ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಿಂದ ಹೊರಹೊಮ್ಮುವ ವಿಷಕಾರಿ ಗಾಳಿಯ ಕಣಗಳಿಂದ ಸುತ್ತಮುತ್ತಲಿನ ಕೃಷಿ ಜಮೀನುಗಳಲ್ಲಿನ ಬೆಳೆಗಳ ಹಾಳಾಗಿರುವ ಕುರಿತು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ನಡೆಸಿದ ಪರಿಶೀಲನೆ ಹಾಗೂ ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ವರದಿಯ ಹಿನ್ನೆಲೆಯಲ್ಲಿ, ಗುರುವಾರ ರೈತ ಸಂಘಟನೆಗಳ ಮುಖಂಡರು ಹಾಗೂ ರೈತರು ವಿವಿಧ ಜಮೀನುಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಸೈದಾಪುರ
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಿಂದ ಹೊರಹೊಮ್ಮುವ ವಿಷಕಾರಿ ಗಾಳಿಯ ಕಣಗಳಿಂದ ಸುತ್ತಮುತ್ತಲಿನ ಕೃಷಿ ಜಮೀನುಗಳಲ್ಲಿನ ಬೆಳೆಗಳ ಹಾಳಾಗಿರುವ ಕುರಿತು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ನಡೆಸಿದ ಪರಿಶೀಲನೆ ಹಾಗೂ ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ವರದಿಯ ಹಿನ್ನೆಲೆಯಲ್ಲಿ, ಗುರುವಾರ ರೈತ ಸಂಘಟನೆಗಳ ಮುಖಂಡರು ಹಾಗೂ ರೈತರು ವಿವಿಧ ಜಮೀನುಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿದರು. ಈ ಕುರಿತು "ಕನ್ನಡಪ್ರಭ "ದಲ್ಲಿ ಸೆ.17 ರಂದು ಪ್ರಕಟಗೊಂಡ ವಿಶೇಷ ವರದಿ ಗಮನ ಸೆಳೆದಿತ್ತು.ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿನ ವಿಜ್ಞಾನಿಗಳ ತಂಡವು ಕೈಗಾರಿಕಾ ಪ್ರದೇಶದ ಸುತ್ತಮುತ್ತಲಿನ ಜಮೀನುಗಳಿಗೆ ಭೇಟಿ ನೀಡಿ ಬೆಳೆಗಳ ಸ್ಥಿತಿ, ಕೃಷಿ ಪರಿಸ್ಥಿತಿ ಸೇರಿದಂತೆ ವಿವಿಧ ಅಂಶಗಳನ್ನು ಪರಿಶೀಲಿಸಿದೆ. ಈ ಕುರಿತು ಆಗಸ್ಟ್ 12ರಂದು ಸಂಬಂಧಿಸಿದ ಅಧಿಕಾರಿಗಳಿಗೆ ವರದಿ ಸಲ್ಲಿಸಿರುವ ದಾಖಲೆಗಳು ಇದೀಗ ರೈತರ ಗಮನ ಸೆಳೆದಿವೆ.
ವಿಜ್ಞಾನಿಗಳ ವರದಿಯಲ್ಲಿ ಕೈಗಾರಿಕಾ ಪ್ರದೇಶದ ಸುತ್ತಮುತ್ತಲಿನ ಜಮೀನುಗಳಲ್ಲಿ ಬೆಳೆಗಳ ಪರಿಶೀಲನೆ ನಡೆಸಿರುವುದು ಹಾಗೂ ಕೆಲವು ಕೃಷಿ ಸಂಬಂಧಿತ ಅಂಶಗಳನ್ನು ದಾಖಲಿಸಿರುವುದು ಉಲ್ಲೇಖವಾಗಿದೆ. ವರದಿಯ ಆಧಾರದ ಮೇಲೆ ರೈತರು ತಮ್ಮ ಜಮೀನುಗಳಲ್ಲಿನ ಬೆಳೆಗಳ ವಾಸ್ತವ ಸ್ಥಿತಿಯನ್ನು ವೈಜ್ಞಾನಿಕವಾಗಿ ದಾಖಲಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.ಈ ಹಿನ್ನೆಲೆಯಲ್ಲಿ ರೈತ ಸಂಘಟನೆಗಳ ಮುಖಂಡರು, ರೈತರು ಹಾಗೂ ಸಾಮಾಜಿಕ ಕಾರ್ಯಕರ್ತರು ಕೈಗಾರಿಕಾ ಪ್ರದೇಶದ ಸುತ್ತಮುತ್ತಲಿನ ಬೆಳೆ ಜಮೀನುಗಳಿಗೆ ತೆರಳಿ ಬೆಳೆಗಳ ಸ್ಥಿತಿ, ಕೃಷಿ ಪರಿಸ್ಥಿತಿ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸ್ಥಳದಲ್ಲೇ ಮಾಹಿತಿ ಪಡೆದುಕೊಂಡರು.
ರಾಸಾಯನಿಕ ಕಂಪನಿಗಳು ಪರಿಸರ ನಿಯಮಗಳ ಉಲ್ಲಂಘಿಸಿ ನಡೆಸುತ್ತಿರುವ ಅವೈಜ್ಞಾನಿಕ ಚಟುವಟಿಕೆಗಳ ಪರಿಣಾಮ ಕೃಷಿ ಜಮೀನುಗಳ ಬೆಳೆಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ರೈತ ಸಂಘ ಹಸಿರು ಸೇನೆಯ ಉತ್ತರ ಕರ್ನಾಟಕದ ಅಧ್ಯಕ್ಷ ದೇವೆಂದ್ರಪ್ಪಗೌಡ ಪಾಟೀಲ್ ಆತಂಕ ವ್ಯಕ್ತಪಡಿಸಿದರು. ಸಮೀಪದ ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶ ಸುತ್ತಮುತ್ತಲಿನ ರೈತ ಜಮೀನುಗಳಿಗೆ ಭೇಟಿ ನೀಡಿ ಬೆಳೆಗಳ ನಾಶದ ಬಗ್ಗೆ ರೈತರಿಂದ ಮಾಹಿತಿ ಪಡೆದ ಅವರು, ರೈತರಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ವೈಜ್ಞಾನಿಕವಾಗಿ ಪರಿಶೀಲಿಸಿ, ವಾಸ್ತವಾಂಶದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು.ರೈತ ಮುಖಂಡ ರವಿ ಪಾಟೀಲ್ ಜೋಳದಡಗಿ ಮಾತನಾಡಿ , ಇದು ಯಾವುದೇ ವ್ಯಕ್ತಿ ಅಥವಾ ಒಂದು ಗ್ರಾಮದ ಸಮಸ್ಯೆಯಲ್ಲ. ಕೈಗಾರಿಕಾ ಪ್ರದೇಶದ ಸುತ್ತಮುತ್ತ ಕೃಷಿ ನಡೆಸುತ್ತಿರುವ ರೈತರ ಜಮೀನು, ಬೆಳೆ ಮತ್ತು ಜೀವನೋಪಾಯಕ್ಕೆ ಸಂಬಂಧಿಸಿದ ವಿಚಾರ. ಆದ್ದರಿಂದ ವೈಜ್ಞಾನಿಕ ಪರಿಶೀಲನೆ ಹಾಗೂ ಪಾರದರ್ಶಕ ವರದಿ ಆಧಾರದ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು ಹಾಗೂ ಪರಿಸರ ನಿಯಮಗಳ ಉಲ್ಲಂಘಿಸಿ ಚಟವಟಿಕೆಗಳನ್ನು ಮಾಡುತ್ತಿರುವ ಉಳಿದೆಲ್ಲ ಕಂಪನಿಗಳಿಗ ಬೀಗ ಜಡಿಯುವ ಕಾರ್ಯ ಶ್ರೀಘ್ರವಾಗಿ ಜರಗಬೇಕು. ಭೂಮಿ ಉಳಿದರೆ, ರೈತ ಉಳಿಯುತ್ತಾನೆ, ರೈತರು ಇದ್ದರೆ ನಾಡಿಗೆ ಆಹಾರವಿರುತ್ತದೆ ಎಂದು ತಿಳಿಸಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಶೋಕ ಸಾಹುಕಾರ ಬಲಕಲ್, ಭಾರತ್ ಭೀಮಸೇನಾ ರಾಜ್ಯ ಉಪಾಧ್ಯಕ್ಷ, ದೇವಿಂದ್ರ ದೊರೆ ರೈತ ಮುಖಂಡರಾದ ಬಸವರಾಜ, ಸಂಗಣ್ಣ, ಮರೆಪ್ಪ ರಾಂಪೂರ, ಮಹೇಶ ರಾಚನಹಳ್ಳಿ, ಕಾಶೀನಾಥ್ ಶೆಟ್ಟಿಹಳ್ಳಿ ಸೇರಿದಂತೆ ಮುಂತಾದವರಿದ್ದರು.