ಮುಂಗಾರು ಬಿತ್ತನೆಗೆ ಹಾನಗಲ್ಲ ಕೃಷಿ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ೪೬,೬೮೭ ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಇಲ್ಲದಂತೆ ತಾಲೂಕಿನ ೮ ಕಡೆಗೆ ರಿಯಾಯಿತಿ ದರದ ಬಿತ್ತನೆ ಬೀಜ ವಿತರಣೆಗೆ ಸಜ್ಜುಗೊಂಡಿದೆ.

ಮಾರುತಿ ಶಿಡ್ಲಾಪೂರ

ಹಾನಗಲ್ಲ: ಈ ಬಾರಿ ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ೪೬,೬೮೭ ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಇಲ್ಲದಂತೆ ತಾಲೂಕಿನ ೮ ಕಡೆಗೆ ರಿಯಾಯಿತಿ ದರದ ಬಿತ್ತನೆ ಬೀಜ ವಿತರಣೆಗೆ ಕೃಷಿ ಇಲಾಖೆ ಸಜ್ಜುಗೊಂಡಿದೆ.

ಬಿತ್ತನೆಗಾಗಿ ಭೂಮಿ ಸಿದ್ಧ ಮಾಡಿಕೊಳ್ಳಲು ಅನುಕೂಲ ಆಗುವಷ್ಟು ಮಳೆ ಇಡೀ ತಾಲೂಕಿನಾದ್ಯಂತ ಬಿದ್ದಿಲ್ಲ. ಕೆಲವೆಡೆ ಮಳೆ ಚೆನ್ನಾಗಿ ಬಿದ್ದಿದೆಯಾದರೂ ಹಿಂಗಾರು ಗೋವಿನಜೋಳ ಸೇರಿದಂತೆ ವಿವಿಧ ಫಸಲಿನ ಕೊಯ್ಲು ಆರಂಭವಾಗಿದೆ. ೨೪,೨೫೪ ಹೆಕ್ಟೇರ್‌ನಲ್ಲಿ ಗೋವಿನ ಜೋಳ, ೧೪,೬೩೫ ಹೆಕ್ಟೇರ್‌ನಲ್ಲಿ ಭತ್ತ, ೪೪ ಹೆಕ್ಟೇರ್ ದ್ವಿದಳ ಧಾನ್ಯ, ೨೭೫೮ ಹೆಕ್ಟೇರ್‌ನಲ್ಲಿ ಎಣ್ಣೆಕಾಳು ಹಾಗೂ ವಾಣಿಜ್ಯ ಬೆಳೆಗಳನ್ನು ಈ ಬಾರಿ ಬೆಳೆಯಬಹುದು ಎಂದು ಅಂದಾಜಿಸಲಾಗಿದೆ.

ಬಿತ್ತನೆ ಬೀಜ: ಮೇ ೨೦ರಿಂದ ಹಾನಗಲ್ಲ, ಅಕ್ಕಿಆಲೂರು, ಚಿಕ್ಕಾಂಸಿಹೊಸೂರ, ಆಡೂರು, ತಿಳವಳ್ಳಿ, ಬಮ್ಮನಹಳ್ಳಿ, ಬೆಳಗಾಲಪೇಟೆ, ಮಾರನಬೀಡ, ಸೇರಿದಂತೆ ೮ ಬಿತ್ತನೆಬೀಜ ವಿತರಣಾ ಕೇಂದ್ರಗಳಲ್ಲಿ ರಿಯಾಯಿತಿ ದರದ ಬಿತ್ತನೆ ಬೀಜ ವಿತರಣೆ ಆರಂಭಿಸುವ ಸಿದ್ಧತೆ ನಡೆದಿದೆ. ಸಾಮಾನ್ಯ ರೈತರಿಗೆ ಶೇ. ೫೦ ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದ ರೈತರಿಗೆ ಶೇ. ೯೦ರ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತದೆ. ೮೧೬ ಕ್ವಿಂಟಲ್ ಗೋವಿನ ಜೋಳ, ೩೨೫೪ ಕ್ವಿಂಟಲ್‌ ಭತ್ತ, ೨೨೪೨ ಕ್ವಿಂಟಲ್‌ ಸೋಯಾಬಿನ್, ೧೩೮ ಕ್ವಿಂಟಲ್‌ ಶೇಂಗಾ ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು, ಒಂದೆರಡು ದಿನಗಳಲ್ಲಿ ಬೀಜ ದಾಸ್ತಾನು ಆಗಲಿದೆ.

ರಸಗೊಬ್ಬರ: ಪ್ರಸಕ್ತ ಮುಂಗಾರು ಹಂಗಾಮಿಗಾಗಿ ೨೬,೨೩೦ ಟನ್ ರಸಗೊಬ್ಬರದ ಬೇಡಿಕೆ ಇದೆ. ಈಗಾಗಲೇ ಏಪ್ರಿಲ್‌ ಹಾಗೂ ಮೇ ತಿಂಗಳ ಬೇಡಿಕೆಗನುಗುಣವಾಗಿ ೧೨೪೫ ಟನ್ ಯೂರಿಯಾ, ೩೭೦೦ ಟನ್ ಡಿಎಪಿ, ೨೪೩ ಟನ್ ಎಂಒಪಿ, ೧೧೫೦ ಟನ್ ಕಾಂಪ್ಲೆಕ್ಸ್‌ ರಸಗೊಬ್ಬರ ಪೂರೈಕೆ ಇದೆ.

ನ್ಯಾನೋ: ರೈತರು ಯೂರಿಯಾ ಬಳಕೆಯ ವಿಷಯದಲ್ಲಿ ನ್ಯಾನೋ ಯೂರಿಯಾ ಸಿಂಪರಣೆ ಹೆಚ್ಚು ಲಾಭ ಹಾಗೂ ಅನುಕೂಲಕರವಾದುದು. ಇದರ ಬಳಕೆಯಿಂದ ಶ್ರಮವೂ ಕಡಿಮೆ ಹಾಗೂ ಆರ್ಥಿಕ ಉಳಿತಾಯವೂ ಇದೆ. ಅಲ್ಲದೆ ಯೂರಿಯಾ ಸೇರಿದಂತೆ ವಿವಿಧ ರಾಸಾಯನಿಕ ಗೊಬ್ಬರವನ್ನು ಡ್ರೋನ್ ಮೂಲಕವೂ ಸಿಂಪಡಿಸಬಹುದಾಗಿದೆ. ಆದರೆ ರೈತರು ಡ್ರೋನ್ ಮೂಲಕ ರಸಗೊಬ್ಬರ ಸಿಂಪರಣೆ ಮುಂದಾಗುತ್ತಿಲ್ಲ.

ಕಳ್ಳಸಾಗಣೆ: ವಿಶೇಷವಾಗಿ ಯೂರಿಯಾ ರಸಗೊಬ್ಬರ ಕಾಳಸಂತೆಯಲ್ಲಿ ಖರೀದಿಸಿ ಕಳ್ಳಸಾಗಣೆ ಮಾಡಲಾಗುತ್ತದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹಾನಗಲ್ಲ ತಾಲೂಕಿನ ೪೨ ಗ್ರಾಪಂ ಮಟ್ಟದಲ್ಲಿ ಜಾಗೃತಿ ಮೂಡಿಸಿ, ಸಮಿತಿ ರಚಿಸಲಾಗಿದೆ. ಅಲ್ಲದೆ ಧರತಿ ಬಚಾವೋ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದೆ. ಕಾಳಸಂತೆಯಲ್ಲಿ ಯೂರಿಯಾ ಮಾರಾಟದ ಸುಳಿವು ಸಿಕ್ಕಲ್ಲಿ ಕೃಷಿ ಇಲಾಖೆ ಅಥವಾ ಆಯಾ ಗ್ರಾಪಂ ವ್ಯಾಪ್ತಿಯ ಜಾಗೃತಿ ಸಮಿತಿಗೆ ಮಾಹಿತಿ ನೀಡಿದಲ್ಲಿ ತಕ್ಷಣ ಕ್ರಮ ಕೈಗೊಳ್ಳುವ ಯೋಜನೆಯನ್ನು ಕೃಷಿ ಇಲಾಖೆ ರೂಪಿಸಿದೆ. ಈ ಬಾರಿ ಕೆ.ಕಿಸನ್ ಆ್ಯಪ್ ಮೂಲಕವೇ ಎಫ್‌ಐಡಿ ಆಧಾರಿತವಾಗಿಯೇ ಎಲ್ಲ ಕೃಷಿ ಪರಿಕರ ಮಾರಾಟಗಾರರು ರಸಗೊಬ್ಬರ ಮಾರಾಟ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ವಿತರಣೆಗೆ ಕ್ರಮ: ಮುಂಗಾರು ಹಂಗಾಮಿಗಾಗಿ ಬಿತ್ತನೆ ಬೀಜ ಹಾಗೂ ಯಾವುದೇ ರಸಗೊಬ್ಬರದ ಕೊರತೆ ಆಗುವುದಿಲ್ಲ. ಆದರೆ ಈ ಬಾರಿ ಅಭಿಲಾಷ ಭತ್ತದ ಬೀಜ ಕೃಷಿ ಇಲಾಖೆಯಲ್ಲಿ ಲಭ್ಯವಿಲ್ಲ. ರೈತರು ಈ ಬಾರಿ ನ್ಯಾನೋ ಯೂರಿಯಾವನ್ನೇ ಬಳಸಲು ಇಲಾಖೆಯಿಂದ ಮನವಿ ಮಾಡಿಕೊಳ್ಳುತ್ತೇವೆ. ಇದು ಎಲ್ಲ ರೀತಿಯಿಂದ ಲಾಭಕರ. ವಾಡಿಕೆ ಮಳೆಯಾಗಿಲ್ಲ. ಇನ್ನೂ ಕೃಷಿ ಭೂಮಿ ಸಿದ್ಧತೆ ಆಗಿಲ್ಲ. ಕೃಷಿ ಇಲಾಖೆಯಿಂದ ಯಾವುದೇ ಅನನುಕೂಲ ಆಗದಂತೆ ಬೀಜ ಗೊಬ್ಬರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹಾನಗಲ್ಲ ಸಹಾಯಕ ಕೃಷಿ ನಿರ್ದೇಶಕ ಸಿ.ಟಿ. ಸುರೇಶ ಹೇಳಿದರು.