ರಾಸಾಯನಿಕ ಬಳಕೆಯಿಂದ ಕೃಷಿ ಕ್ಷೇತ್ರ ಕಲುಷಿತ

| Published : Jul 04 2025, 11:47 PM IST

ಸಾರಾಂಶ

ಅತಿಯಾದ ರಾಸಾಯನಿಕ ಬಳಕೆಯಿಂದ ಕೃಷಿ ಕ್ಷೇತ್ರ ಸಂಪೂರ್ಣ ಕಲುಷಿತಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಜಿಲ್ಲೆಯಲ್ಲಿ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಸ್ತುತ ರಾಸಾಯನಿಕ ಕೃಷಿಯಿಂದಾಗಿ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ.

ಕೊಪ್ಪಳ:

ರೈತರು ರಾಸಾಯನಿಕ ಮುಕ್ತ ಕೃಷಿ ಅಳವಡಿಸಿಕೊಳ್ಳಲು ಪ್ರೇರೇಪಿಸಲು ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆ ರೂಪಿಸಿ, ಅರಿವು ಮೂಡಿಸಲಾಗುತ್ತಿದೆ ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕ (ವಿಷಯ ತಜ್ಞರು) ವಿಶಿವಶೇಖರ ಪಾಟೀಲ್ ಹೇಳಿದರು.

ಗಂಗಾವತಿ ತಾಲೂಕಿನ ವೆಂಕಟಗಿರಿ ಹೋಬಳಿಯ ಆಗೋಲಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಕೃಷಿ ಇಲಾಖೆ ಹಾಗೂ ಗಂಗಾವತಿ ಕೃಷಿ ಇಲಾಖೆ ಸಹಯೋಗದಲ್ಲಿ 2025-26ನೇ ಸಾಲಿನ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯಡಿ ಹಮ್ಮಿಕೊಂಡಿದ್ದ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅತಿಯಾದ ರಾಸಾಯನಿಕ ಬಳಕೆಯಿಂದ ಕೃಷಿ ಕ್ಷೇತ್ರ ಸಂಪೂರ್ಣ ಕಲುಷಿತಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಜಿಲ್ಲೆಯಲ್ಲಿ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಸ್ತುತ ರಾಸಾಯನಿಕ ಕೃಷಿಯಿಂದಾಗಿ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ. ಇದರಿಂದ ವಾತಾವರಣದ ಮತ್ತು ಮನುಷ್ಯ ಹಾಗೂ ಇತರೆ ಜೀವಿಗಳ ಮೇಲು ಗಂಭೀರ ಪರಿಣಾಮ ಬೀರುತ್ತಿದೆ. ಆದ್ದರಿಂದ ರಾಸಾಯನಿಕ ಮುಕ್ತ ಕೃಷಿ ಅಳವಡಿಸಲು ರೈತರನ್ನು ಪ್ರೇರೇಪಿಸಲು ಈ ಯೋಜನೆ ರೂಪಿಸಿಲಾಗಿದ್ದು, ವೆಂಕಟಗಿರಿ ಹೋಬಳಿಯಲ್ಲಿ ಆಗೋಲಿ, ವೆಂಕಟಗಿರಿ ಹಾಗೂ ಕೇಸರಟ್ಟಿ ಗ್ರಾಮವನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದೆ ಎಂದರು.

ನೈಸರ್ಗಿಕ ಕೃಷಿಯು ಜಾನುವಾರು ಮತ್ತು ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳ ಬಳಕೆ ಆಧಾರದ ಮೇಲೆ ಅವಲಂಬಿತವಾಗಿರುವ ರಾಸಾಯನಿಕ ಮುಕ್ತ ಕೃಷಿ ವ್ಯವಸ್ಥೆಯಾಗಿದ್ದು, ಭಾರತೀಯ ಸಂಪ್ರದಾಯದಲ್ಲಿ ಬೇರೂರಿರುವ ಸಮಗ್ರ ನೈಸರ್ಗಿಕ ಕೃಷಿ ಹಾಗೂ ವೈವಿಧ್ಯ ಬೆಳೆ ಪದ್ಧತಿಯಾಗಿದೆ ಎಂದು ತಿಳಿಸಿದರು.ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರದ ವಿಜ್ಞಾನಿ ಡಾ. ನಾರಪ್ಪ, ನೈಸರ್ಗಿಕ ಕೃಷಿಯಲ್ಲಿ ಮಾಗಿ ಉಳುಮೆ, ಬೆಳೆ ಪದ್ಧತಿ ಹೇಗಿರಬೇಕು, ಅಂತರ ಬೆಳೆ ಪದ್ಧತಿ ಹಾಗೂ ಮಿಶ್ರ ಬೆಳೆ ಪದ್ಧತಿಯಿಂದ ಆಗುವ ಉಪಯೋಗಗಳ ಬಗ್ಗೆ ತಿಳಿಸಿದರು.

ವೆಂಕಟಗಿರಿ ಹೋಬಳಿಯ ಕೃಷಿ ಅಧಿಕಾರಿ ಹರೀಶ ಎಸ್.ಜಿ., ನೈಸರ್ಗಿಕ ಕೃಷಿಯಲ್ಲಿ ದೇಸಿ ಆಕಳಿನ ಸಗಣಿ ಮತ್ತು ಗೋ ಮೂತ್ರದಿಂದ ಜೀವಾಮೃತ ತಯಾರಿಸುವ ವಿಧಾನ, ಬಳಕೆ ಮಾಡುವುದು, ನೈಸರ್ಗಿಕ ಕೃಷಿಯು ಪರಿಸರ ಸ್ನೇಹಿ, ರಾಸಾಯನಿಕ ಮುಕ್ತ, ಕಡಿಮೆ ವೆಚ್ಚ ಹಾಗೂ ಆರ್ಥಿಕವಾಗಿ ಸುಸ್ಥಿರವಾದ ಕೃಷಿ ಪದ್ಧತಿಯಾಗಿದ್ದು ರೈತರು ಇದನ್ನು ಅಳವಡಿಕೊಳ್ಳಬಹುದು ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸಿಬ್ಬಂದಿಗಳಾದ ಗಂಗಾಧರ, ಗಣೇಶ ಹಾಗೂ ಗಂಗಾಧರ ಹಳೆಕೋಟೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಪ್ರತಿನಿಧಿ ಲೋಕೇಶ ಹಾಗೂ ಗ್ರಾಪಂ ಅಧ್ಯಕ್ಷ ಅಮಾಜಪ್ಪ, ಸದಸ್ಯ ರಮೇಶ ಮತ್ತು ರೈತರಾದ ರಾಯಪ್ಪ, ರಾಜು, ಹಾಲಪ್ಪ, ಯಮನೂರಪ್ಪ, ಮಂಜುನಾಥ, ಶರಣಪ್ಪ ಸೇರಿದಂತೆ ಇನ್ನೂ ಅನೇಕ ರೈತರು ಉಪಸ್ಥಿತರಿದ್ದರು.