ಆತ್ಮಭೂಷಣ್, ಮಂಗಳೂರು: ರೈತರಿಗೆ, ಕೃಷಿ ಉತ್ಪನ್ನಗಳಿಗೆ ಪದೇ ಪದೇ ಸಮಸ್ಯೆಗಳು ತಪ್ಪಿದ್ದಲ್ಲ. ಇದು ಸಸ್ಯ, ಕೀಟಗಳಿಂದ ತೊಡಗಿ ಇಳುವರಿ ಕೊರತೆ, ಮಾರುಕಟ್ಟೆ ಹೊಡೆತದವರೆಗೂ ನಾನಾ ಸಂಕಷ್ಟಗಳು. ಇವುಗಳನ್ನು ನಿವಾರಿಸಬೇಕಾದರೆ, ಸ್ಪಂದಿಸಬೇಕಾದರೆ ಆಯಾ ಇಲಾಖೆಗಳಿಗೆ ಅಲೆದಾಟ ನಡೆಸಬೇಕು. ಇಂತಹ ತೊಂದರೆ ತಪ್ಪಿಸಲು, ಮುಂದೆ ಒಂದೇ ಸೂರಿನಡಿ ಎಲ್ಲ ಇಲಾಖೆಗಳ ತಂತ್ರಜ್ಞರು ಒಂದೆಡೆ ಸೇರಿ ಚರ್ಚಿಸಿ ಪರಿಹಾರೋಪಾಯ ಕಲ್ಪಿಸುವ ದಿಶೆಯಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆ (ಐಎಟಿ-ಇನ್‌ಸ್ಟಿಟ್ಯೂಟ್ ಆಫ್ ಎಗ್ರಿಕಲ್ಚರ್ ಟೆಕ್ನಾಲಜಿ) ಕರಾವಳಿಯಲ್ಲಿ ಅಸ್ತಿತ್ವಕ್ಕೆ ಬರುತ್ತಿದೆ. ಕರ್ನಾಟಕದ 22 ಜಿಲ್ಲೆಗಳಲ್ಲಿ ಈಗಾಗಲೇ ಈ ಸಂಸ್ಥೆ ಅಸ್ತಿತ್ವದಲ್ಲಿದೆ. ಆದರೆ ಇದುವರೆಗೂ ರೈತರ, ಕೃಷಿ ಉತ್ಪನ್ನಗಳ ನೆಲೆವೀಡು ಕರಾವಳಿಗೆ ಈ ಸಂಸ್ಥೆ ಕಾಲಿಟ್ಟಿಲ್ಲ. ಉಡುಪಿ ಜಿಲ್ಲೆಯನ್ನು ಒಳಗೊಂಡ ಅವಿಭಜಿತ ದ.ಕ. ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರವೇ ಈ ಸಂಸ್ಥೆ ಅಸ್ತಿತ್ವಕ್ಕೆ ಬರಲಿದೆ. ಈ ಜಿಲ್ಲೆಗಳಲ್ಲಿ ಜಿಲ್ಲಾ ಘಟಕ ರಚಿಸುವ ಬಗ್ಗೆ ಸಿದ್ಧತಾ ಸಭೆ ನಡೆದಿದ್ದು, ರೂಪುರೇಷೆ ಅಂತಿಮಗೊಂಡಿದೆ. ಏನಿದು ಕೃಷಿ ತಂತ್ರಜ್ಞರ ಸಂಸ್ಥೆ?: ಇದೊಂದು ಸ್ವಯಂ ಪ್ರೇರಿತ ಸರ್ಕಾರೇತರ ಸಂಸ್ಥೆ. 1968ರಲ್ಲಿ ಆಗಿನ ಕೃಷಿ ಇಲಾಖೆ ನಿರ್ದೇಶಕ ಡಾ.ಎಚ್.ಆರ್.ಹರೇಕೇರಿ ಅವರ ಪರಿಕಲ್ಪನೆಯಲ್ಲಿ ಆರಂಭಗೊಂಡಿತು. ಈ ಸಂಸ್ಥೆಯಲ್ಲಿ ಕೃಷಿ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದ ಪದವೀಧರರು ಸದಸ್ಯರು. ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ನೀರಾವರಿ, ಕೃಷಿ ವಿಜ್ಞಾನ ಕೇಂದ್ರ ಹೀಗೆ ಕೃಷಿ ಸಂಬಂಧಿತ ಇಲಾಖೆಗಳಲ್ಲಿ ಕೃಷಿ ಮೂಲದ ಪದವಿ ಪಡೆದ ಅಧಿಕಾರಿಗಳು ಮಾತ್ರ ಸದಸ್ಯರಾಗಿರುತ್ತಾರೆ. ಆಜೀವ ಸದಸ್ಯತ್ವ ಹೊಂದಿರುವ ಕೃಷಿ ಮೂಲದ ಪದವೀಧರರಿಗೆ ಮಾತ್ರ ಇಲ್ಲಿ ಅವಕಾಶ. ಇತರೆ ಯಾವುದೇ ಪದವೀಧರ ಕೃಷಿಕರಿಗೆ ಸದಸ್ಯತ್ವದ ಅವಕಾಶ ಇಲ್ಲ.
ಒಂದು ಜಿಲ್ಲೆಯಲ್ಲಿ ಕನಿಷ್ಠ 50 ಮಂದಿ ಕೃಷಿ ಮೂಲದ ಪದವೀಧರರು ಇದ್ದರೆ ಮಾತ್ರ ಅಲ್ಲಿ ಜಿಲ್ಲಾ ಘಟಕ ಸ್ಥಾಪನೆಗೆ ಅವಕಾಶ ಇದೆ. ಈ ಸಂಸ್ಥೆಯಲ್ಲಿ ಸುಮಾರು 6 ಸಾವಿರಕ್ಕೂ ಮಿಕ್ಕಿ ಕೃಷಿ ಮೂಲದ ಪದವೀಧರ ಸದಸ್ಯರಿದ್ದಾರೆ. ಒಂದೇ ಸೂರಿನಡಿ ಕೃಷಿ ತಂತ್ರಜ್ಞರು: ಕೃಷಿ ಸಂಬಂಧಿ ಬೆಳೆಗಳಿಗೆ ತೊಂದರೆಯಾದಾಗ ಅದನ್ನು ಈ ಎಲ್ಲ ಇಲಾಖೆಗಳ ಅಧಿಕಾರಿ ಸದಸ್ಯರು ಒಟ್ಟಿಗೆ ಕುಳಿತು ತಾಂತ್ರಿಕವಾಗಿ ಸಮಸ್ಯೆ ನಿವಾರಣೆಗೆ ಯತ್ನಿಸುತ್ತಾರೆ. ಜ್ವಲಂತ ಸಮಸ್ಯೆಗಳ ಇತ್ಯರ್ಥಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡುತ್ತಾರೆ. ಬಜೆಟ್‌ನಲ್ಲಿ ಕೃಷಿಗೆ ಸಂಬಂಧಿಸಿದ ಹಣಕಾಸಿನ ನೆರವಿಗೆ ಪ್ರಸ್ತಾವನೆ, ಜಿಐ ಟ್ಯಾಗ್ ಉತ್ಪನ್ನಗಳಿಗೆ ಆದ್ಯತೆ, ರೈತರಿಗೆ ಕೃಷಿ ಅರಿವು, ಕಾರ್ಯಾಗಾರ ಇತ್ಯಾದಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಈ ಸಂಸ್ಥೆಯ ಚಟುವಟಿಕೆ. ಸಾಮಾನ್ಯವಾಗಿ ಕೃಷಿ ಉತ್ಪನ್ನಗಳಿಗೆ ತೊಂದರೆ ಕಾಣಿಸಿದಾಗ ಈ ತಂತ್ರಜ್ಞರು ಕೃಷಿ ವಿಜ್ಞಾನಿಗಳನ್ನು ಕರೆಸಿ ಸಮಾಲೋಚನೆ ನಡೆಸಿ ಪರಿಹಾರ ಕ್ರಮಗಳ ಬಗ್ಗೆ ಚರ್ಚೆ ನಡೆಸಿ ಸರ್ಕಾರದ ಗಮನಕ್ಕೆ ತರುತ್ತಾರೆ. ಮುಖ್ಯವಾಗಿ ತಾಂತ್ರಿಕ ಸಲಹೆ, ಸೂಚನೆಗಳನ್ನು ನೀಡುವುದು ಇವರ ಆದ್ಯತೆ.ಕರಾವಳಿ ಕೃಷಿಕರಿಗೆ ಏನು ಲಾಭ?: ಕರಾವಳಿ ಜಿಲ್ಲೆಯಲ್ಲಿ ಮುಖ್ಯವಾಗಿ ಅಡಕೆ ಬೆಳೆಗೆ ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗ, ಮಹಾಳಿ ರೋಗ ಅಲ್ಲದೆ ಭತ್ತ, ಕಾಳುಮೆಣಸು, ಕೋಕೋ, ಬಾಳೆ ಸೇರಿದಂತೆ ಎಲ್ಲ ರೀತಿಯ ಕೃಷಿ ಉತ್ಪನ್ನಗಳಿಗೆ ಕಾಣಿಸುವ ತೊಂದರೆಗಳಿಗೆ ಸೂಕ್ತ ಪರಿಹಾರಕ್ಕೆ ಈ ಕೃಷಿ ತಂತ್ರಜ್ಞರ ಸಮಿತಿ ವೇದಿಕೆಯಾಗಲಿದೆ. ಇದು ಸರ್ಕಾರಿ ಮಟ್ಟದಲ್ಲಿ ಪರಿಹಾರ ಕ್ರಮಗಳಿಗೆ ಶಿಫಾರಸು ಮಾಡುತ್ತದೆ ಎನ್ನುತ್ತಾರೆ ಕೆವಿಕೆ ಮುಖ್ಯಸ್ಥ, ಹಿರಿಯ ವಿಜ್ಞಾನಿ ಡಾ. ಟಿ.ಜೆ. ರಮೇಶ.ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಂಸ್ಥೆಯ ರಚನೆಯ ಪೂರ್ವಸಿದ್ಧತಾ ಸಭೆಯಲ್ಲಿ ಬ್ಯಾಂಕರರು, ಉದ್ಯಮಿಗಳು, ಪ್ರಗತಿಪರ ರೈತರು ಹಾಗೂ ವಿವಿಧ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ಮತ್ತು ಐಸಿಎಆರ್-ಡಿಸಿಆರ್, ಕೃಷಿ ವಿಜ್ಞಾನ ಕೇಂದ್ರ, ಮೀನುಗಾರಿಕಾ ಕಾಲೇಜು ಮತ್ತು ಫುಡ್ ಚೈನ್ ಅಭಿಯಾನದ ಪ್ರತಿನಿಧಿಗಳು ಭಾಗವಹಿಸಿದ್ದರು.
ಈ ಸಂಸ್ಥೆಯು ತನ್ನ ಸದಸ್ಯರು ಮತ್ತು ಕೃಷಿಕರ ವೃತ್ತಿಪರ ಸಾಮರ್ಥ್ಯವನ್ನು ಹೆಚ್ಚಿಸಲು ಸಹಕಾರಿ ಆಗುವುದಲ್ಲದೆ, ಕೃಷಿ ವ್ಯವಹಾರದಲ್ಲಿ ತೊಡಗಿರುವ ಹಿತಾಸಕ್ತಿದಾರರ ಅಗತ್ಯಗಳನ್ನು ಪೂರೈಸಲು ಇದು ವೇದಿಕೆಯಾಗುತ್ತದೆ. ಒಂದೇ ಕಡೆಯಲ್ಲಿ ಕೃಷಿ ತಂತ್ರಜ್ಞರ ನೆರವು, ಸಲಹೆ ರೈತರಿಗೆ ಅನುಕೂಲಕರವಾಗಲಿದೆ. ಇದು ಕೃಷಿ ಅಭ್ಯುದಯಕ್ಕೂ ಸಹಕಾರಿಯಾಗಲಿದೆ.-ಡಾ. ಎ.ಬಿ.ಪಾಟೀಲ, ಅಧ್ಯಕ್ಷರು, ಕೃಷಿ ತಂತ್ರಜ್ಞರ ಸಂಸ್ಥೆ, ಬೆಂಗಳೂರು