೂ ಇಳುವರಿ ನೀಡಲಿದೆ.
80 ದಿನಗಳ ಅವಧಿಯ ಸೂರ್ಯಕಾಂತಿಯ ಕೆಬಿಎಸ್-90 ತಳಿಯು ಹೆಕ್ಟೇರ್‌ಗೆ 24 ಕ್ವಿಂಟಾಲ್‌ನಷ್ಟು ಇಳುವರಿ ಬರಲಿದ್ದು ಅಧಿಕ ತೈಲದ ಅಂಶವನ್ನು ಒಳಗೊಂಡಿದೆ. ಉತ್ತಮ ಪೌಷ್ಠಿಕಾಂಶ ಇರುವ, ಹೆಚ್ಚು ಮೇವಿನ ಇಳುವರಿ ಹೊಂದಿರುವ ಬಾಜ್ರ ನೇಪಿಯರ್ ತಳಿಯನ್ನು ಕಂಡುಹಿಡಿಯಲಾಗಿದ್ದು ಹೆಕ್ಟೇರ್‌ಗೆ 1497 ಕ್ವಿಂಟಾಲ್ ಹಸಿರು ಮೇವು ಸಿಗಲಿದೆ ಎಂದು ವಿವಿ ತಿಳಿಸಿದೆ.19 ನೂತನ ತಾಂತ್ರಿಕತೆ:
ಸುಧಾರಿತ ಬೇಸಾಯ ಪದ್ಧತಿಯಡಿ 19 ನೂತನ ತಾಂತ್ರಿಕೆಗಳನ್ನೂ ವಿವಿ ಸಂಶೋಧಿಸಿದೆ. ಕೈಚಾಲಿತ ರಾಗಿ ಹಾಗೂ ಗೊಬ್ಬರದ ಸಂಯುಕ್ತ ಕೂರಿಗೆಯನ್ನು ಸಂಶೋಧಿಸಿದ್ದು ಇಬ್ಬರು ಕೃಷಿ ಕಾರ್ಮಿಕರ ಸಹಾಯದಿಂದ ದಿನಕ್ಕೆ 1.5 ಎಕರೆಯಲ್ಲಿ ಬಿತ್ತನೆ ಮಾಡಬಹುದು. ಜತೆಗೆ ಬಹು-ಬೆಳೆ ಸಂಸ್ಕರಣಾ ಯಂತ್ರ ಆವಿಷ್ಕರಿಸಿದ್ದು ಈ ಯಂತ್ರ ಪ್ರತಿ ಗಂಟೆಗೆ 40 ರಿಂದ 50 ಕೆಜಿ ಶೇಂಗಾವನ್ನು ಗಿಡದಿಂದ ಬೇರ್ಪಡಿಸುತ್ತದೆ. ಸೂರ್ಯಕಾಂತಿ, ಮೆಕ್ಕೆಜೋಳದಿಂದ ಬೀಜಗಳನ್ನು ಬೇರ್ಪಡಿಸಲೂ ಇದನ್ನು ಉಪಯೋಗಿಸಬಹುದು.ಮುಸುಕಿನ ಜೋಳದಲ್ಲಿ ಕಳೆ ನಿರ್ವಹಣೆ, ರಸಗೊಬ್ಬರಗಳ ಸಮರ್ಪಕ ಬಳಕೆ, ತೇಗದಲ್ಲಿ ಅಂತರ ಬೆಳೆಯಾಗಿ ಮೇವಿನ ಹುಲ್ಲುಗಳು, ನೈಸರ್ಗಿಕ ಪದ್ಧತಿಯಲ್ಲಿ ಇಲಿಗಳ ನಿರ್ವಹಣೆ, ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿಕೊರಕದ ನಿರ್ವಹಣೆ ಸೇರಿದಂತೆ ಒಟ್ಟಾರೆ 19 ತಾಂತ್ರಿಕತೆಗಳನ್ನೂ ಕೃಷಿ ಮೇಳದಲ್ಲಿ ಅನಾವರಣಗೊಳಿಸಲಾಗುವುದು ಎಂದು ವಿವಿ ತಿಳಿಸಿದೆ.