ಸಾರಾಂಶ
ಸಾಗಡೆ ಗ್ರಾಪಂ ಅಧ್ಯಕ್ಷ ಶಿವಕುಮಾರ್ ಸಲಹೆ । ಶಿಬಿರದ ಸಾಮಾನ್ಯ ಸಭೆಚಾಮರಾಜನಗರ: ಕೃಷಿ ಮಹಾವಿದ್ಯಾಲಯ ಶಿಬಿರ ಆಯೋಜಿಸಿರುವುದರಿಂದ ಹೊಸ ತಾಂತ್ರಿಕತೆಗಳನ್ನು ಕೃಷಿ ವಿದ್ಯಾರ್ಥಿಗಳು ರೈತರಿಗೆ ತಲುಪಿಸುತ್ತಿದ್ದು, ಇದರಿಂದ ಬೇಸಾಯ ಕ್ರಮದಲ್ಲಿ ಸುಧಾರಣೆ ಕಾಣಲು ಸಾಧ್ಯವಾಗುತ್ತದೆ ಎಂದು ಸಾಗಡೆ ಗ್ರಾಪಂ ಅಧ್ಯಕ್ಷ ಶಿವಕುಮಾರ್ ಹೇಳಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಾಗೂ ಚಾಮರಾಜನಗರ ಕೃಷಿ ಮಹಾವಿದ್ಯಾಲಯದಿಂದ ಅಂತಿಮ ವರ್ಷದ ಬಿ.ಎಸ್ಸಿ (ಹಾನರ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಚಾಮರಾಜನಗರ ತಾಲೂಕಿನ ಹರವೆ ಹೋಬಳಿ ಬೆಟ್ಟದಪುರ ಗ್ರಾಮದಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೃಷಿ ಕ್ಷೇತ್ರದಲ್ಲಿ ಅಧ್ಯಯನ ಹಾಗೂ ಅನ್ವೇಷಣೆ ನಿಮಿತ್ತ ನಮ್ಮ ಗ್ರಾಮಗಳಲ್ಲಿ ನೆಲೆಸಿರುವ ಚಾಮರಾಜನಗರ ಕೃಷಿ ಕಾಲೇಜಿನ ವಿದ್ಯಾರ್ಥಿಗಳಿಗೆ ನಮ್ಮ ಗ್ರಾಮಸ್ಥರು ಎಲ್ಲ ರೀತಿಯ ಸಹಕಾರ ನೀಡುವಂತೆ ತಿಳಿಸಿದರು.ಕಾರ್ಯಕ್ರಮದ ಕುರಿತು ಕೃಷಿ ಮಹಾವಿದ್ಯಾಲಯದ ಕೃಷಿ ವಿಸ್ತರಣಾ ವಿಭಾಗದ ಪ್ರಾಧ್ಯಾಪಕ ಡಾ.ಜಿ.ನಾಗೇಶ್ ಮಾತನಾಡಿ, ಮುಂದಿನ ದಿನಗಳಲ್ಲಿ ನಮ್ಮ ವಿದ್ಯಾರ್ಥಿಗಳು ವೈಜ್ಞಾನಿಕ ಹಾಗೂ ತಾಂತ್ರಿಕತೆಯನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವುದಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕೃಷಿ ಮಹಾವಿದ್ಯಾಲಯದ ವಿಸ್ತರಣಾ ವಿಭಾಗದ ಪ್ರಾಧ್ಯಾಪಕ ಡಾ.ಪಿ.ಪ್ರಕಾಶ್ ಮಾತನಾಡಿ, ರೈತರು ವಿವಿಧ ತಳಿಯ ಬೆಳೆಗಳನ್ನು ಬೆಳೆಯುವುದರ ಮೂಲಕ ಹೊಸ ತಳಿಗಳ ಮೂಲಕ ಕೃಷಿಯಲ್ಲಿ ಉತ್ಪಾದನೆ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕಿರು ನಾಟಕದ ಮೂಲಕ ರೈತರಿಗೆ ಹವಮಾನ ವೈಪರೀತ್ಯದಿಂದ ಹಾಗೂ ಕೀಟ ಪೀಡೆಗಳಿಂದ ಕೃಷಿಯಲ್ಲಿ ಉಂಟಾಗುವ ತೊಂದರೆಗಳನ್ನು ಹಾಗೂ ತಾವು ಹಳ್ಳಿಗೆ ಬಂದ ಉದ್ದೇಶವನ್ನು ವಿದ್ಯಾರ್ಥಿಗಳು ತಿಳಿಸಿದರು. ಗ್ರಾಪಂ ಸದಸ್ಯರಾದ ಸುಭದ್ರಮ್ಮ ಕಾಡಪ್ಪ ಮತ್ತು ಸುಬ್ಬಮ್ಮ ಗ್ರಾಮದ ಯಜಮಾನರಾದ ಪುಟ್ಟಪ್ಪ ಮತ್ತು ಮಾದೇವಪ್ಪ, ಗ್ರಾಮದ ರೈತರು, ಶಾಲಾ ಮಕ್ಕಳು, ಗ್ರಾಮಸ್ಧರು ಇದ್ದರು.