ಚೇಂಬರ್‌ನ ಕಾಳಜಿಯಿಂದಾಗಿಯೇ ಅನೇಕ ಸೇವಾ ಕಾರ್ಯಗಳು ನಿರಂತರ ನಡೆದುಕೊಂಡು ಬಂದಿವೆ.
ಬಳ್ಳಾರಿ: ಕೃಷಿಕರ ಹಿತ ಕಾಯಲು ಮಹಾನಗರ ಪಾಲಿಕೆಯಿಂದ ಕೃಷಿ ಸಂತೆ ಏರ್ಪಡಿಸಲಾಗುವುದು ಎಂದು ಮೇಯರ್ ಪಿ.ಗಾದೆಪ್ಪ ಭರವಸೆ ನೀಡಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೃಷಿಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ರಾಜ್ಯ ಸರ್ಕಾರ ಮಾಡಬೇಕಿದ್ದ ಕೃಷಿ ಮೇಳದಂತಹ ರೈತಮುಖಿ ಕಾರ್ಯಕ್ರಮವನ್ನು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಹಮ್ಮಿಕೊಳ್ಳುವ ಮೂಲಕ ಕಾಳಜಿಯ ಕೈಂಕರ್ಯಕ್ಕೆ ಮುಂದಾಗಿದೆ. ಚೇಂಬರ್‌ನ ಕಾಳಜಿಯಿಂದಾಗಿಯೇ ಅನೇಕ ಸೇವಾ ಕಾರ್ಯಗಳು ನಿರಂತರ ನಡೆದುಕೊಂಡು ಬಂದಿವೆ. ಮಹಾನಗರ ಪಾಲಿಕೆ ಸಹ ರೈತರ ಹಿತ ಕಾಯಲು ಬದ್ಧವಾಗಿದೆ ಎಂದರು.
ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದ ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡ್ರಗಿ ನಾಗರಾಜ್ ಮಾತನಾಡಿ, ಹಸಿರು ಕ್ರಾಂತಿಗೆ ಮುನ್ನುಡಿ ಬರೆದ ಮಾಜಿ ಉಪ ಪ್ರಧಾನಮಂತ್ರಿ ಬಾಬು ಜಗಜೀವನರಾಮ್ ಹಾಗೂ ಜೈಜವಾನ್-ಜೈಕಿಸಾನ್ ಎಂದು ಘೋಷಿಸಿದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಕೃಷಿಯ ಮಹತ್ವವನ್ನು ಜಗತ್ತಿಗೆ ಸಾರಿದರು ಎಂದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ಜಂಟಿ ಕೃಷಿ ನಿರ್ದೇಶಕ ಕೆ.ಎಂ.ಸೋಮಸುಂದರ್, ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ, ಜಿಲ್ಲಾ ವಾಣಿಜ್ಯ- ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಅವ್ವಾರು ಮಂಜುನಾಥ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ರಾಯಚೂರು ಕೃಷಿ ವಿವಿಯ ಡೀನ್ ಡಾ.ಎ.ಜಿ. ಶ್ರೀನಿವಾಸ್, ಹಗರಿ ಕೃಷಿ ಮಹಾವಿದ್ಯಾಲಯದ ಪ್ರಭಾರ ಅಧಿಕಾರಿ ಡಾ.ಜಿ.ರವಿಶಂಕರ್, ರಾಯಚೂರು ಕೃಷಿ ವಿವಿ ಡೀನ್ ಡಾ.ಎಂ.ಭೀಮಣ್ಣ, ಹಗರಿ ಕೃಷಿ ವಿವಿಯ ಡಾ.ಪಾಲಯ್ಯ ಭಾಗವಹಿಸಿದ್ದರು.
ಜಿಲ್ಲಾ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಅಧ್ಯಕ್ಷ ಎಚ್.ತಿಮ್ಮನಗೌಡ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಮಾಜಿ ಅಧ್ಯಕ್ಷ ಬಿ.ಮಹಾರುದ್ರಗೌಡ, ದಲ್ಲಾಲಿ ವರ್ತಕರ ಸಂಘದ ಅಧ್ಯಕ್ಷ ಟಿ.ಚಿದಾನಂದಪ್ಪ, ಜಿಲ್ಲಾ ಕಾಟನ್ ಅಸೋಸಿಯೇಷನ್ ಅಧ್ಯಕ್ಷ ಡಿ.ತಿಪ್ಪೇಸ್ವಾಮಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಶಶಿಕಾಂತ್ ಕಟ್ಟಿಮನಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಎಸ್.ದೊಡ್ಡನಗೌಡ, ಮಾಜಿ ಅಧ್ಯಕ್ಷ ಸಿ.ಶ್ರೀನಿವಾಸ ರಾವ್, ಸಂಸ್ಥೆಯ ಉಪಾಧ್ಯಕ್ಷರಾದ ಗಿರಿಧರ ಸೊಂತ, ಪಿ.ಪಾಲಣ್ಣ, ಜಂಟಿ ಕಾರ್ಯದರ್ಶಿ ಡಾ.ಮರ್ಚೇಡ್ ಮಲ್ಲಿಕಾರ್ಜುನಗೌಡ, ವಿ.ರಾಮಚಂದ್ರ, ಗಣಪಾಲ್ ಐನಾಥ ರೆಡ್ಡಿ, ಕೆ.ಟಿ.ಚೌಹಾಣ್ ಮತ್ತಿತರರಿದ್ದರು. ಶ್ರೀನಿವಾಸ್ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯಕ್ರಮ ಮುನ್ನ ಎತ್ತಿನಬಂಡಿಗಳು, ವಿವಿಧ ಜಾನಪದ ಕಲಾ ತಂಡಗಳ ಮೆರವಣಿಗೆ ಜರುಗಿತು. ಮೇಳಕ್ಕೆ ಬರುವ ರೈತರ ಮಾಹಿತಿಗಾಗಿ ಬಿತ್ತನೆ ಬೀಜ, ಕೃಷಿ ಪರಿಕರಗಳ ಮಳಿಗೆ ಹಾಕಲಾಗಿತ್ತು.
ಆಹ್ವಾನ ಪತ್ರಿಕೆ: ಬಂದಿದ್ದು ಬೆರಳೆಣಿಕೆಯಷ್ಟು:ಕೃಷಿ ಮೇಳದ ಆಹ್ವಾನ ಪತ್ರಿಕೆಯಲ್ಲಿ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ, ಜಿಲ್ಲಾ ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಶಾಸಕರು, ಸಂಸದರು ಹಾಗೂ ಹಿರಿಯ ಅಧಿಕಾರಿಗಳು ಸೇರಿದಂತೆ ಒಟ್ಟು 33 ಜನರ ಹೆಸರಿಗಳಿದ್ದವು. ಆದರೆ, ಮೇಳಕ್ಕೆ ಬೆರಳೆಕೆಯಷ್ಟು ಗಣ್ಯರು ಮಾತ್ರ ಹಾಜರಿದ್ದರು. ರೈತರಿಗೆ ಮಾಹಿತಿ ನೀಡಲೆಂದೇ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳು ಮೈಕ್ ಬಳಿ ಬರುವ ಹೊತ್ತಿಗೆ ಬಹುತೇಕ ರೈತರು ಹೊರ ನಡೆದಿದ್ದರು.