ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿ ಜ.25ರಂದು ನಗರದ ವಸ್ತುಪ್ರದರ್ಶನ ಆವರಣದಲ್ಲಿ ಬೃಹತ್ ಅಹಿಂದ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಹಾಗೂ ಅಹಿಂದ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿ ಜ.25ರಂದು ನಗರದ ವಸ್ತುಪ್ರದರ್ಶನ ಆವರಣದಲ್ಲಿ ಬೃಹತ್ ಅಹಿಂದ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಹಾಗೂ ಅಹಿಂದ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.ನಗರದಲ್ಲಿ ಬುಧವಾರ ಸಮಾವೇಶದ ಪೂರ್ವಭಾವಿ ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕೆ.ಎಸ್.ಶಿವರಾಮು, ರಾಜ್ಯದಲ್ಲಿ ಅಧಿಕಾರ ಹಂಚಿಕೆ ಸಂಬಂಧ ಉಂಟಾಗಿರುವ ಗೊಂದಲವನ್ನು ಕಾಂಗ್ರೆಸ್ ಹೈಕಮಾಂಡ್ ಬಗೆಹರಿಸಬೇಕು. ಈ ಹಿನ್ನೆಲೆಯಲ್ಲಿ ಅಹಿಂದ ಸಮಾವೇಶ ನಡೆಸಲು ಉದ್ದೇಶಿಸಿದ್ದು, ಸುಮಾರು 20 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಜನಪರ ಕೆಲಸ ಮಾಡಿದ್ದಾರೆ. ಈ ಕಾರಣಕ್ಕಾಗಿ 2023ರಲ್ಲಿ ಕಾಂಗ್ರೆಸ್ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಅವರು ಹಿಂದುಳಿದ ವರ್ಗಗಳ ತಂದೆ ಇದ್ದಂತೆ. ಈ ವರ್ಗಕ್ಕೆ ಅವರಿಂದ ಇನ್ನೂ ಸಾಕಷ್ಟು ಕೆಲಸ ಆಗಬೇಕಿದೆ. ಇದಕ್ಕಾಗಿ ನಾವು ಹಕ್ಕೊತ್ತಾಯ ಸಮಾವೇಶ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.ಅಹಿಂದ ಸಮುದಾಯ ಕಾಂಗ್ರೆಸ್ ಪಕ್ಷದ ಬೆನ್ನೆಲುಬು. ಕಳೆದ ಬಾರಿ ಚುನಾವಣೆಯಲ್ಲಿ ಶೇ.75ರಷ್ಟು ಅಹಿಂದ ಮತಗಳು ಕಾಂಗ್ರೆಸ್‌ಗೆ ಬಂದಿವೆ. ಸಿದ್ದರಾಮಯ್ಯ ಅವರಂತಹ ಮುತ್ಸದ್ಧಿಗಳು ನಮ್ಮ ಸಮುದಾಯಕ್ಕೆ ನ್ಯಾಯ ಕೊಡಿಸುತ್ತಾರೆ ಎಂಬ ವಿಶ್ವಾಸದಲ್ಲಿ ಮತ ಹಾಕಿದ್ದಾರೆ ಎಂದು ಅವರು ತಿಳಿಸಿದರು.
ಈ ಸಮಾವೇಶ ಯಾರ ವಿರುದ್ಧವೂ ಅಲ್ಲ. ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವುದಕ್ಕೆ ನಮ್ಮ ಅಭ್ಯಂತರ ಇಲ್ಲ. ಅವರಿಗೆ ಅರ್ಹತೆ ಕೂಡ ಇದೆ. ಆದರೆ, ಅಹಿಂದ ವರ್ಗಗಳ ಏಳಿಗೆಗೆ ಸಿದ್ದರಾಮಯ್ಯ ಅವರು ಮುಂದುವರಿಯಬೇಕು ಎಂಬುದು ನಮ್ಮ ಒತ್ತಾಯ ಎಂದು ಅವರು ಹೇಳಿದರು.ರಂಗಾಯಣದ ಮಾಜಿ ನಿರ್ದೇಶಕ ಎಚ್. ಜನಾರ್ಧನ್ (ಜನ್ನಿ) ಮಾತನಾಡಿ, ಇಂದು ಅಹಿಂದ ವರ್ಗಗಳ ಅಭಿವೃದ್ಧಿ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ನಾವು ಹೆಜ್ಜೆ, ಹೆಜ್ಜೆಗೂ ಅವಮಾನಿತರಾಗುತ್ತಿದ್ದೇವೆ. ಹೀಗಾಗಿಯೇ ಸಿದ್ದರಾಮಯ್ಯ ಅವರಂತಹ ಜನ ನಾಯಕರು ನಮಗೆ ಬೇಕು ಎಂದರು.ಅಹಿಂದ ಕಾರ್ಯಾಧ್ಯಕ್ಷ ಶಿವಣ್ಣ ಮಾತನಾಡಿ, ಸಿದ್ದರಾಮಯ್ಯ ಅವರು ಅಹಿಂದ ನಾಯಕರು. ಅವರು ಎಂದೂ ಜಾತಿಗೆ ಸೀಮಿತವಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಸಿದ್ದರಾಮಯ್ಯ ಅವರ ಪರಿಶ್ರಮ ಸಾಕಷ್ಟಿದೆ. ಅವರು ಕಾಂಗ್ರೆಸ್ ಪಕ್ಷದ ಮಾಸ್ ಲೀಡರ್ ಎಂದರು.