ಶಾಸಕ ಯತ್ನಾಳರಿಂದ ಅಹೋರಾತ್ರಿ ಧರಣಿ ಇಂದು

| Published : Nov 04 2024, 12:37 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಕಾನೂನು ಬಾಹಿರವಾಗಿ ರೈತರ, ಸಂಘ-ಸಂಸ್ಥೆಗಳ, ಮಠಗಳ ಜಮೀನು, ಅಲ್ಲದೇ ಸರ್ಕಾರಿ ಜಮೀನು ಇತ್ಯಾದಿ ಆಸ್ತಿಗಳ ಉತಾರೆಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದು ಮಾಡಿರುವುದನ್ನು ತಕ್ಷಣ ತೆಗೆದು ಹಾಕುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನ.4ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ11ಕ್ಕೆ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗೆ ಮೂಲಕ ತೆರಳಿ ನಗರದ ಜಿಲ್ಲಾಧಿಕಾರಿ ಕಚೇರಿ ಹೊರಭಾಗದಲ್ಲಿ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭಿಸಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಕಾನೂನು ಬಾಹಿರವಾಗಿ ರೈತರ, ಸಂಘ-ಸಂಸ್ಥೆಗಳ, ಮಠಗಳ ಜಮೀನು, ಅಲ್ಲದೇ ಸರ್ಕಾರಿ ಜಮೀನು ಇತ್ಯಾದಿ ಆಸ್ತಿಗಳ ಉತಾರೆಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದು ಮಾಡಿರುವುದನ್ನು ತಕ್ಷಣ ತೆಗೆದು ಹಾಕುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನ.4ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ11ಕ್ಕೆ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗೆ ಮೂಲಕ ತೆರಳಿ ನಗರದ ಜಿಲ್ಲಾಧಿಕಾರಿ ಕಚೇರಿ ಹೊರಭಾಗದಲ್ಲಿ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭಿಸಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ. ಭಾನುವಾರ ಸಂಜೆ ಧರಣಿ ಸ್ಥಳ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಹೊರಭಾಗಕ್ಕೆ ಭೇಟಿ ನೀಡಿದ ಶಾಸಕ ಯತ್ನಾಳ ವೀಕ್ಷಿಸಿದರು.ಈ ಕುರಿತು ಪ್ರಕಟಣೆ ನೀಡಿರುವ ಅವರು, ಈಗಾಗಲೇ ನೋಟಿಸ್ ಕೊಟ್ಟು ಅಥವಾ ಕೊಡದೆ ಉತಾರೆಗಳಲ್ಲಿ ವಕ್ಫ್‌ ಆಸ್ತಿ ಎಂದು ನಮೂದಿಸಿರುವುದನ್ನು ತೆಗೆದು ಹಾಕಬೇಕು. ಉತಾರೆಯ ಯಾವುದೇ ಕಾಲಂ‌ನಲ್ಲು ವಕ್ಫ್‌ ಇರಬಾರದು, ಆಸ್ತಿಗಳಿಗೆ ಸಂಬಂಧಿಸಿದ ತಕರಾರು ಸಾಮಾನ್ಯ ಕೋರ್ಟ್‌ಗಳಲ್ಲೇ ಇತ್ಯರ್ಥ ಆಗಬೇಕು, ವಕ್ಫ್‌ ನ್ಯಾಯಾಲಯಕ್ಕೆ ಅವಕಾಶ ಬೇಡ, ವಕ್ಫ್‌ ಅದಾಲತ್‌ನಿಂದ ಸರ್ಕಾರಿ ನ್ಯಾಯಾಲಯಕ್ಕೆ ಮಹತ್ವ ಕಡಿಮೆ ಆಗಲಿದ್ದು, ಎಲ್ಲಿಯೂ ವಕ್ಫ್‌ ಅದಾಲತ್ ನಡೆಸಬಾರದು.

ಮುಂದೆ ನೋಟಿಸ್‌ಗಳನ್ನು ನೀಡದಂತೆ ಜಿಲ್ಲಾಧಿಕಾರಿಗಳು ಲಿಖಿತ ಆದೇಶ ಹೊರಡಿಸಬೇಕು. ವಕ್ಫ್‌ ಕಾಯ್ದೆಯನ್ನೇ ರದ್ದುಪಡಿಸಬೇಕು ಹಾಗೂ ಎಲ್ಲ ರಾಜ್ಯಗಳಲ್ಲಿ ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಿ ದೇಶದ ಆಸ್ತಿಯೆಂದು ಸರ್ಕಾರದ ಸುಪರ್ದಿಗೆ ಪಡೆಯುವುದು. 1974ರ ಮತ್ತು ನಂತರದ ವಕ್ಫ್ ಗೆಜೆಟ್ ನೋಟಿಫಿಕೇಶನ್‌ಗಳನ್ನು ಹಿಂಪಡೆಯಬೇಕು. ಇಲ್ಲಿಯವರೆಗೆ ವಕ್ಫ್‌ ಗಳಿಸಿದ ಆದಾಯಗಳನ್ನು ಸರ್ಕಾರಕ್ಕೆ ಸಲ್ಲಿಸುವುದು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದ್ದಾರೆ. ಈ ಧರಣಿಯಲ್ಲಿ ರಾಜ್ಯ ಹಾಗೂ ಕೇಂದ್ರದ ನಾಯಕರುಗಳು ಭಾಗವಹಿಸಲಿದ್ದಾರೆ.

ಕಾರಣ ಪಕ್ಷಾತೀತವಾಗಿ, ರೈತರು, ನಾಗರಿಕರು, ನ್ಯಾಯವಾದಿಗಳು, ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಮಠಾಧೀಶರು, ದೇಶಾಭಿಮಾನಿಗಳು, ವ್ಯಾಪಾರಸ್ಥರು, ಕಾರ್ಯಕರ್ತರು, ಮುಖಂಡರುಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಲು ವಿನಂತಿಸಿದ್ದಾರೆ.