ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಜಿಲ್ಲೆಯ ಬೆಳವಣಿಗೆಗೆ ಹಾಗೂ ಅಭಿವೃದ್ಧಿಯತ್ತ ಸಾಗಲು ಜೂನ್ ೧೩ ಮತ್ತು ೧೪ ರಂದು ಮುನ್ನಡೆ ಮಂಡ್ಯ ವಿಷನ್ -೨೦೩೫ ರ ಎರಡು ದಿನಗಳ ಕೃಷಿ ಉದ್ಯಮ ಅಧಿವೇಶನ ಕಾರ್ಯಾಗಾರ ಆಯೋಜಿಸಿದ್ದು, ಉದ್ಯಮಿಗಳು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಮುನ್ನಡೆ ಮಂಡ್ಯ ವಿಷನ್ -೨೦೩೫ ಕಾರ್ಯಾಗಾರದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂಡ್ಯ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಜಿಲ್ಲೆಯಲ್ಲಿ ಹೈನುಗಾರಿಕೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಉದ್ಯಮವನ್ನು ಮಾಡುತ್ತಿರುವ ಉದ್ಯಮಿದಾರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಯಮಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಳ್ಳುವಂತೆ ತಿಳಿಸಿದರು.
ಉದ್ಯಮಿಗಳು ಉತ್ಪಾದನೆಯಲ್ಲಿ ಉತ್ತಮ ಬ್ರಾಂಡಿಂಗ್ ಮತ್ತು ಉತ್ಪಾದನೆಯ ಗುಣಮಟ್ಟ ತುಂಬಾ ಅಗತ್ಯವಾಗಿದ್ದು, ಆದುದರಿಂದ ಕಾರ್ಯಾಗಾರದಲ್ಲಿ ಮಾಹಿತಿಯನ್ನು ಉದ್ಯಮಿದಾರಿಗೆ ನೀಡಿ ರೈತರಲ್ಲಿ ಉದ್ಯಮಶೀಲತೆ ಮನೋಭಾವನೆ ಬೆಳೆಸುವುದು ಮತ್ತು ಅವರನ್ನು ಸ್ವಾವಲಂಬಿ ಕೃಷಿ ಉದ್ಯಮಿಗಳಾಗಿ ರೂಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ಎಲ್ಲಾ ಇಲಾಖೆವಾರು ಕಾರ್ಯಾಗಾರದ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದರು.ಎಲ್ಲಾ ಇಲಾಖೆಗಳು ಸಹ ಸರ್ಕಾರದ ಸೌಲಭ್ಯಗಳ ಮಾಹಿತಿ ಹಾಗೂ ಸಂಪನ್ಮೂಲಗಳು ಸೌಲಭ್ಯಗಳನ್ನು ರೈತರಿಗೆ (ಉದ್ಯಮಿಗಳಿಗೆ ) ಒದಗಿಸಬೇಕು ಮತ್ತು ಅವಕಾಶಗಳನ್ನು ಉದ್ಯಮಿಗಳು ಬಳಸಿಕೊಳ್ಳುವಂತೆ ಎಲ್ಲಾ ಇಲಾಖೆಗಳು ಸಹಕರಿಸಬೇಕು ಎಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ವಿ.ಎಸ್.ಅಶೋಕ್ ಮಾತನಾಡಿ, ರೈತರಲ್ಲಿ ಉದ್ಯಮಶೀಲತೆ ಮನೋಭಾವನೆ ಬೆಳೆಸುವುದು ಮತ್ತು ಅವರನ್ನು ಸ್ವಾವಲಂಬಿ ಕೃಷಿ ಉದ್ಯಮಿಗಳಾಗಿ ರೂಪಿಸುವುದು ಕಾರ್ಯಾಗಾರದ ಉದ್ದೇಶವಾಗಿದೆ ಎಂದರು.
ಜಿಲ್ಲೆಯಲ್ಲಿ ರೈತರು ಸಂಸ್ಕರಣೆ, ಮೌಲ್ಯವರ್ಧನೆ, ಮಾರ್ಕೆಟಿಂಗ್ ಹಾಗೂ ಆರ್ಥಿಕ ನಿರ್ವಹಣೆ ಸೇರಿದಂತೆ ವಿವಿಧ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಮೂಲಕ ರೈತರು ಕೇವಲ ಉತ್ಪಾದಕರಾಗಿಯೇ ಉಳಿಯದೆ ಕೃಷಿ ಉದ್ಯಮಿಗಳಾಗಿ ಬೆಳೆಯಬೇಕು ಎಂಬ ದೃಷ್ಟಿಯಿಂದ ಕಾರ್ಯಾಗಾರವನ್ನು ಆಯೋಜಿಸಿದ್ದು ಉದ್ಯಮಿಗಳು ಇದರಲ್ಲಿ ಭಾಗವಹಿಸಿದಲ್ಲಿ ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಸಭೆಯಲ್ಲಿ ಫಸ್ಟ್ ಸರ್ಕಲ್ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ, ಕಾರ್ಯಾಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಕಾರಸವಾಡಿ ಮಹದೇವ್, ಯೋಜನಾಧಿಕಾರಿಗಳಾದ ಯೋಗೇಶ್, ಶಿವಕುಮಾರ್, ಹಾಗೂ ವಿವಿಧ ಇಲಾಖೆಯ ಅಕಾರಿಗಳು ಉಪಸ್ಥಿತರಿದ್ದರು.