ಕೃಷಿ ಸಮಾಜಕ್ಕೆ ಶಕ್ತಿ ತುಂಬಿ ರೈತರ ಪ್ರಗತಿಗಾಗಿ ಶ್ರಮಿಸಲಾಗುವುದು ಎಂದು ರಾಜ್ಯ ಪ್ರದೇಶ ಕೃಷಿಕ ಸಮಾಜದ ನೂತನ ಕಾರ್ಯಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ನಗರದ ಮಹಾದೇವಪ್ಪ ಹೇಳಿದರು.
ಶಿವಮೊಗ್ಗ: ಕೃಷಿ ಸಮಾಜಕ್ಕೆ ಶಕ್ತಿ ತುಂಬಿ ರೈತರ ಪ್ರಗತಿಗಾಗಿ ಶ್ರಮಿಸಲಾಗುವುದು ಎಂದು ರಾಜ್ಯ ಪ್ರದೇಶ ಕೃಷಿಕ ಸಮಾಜದ ನೂತನ ಕಾರ್ಯಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ನಗರದ ಮಹಾದೇವಪ್ಪ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿಕ ಸಮಾಜವು ರೈತರ ಬಹುದೊಡ್ಡ ಸಂಸ್ಥೆಯಾಗಿದೆ. ಪ್ರತಿ ತಾಲೂಕಿನಲ್ಲಿಯೂ ಇದು ಅಸ್ಥಿತ್ವದಲ್ಲಿದೆ. ಕೃಷಿ ಅಧಿಕಾರಿಗಳೂ ಇದರ ಜೊತೆಗಿದ್ದಾರೆ. ರೈತರ ಸಮಸ್ಯೆಗಳಿಗೆ ಉತ್ತರ ಕಂಡುಕೊಂಡು ಅವರ ಆರ್ಥಿಕಾಭಿವೃದ್ಧಿಗೆ ನೆರವಾಗುವ ಹಿನ್ನೆಲೆಯಲ್ಲಿ ಈ ಸಮಾಜ ಸ್ಥಾಪಿತವಾಗಿದ್ದು, ಕಾರ್ಯಾಧ್ಯಕ್ಷರಾಗಿ ನನ್ನನ್ನು ನೇಮಕ ಮಾಡಲಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷಿಸಚಿವರಿಗೆ ನನ್ನ ಕೃತಜ್ಞತೆಗಳು ಎಂದು ತಿಳಿಸಿದರು.ಕೃಷಿಕ ಸಮಾಜವು ಮುಖ್ಯವಾಗಿ ಕೃಷಿಕರ ಸಮಸ್ಯೆಗಳನ್ನು ಅಧ್ಯಯನ ಮಾಡಿ, ಅವುಗಳ ಪರಿಹಾರಕ್ಕೆ ಯತ್ನಿಸುತ್ತದೆ. ಕ್ಷೇತ್ರೋತ್ಸವ, ರೈತರ ಜಮೀನುಗಳಿಗೆ ಭೇಟಿ, ಕೃಷಿ ವಸ್ತು ಪ್ರದರ್ಶನ, ಚರ್ಚಾಗೋಷ್ಠಿ, ರೈತ ಸಮ್ಮೇಳನ, ಕೃಷಿ ನೀತಿಗಳನ್ನು ರಚಿಸುವಲ್ಲಿ ವಿಚಾರ ವಿನಿಯಮ, ಕೌಶಲ್ಯ ವೃದ್ಧಿಸಲು ರೈತರಿಗೆ ತರಬೇತಿ, ಉತ್ಪಾದನೆ ಹೆಚ್ಚಿಸಲು ಎಲ್.ಸಿ.ಕೋಲ್‌ಮ್ಯಾನ್ ಸಮಿತಿಯ ವರದಿಯಂತೆ ಸ್ಥಾಪನೆ ಮಾಡಲಾಗಿದೆ. ಇದರ ಜೊತೆಗೆ ಆಧುನಿಕ ಬೇಸಾಯ ಪದ್ಧತಿ ಹಾಗೂ ಪ್ರಗತಿಪರ ರೈತರಿಗೆ ಸನ್ಮಾನ, ರೈತರನ್ನು ಪ್ರವಾಸ ಕರೆದುಕೊಂಡು ಹೋಗುವುದು ನಮ್ಮ ಮುಂದಿನ ಗುರಿಯಾಗಿದೆ ಎಂದ ಅವರು, ಸ್ವಾಮಿನಾಥನ್ ವರದಿಯನ್ನು ಜಾರಿ ಮಾಡುವಂತೆ ಆಗ್ರಹಿಸಿದರು.ಕೇಂದ್ರ ಸರ್ಕಾರದ ಕೃಷಿ ನಿಯಮಗಳು ರಾಜ್ಯದ ರೈತರಿಗೆ ತೊಂದರೆ ಉಂಟು ಮಾಡುತ್ತಿವೆ. ರೈತರ ಏಳಿಗೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಶ್ರಮಿಸಬೇಕಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಮುಖವಾಗಿ ವಿಮಾಯೋಜನೆಗೆ ಸಂಬಂಧಿಸಿದಂತೆ ಗೊಂದಲಗಳು ಉಂಟಾಗಿವೆ. ಕೇಂದ್ರ ಸರ್ಕಾರದ ನಿಯಮದಂತೆ ಹವಾಮಾನ ವರದಿಯನ್ನು ಅನುಸರಿಸಿ ಬೆಳೆವಿಮೆ ನೀಡಬೇಕಾಗಿದೆ. ಆದರೆ ಜಿಲ್ಲೆಯಲ್ಲಿ ಹವಾಮಾನ ವರದಿಯನ್ನು ದೃಢೀಕರಿಸುವ ಮಳೆಮಾಪಕ ಯಂತ್ರಗಳೇ ಬಹುತೇಕವಾಗಿ ಹಾಳಾಗಿವೆ ಅವುಗಳನ್ನು ಸರಿಪಡಿಸಬೇಕಾಗಿದೆ ಎಂದರು.ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಸುಮಾರು 7040 ರೈತರಿಗೆ 2.88 ಕೋಟಿ ರು. ಪರಿಹಾರ ನೀಡಲಾಗಿದೆ. ಅಧಿಕಾರಿಗಳ ತಪ್ಪು ನಿರ್ಧಾರದಿಂದಾಗಿ 62 ಕೋಟಿ ರು. ಪರಿಹಾರ ರೈತರನ್ನು ತಲುಪಿಲ್ಲ. ರಾಜ್ಯ ಸರ್ಕಾರ ಘೋಷಿಸಿರುವ ಹೆಚ್ಚುವರಿ ಮೊತ್ತ ಪ್ರತಿ ಹೆಕ್ಟೇರಿಗೆ 8500 ರು. ಬಾಕಿ ಇದೆ. ಅಲ್ಲದೆ ಅಡಕೆ ಬೆಳೆಗೆ ಈ ಬಾರಿ ಕೊಳೆರೋಗ ಮತ್ತು ಎಲೆಚುಕ್ಕಿ ರೋಗ ಕಾಡುತ್ತಿದ್ದು, ಕೇಂದ್ರ ಸರ್ಕಾರ ಅಡಕೆ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಬೇಕಾಗಿದೆ. ಜಿಲ್ಲೆಯಲ್ಲಿ ಸುಮಾರು 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೊಳೆರೋಗ ಬಂದಿದೆ. 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಎಲೆಚುಕ್ಕಿ ರೋಗ ಬಂದಿದೆ. ಸರ್ಕಾರಕ್ಕೆ ಇಲಾಖೆಯವರು ಈಗಾಗಲೇ ವರದಿ ಮಾಡಿದ್ದಾರೆ ಎಂದರು.ಮೆಕ್ಕೆಜೋಳ ಮತ್ತು ಭತ್ತ ಬೆಳೆಯು ಮಳೆಹಾನಿಗೆ ಸಾಕಷ್ಟು ಒಳಗಾಗಿದೆ. ದ್ವಿದಳಧಾನ್ಯಗಳು ಸಂಪೂರ್ಣವಾಗಿ ನಾಶವಾಗಿವೆ. ಈ ಹಿನ್ನೆಲೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಭತ್ತ ಕೂಡ ನಾಶವಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೆರವಿಗೆ ಬರಬೇಕು. ಆವರ್ತನಿಧಿಯನ್ನು ಹೆಚ್ಚಿಸಬೇಕು ಮತ್ತು ಖರೀದಿ ಕೇಂದ್ರಗಳಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಮಧ್ಯವರ್ತಿಗಳಿಗೆ ಅವಕಾಶಕೊಡಬಾರದು ಎಂದು ಆಗ್ರಹಿಸಿದರು.
ಹೊಸನಗರ ತಾಲೂಕು ಅಧ್ಯಕ್ಷ ವಾಟಗೋಡು ಸುರೇಶ್ ಮಾತನಾಡಿ, ಬೆಳೆವಿಮೆಯನ್ನು ಡಿಸೆಂಬರ್ ಅಂತ್ಯದೊಳಗೆ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಜನವರಿಯಲ್ಲಿ ದೊಡ್ಡಮಟ್ಟದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ನಿರ್ದೇಶಕ ಶಿವಕುಮಾರ್, ವಿವಿಧ ತಾಲೂಕು ಅಧ್ಯಕ್ಷರಾದ ನಾಗರಾಜ್, ಚಂದ್ರಶೇಖರ್, ಸತೀಶ್, ಸುರೇಶ್, ಮಂಜುನಾಥ್, ಮಲ್ಲಿಕಾರ್ಜುನ್ ಇದ್ದರು.