ಇರಾನ್ ಮತ್ತು ಇಸ್ರೇಲ್- ಅಮೆರಿಕ ದೇಶಗಳ ನಡುವೆ ಯುದ್ದ ನಡೆಯುತ್ತಿರುವುದರಿಂದ ದೇಶದಲ್ಲಿ ಪ್ರಸ್ತುತ ತೈಲದ ಸಮಸ್ಯೆ ಎದುರಾಗಿದೆ. ಆರೋಗ್ಯದ ದೃಷ್ಟಿಯಿಂದ ಖಾದ್ಯತೈಲ ಬಹಳ ಮುಖ್ಯವಾಗಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಖಾದ್ಯತೈಲ ಉತ್ಪಾದನೆಗೆ ಮಂಡ್ಯ ಜಿಲ್ಲೆಯ ಕೃಷಿ ಭೂಮಿ ಯೋಗ್ಯವಾಗಿದೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಭಾರತ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕೃಷಿ ಇಲಾಖೆ ಮಂಡ್ಯ ಮತ್ತು ಬೆಲ್ಲದ ನಾಡು ರೈತ ಉತ್ಪಾದಕರ ಕಂಪನಿಗಳ ಒಕ್ಕೂಟ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಖಾದ್ಯತೈಲ ಅಭಿಯಾನದಡಿ ಜಿಲ್ಲಾಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದರು.
ರೈತರು ಖಾದ್ಯತೈಲ ಉತ್ಪಾದನೆಯ ಕಡೆಗೆ ಮುಖಮಾಡಬೇಕಿದೆ. ಸರ್ಕಾರಗಳು ಸಹ ಕೃಷಿ ವಲಯವನ್ನು ಆದ್ಯತೆ ವಲಯವನ್ನಾಗಿ ರೂಪಿಸಿ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಜೊತೆಗೆ ಅವರ ಬೆಳೆಯುವ ಬೆಳೆಗಳ ಪದ್ಧತಿ, ಪ್ರಯೋಜನಗಳ, ಅಧಿಕ ಲಾಭ ಗಳಿಸುವ ಕುರಿತು ವಿಜ್ಞಾನಿಗಳು ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು. ಜಿಲ್ಲೆಯ ರೈತರು ನಮ್ಮ ಪೂರ್ವಿಕರು ಬೆಳೆಯುತ್ತಿದ್ದ ಬೆಳೆಗಳಿಗೆ ಸೀಮಿತಗೊಂಡಿದ್ದೇವೆ. ಇದರಿಂದ ಕೃಷಿಯಲ್ಲಿ ನಷ್ಟ ಉಂಟಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಖಾದ್ಯತೈಲ ಉತ್ಪಾದನೆ ಮಾಡುವ ಬಗ್ಗೆ ಚಿಂತನೆ ನಡೆಸಬೇಕು, ಭೂಮಿ ಫಲವತ್ತತೆ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಬೆಳೆ ಮಾದರಿಯನ್ನು ಬದಲಾವಣೆ ಮಾಡಿಕೊಳ್ಳಬೇಕು. ಇದರಿಂದ ಅಧಿಕ ಲಾಭ ಹಾಗೂ ಇಳುವರಿ ಗಳಿಸಲು ಸಾಧ್ಯ ಎಂದರು.ದೇಶದಲ್ಲಿ ಶೇ.48ರಷ್ಟು ಖಾದ್ಯತೈಲ ಉತ್ಪಾದನೆಯಾದರೆ ಉಳಿದ ಶೇ.52ರಷ್ಟು ತೈಲವನ್ನು ನಾವು ಹೊರದೇಶದಿಂದ ಅಮದು ಮಾಡಿಕೊಳ್ಳುತ್ತಿದ್ದೇವೆ. ಆರೋಗ್ಯ ದೃಷ್ಟಿಯಿಂದ ಖಾದ್ಯತೈಲ ಮುಖ್ಯ. ನಾವುಗಳು ನಮ್ಮಲ್ಲಿಯೇ ಖಾದ್ಯತೈಲ ಉತ್ಪಾದನೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕಾರಸವಾಡಿ ಮಹದೇವು ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್ ಮಾತನಾಡಿ, ಇರಾನ್ ಮತ್ತು ಇಸ್ರೇಲ್- ಅಮೆರಿಕ ದೇಶಗಳ ನಡುವೆ ಯುದ್ದ ನಡೆಯುತ್ತಿರುವುದರಿಂದ ದೇಶದಲ್ಲಿ ಪ್ರಸ್ತುತ ತೈಲದ ಸಮಸ್ಯೆ ಎದುರಾಗಿದೆ. ಆರೋಗ್ಯದ ದೃಷ್ಟಿಯಿಂದ ಖಾದ್ಯತೈಲ ಬಹಳ ಮುಖ್ಯವಾಗಿದೆ ಎಂದರು.ಕಲಬೆರಕೆ ಮಿಶ್ರಿತ ತೈಲದಿಂದಾಗಿ ಚಿಕ್ಕವಯಸ್ಸಿನ ಮಕ್ಕಳಲ್ಲಿಯೇ ಹೃದಯಾಘಾವಾಗುತ್ತಿದೆ. ಹಾಗಾಗಿ ಕೃಷಿ ಇಲಾಖೆಯಿಂದ ರೈತರಿಗೆ ಖಾದ್ಯತೈಲ ಉತ್ಪಾದನೆ ಮಾಡಿಕೊಳ್ಳಲು ಯಂತ್ರೋಪಕರಣಗಳನ್ನು ಸಹಾಯಧನದ ರೂಪದಲ್ಲಿ ಆರ್ಥಿಕ ಸಹಕಾರ ನೀಡಲಾಗುತ್ತಿದೆ ಎಂದರು.
ಇದೇ ವೇಳೆ ಕೃಷಿ ವಿಜ್ಞಾನಿಗಳಾದ ಡಾ.ಸೋಮಶೇಖರ್, ಡಾ.ಸುನೀಲ್ ಅವರಿಂದ ಖಾದ್ಯತೈಲದ ಬಗ್ಗೆ ಅರಿವು ಮೂಡಿಸಲಾಯಿತು.ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಉಪ ನಿರ್ದೇಶಕರಾದ ಆರ್.ಮುನೇಗೌಡ, ಡಾ.ಭಾನುಪ್ರಕಾಶ್, ಸಹಾಯಕ ನಿರ್ದೇಶಕ ಮಂಜುನಾಥ್, ಬೆಲ್ಲದ ನಾಡು ರೈತ ಉತ್ಪಾದಕರ ಕಂಪನಿಗಳ ಒಕ್ಕೂಟ ಅಧ್ಯಕ್ಷ ಕಾರಸವಾಡಿ ಮಹದೇವು, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಎನ್.ಚಂದ್ರಶೇಖರ್, ಹನುಮಂತೇಗೌಡ, ಹರೀಶ್, ಶಂಕರಲಿಂಗೇಗೌಡ, ಪುಟ್ಟಸ್ವಾಮಿ ಸೇರಿದಂತೆ ಹಲವರು ಇದ್ದರು.