ಸಾರಾಂಶ
ಮಹಮ್ಮದ ರಫೀಕ್ ಬೀಳಗಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿನೈರುತ್ಯ ರೈಲ್ವೆ ವಲಯದ ನಿಲ್ದಾಣಗಳಲ್ಲಿ ಸಿಸಿ ಕ್ಯಾಮೆರಾದಲ್ಲೀಗ ಎಐ ದೃಷ್ಟಿ ನೆಟ್ಟಿದೆ. ಅಪರಾಧ ಚಟುವಟಿಕೆ, ಅಕ್ರಮ ಸಾಗಾಣಿಕೆ ತಡೆ ಮತ್ತು ಪ್ರಯಾಣಿಕರಿಗೆ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಹೊಸ ಯೋಜನೆ ಜಾರಿಗೊಳಿಸಿದೆ.
ಯಾವುದೇ ಅಪರಾಧಿಕ ಚಟುವಟಿಕೆ ಹಿನ್ನೆಲೆಯುಳ್ಳ ವ್ಯಕ್ತಿ ರೈಲ್ವೆ ನಿಲ್ದಾಣ ಪ್ರವೇಶಿಸಿದರೆ ನೇರವಾಗಿ ಆರ್‌ಪಿಎಫ್ ಸಿಬ್ಬಂದಿಗೆ ಮಾಹಿತಿ ರವಾನಿಸುತ್ತದೆ. ಅಲ್ಲದೇ, ಆತನ ಚಲನವಲನಗಳ ಮೇಲೂ ನಿಗಾ ವಹಿಸುತ್ತದೆ. ಎಂಇಐಟಿವೈ (Ministry of Electronics and Information Technology) ಸರ್ವರ್‌ಗೆ ನೇರ ಸಂಪರ್ಕ ಹೊಂದಿರುವುದರಿಂದ ಅಪರಾಧಿಗಳ ಪತ್ತೆ ಕಾರ್ಯ ಇನ್ಮುಂದೆ ರೈಲ್ವೆ ಇಲಾಖೆಗೆ ಸುಲಭವಾಗಲಿದೆ.ನೈಋತ್ಯ ರೈಲ್ವೆ ಮೊದಲ ಬಾರಿಗೆ ಭಾರತೀಯ ರೈಲ್ವೇಸ್‌ನಲ್ಲಿ ಅತ್ಯಾಧುನಿಕ ಕನ್ವರ್ಜ್ಡ್ ಕಮ್ಯುನಿಕೇಷನ್ ಸಿಸ್ಟಮ್ (ಸಿಸಿಎಸ್) ಅನ್ನು ಅಳವಡಿಸುತ್ತಿದೆ. ಧ್ವನಿ, ವಿಡಿಯೋ ಮತ್ತು ಡೇಟಾ ಸೇವೆಗಳನ್ನು ಒಂದೇ ನೆಟ್‌ವರ್ಕ್‌ಗೆ ಸಂಯೋಜಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ₹105 ಕೋಟಿಯಲ್ಲಿ ಕಾರ್ಯಾಚರಣೆ ಸಂವಹನ ಮತ್ತು ಭದ್ರತೆ ಮೂಲಸೌಕರ್ಯವನ್ನು ಸಮಗ್ರವಾಗಿ ಪರಿವರ್ತಿಸಲಾಗುತ್ತಿದೆ.
228 ರೈಲ್ವೆ ನಿಲ್ದಾಣಗಳಲ್ಲಿ ಅಡ್ವಾನ್ಸ್‌ಡ್ ವಿಡಿಯೋ ಸರ್ವೈವಲನ್ಸ್ ಸಿಸ್ಟಮ್ (ವಿಎಸ್‌ಎಸ್) ಅಳವಡಿಸಲಾಗುತ್ತಿದೆ. ಇವುಗಳಲ್ಲಿ 14 ನಿಲ್ದಾಣಗಳನ್ನು ನಿರ್ಭಯಾ ನಿಧಿಯಿಂದ ಹಾಗೂ ಉಳಿದ 214 ನಿಲ್ದಾಣಗಳನ್ನು ಇಲಾಖೆಯ ಅನುದಾನದಿಂದ ಅಭಿವೃದ್ಧಿಪಡಿಸಲಾಗುತ್ತಿದೆ.ವಿಎಸ್‌ಎಸ್ ಜಾಲತಾಣದಡಿ ನಿಲ್ದಾಣಗಳಲ್ಲಿ ಪ್ಯಾನ್-ಟಿಲ್ -ಜೂಮ್ (PTZ) ಸಾಮರ್ಥ್ಯವಿರುವ 2,784 ಹೈ-ಡೆಫಿನಿಷನ್ ಕ್ಯಾಮೆರಾಗಳನ್ನು ಹಾಗೂ 4K ಅಲ್ಟ್ರಾ ಎಚ್‌ಡಿ ಬುಲೆಟ್ ಕ್ಯಾಮೆರಾಗಳನ್ನು ಪ್ರಮುಖ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. ಈ ಕ್ಯಾಮೆರಾಗಳು ಕೃತಕ ಬುದ್ಧಿಮತ್ತೆ (ಎಐ)-ಒಳಗೊಂಡ ಫೇಸ್ ರೆಕಗ್ನಿಷನ್ ಸಿಸ್ಟಮ್ (ಎಫ್‌ಆರ್‌ಎಸ್), ವಿಡಿಯೊ ಅನಾಲಿಟಿಕ್ಸ್ (ವಿಎ), ಹಾಗೂ ಕೇಂದ್ರೀಕೃತ ವೀಡಿಯೊ ಮ್ಯಾನೇಜ್ಮೆಂಟ್ ಸಿಸ್ಟಮ್ (ವಿಎಂಎಸ್)ನೊಂದಿಗೆ ಕಾರ್ಯನಿರ್ವಹಿಸುತ್ತವೆ. ಎಲ್ಲ ಡೇಟಾವನ್ನು ವಿಭಾಗೀಯ ಹಾಗೂ ವಲಯ ಮಟ್ಟದ ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ಗಳ (ಐಸಿಸಿಸಿ) ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ.
ಎ ಮತ್ತು ಬಿ ಕೆಟಗೇರಿ ನಿಲ್ದಾಣಗಳಲ್ಲಿ 4 ಯುಎಟ್ ಡಿ ಕ್ಯಾಮೆರಾ (ಪ್ರವೇಶ ಮತ್ತು ನಿರ್ಗಮನ), 3 ಪಿಟಿಝಡ್ (ಪಾರ್ಕಿಂಗ್ ಮೇಲ್ಸೇತುವೆ ) 27 ಬುಲೆಟ್ ಕ್ಯಾಮೆರಾ, ಟಿಕೆಟ್ ಕೌಂಟರ್, ಫ್ಲಾಟ್ ಫಾರಂಗಳಲ್ಲಿ ಮತ್ತು ಆರು ಡೋಮ್ (Dome) ಕ್ಯಾಮೆರಾಗಳನ್ನು ಬುಕ್ಕಿಂಗ್ ಕೌಂಟರ್, ವೇಟಿಂಗ್ ಹಾಲ್ ಸೇರಿ ಇತರೆಡೆ ಅಳವಡಿಸಲಾಗುತ್ತಿದೆ. ಸಿ ಮತ್ತು ಡಿ ಕೆಟಗರಿ ನಿಲ್ದಾಣಗಳಲ್ಲಿ ಒಂದು ಪಿಟಿಝಡ್, 3 ಡೋಮ್, 6 ಬುಲೆಟ್ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಇವುಗಳ ಮೇಲೆ ನಿಗಾ ಇಡಲು 55 ಇಂಚಿನ ಎರಡು ಎಲ್‌ಇಡಿ ಪರದೆ ವ್ಯವಸ್ಥೆ ಹೊಂದಲಾಗಿದೆ. ಇಲ್ಲಿ ಸಂಗ್ರಹವಾಗುವ ವಿಡಿಯೋ 30 ದಿನಗಳ ಬ್ಯಾಕಪ್ ಇರಲಿದೆ. ಇದನ್ನು ವಿಭಾಗೀಯ ಕಚೇರಿ ಮತ್ತು ಸ್ಥಳೀಯವಾಗಿ ನಿರ್ವಹಣೆ ಮಾಡಲಾಗುತ್ತದೆ.ಈಗಾಗಲೇ ಮೈಸೂರು ವಿಭಾಗದ 31 ನಿಲ್ದಾಣಗಳಲ್ಲಿ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ. ಜತೆಗೆ, ವಿಒಐಪಿ ((VoIP) Voice over Internet Protocol) ಆಧಾರಿತ ಟ್ರೈನ್ ಕಂಟ್ರೋಲ್ ಕಮ್ಯುನಿಕೇಶನ್ ಸಿಸ್ಟಮ್ (ಟಿಸಿಸಿಎಸ್) ಮೈಸೂರು ವಿಭಾಗದ 71 ನಿಲ್ದಾಣಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಮೈಸೂರು, ಪಾಂಡವಪುರ ಮತ್ತು ಮಂಡ್ಯ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ಭದ್ರತಾ ಲೆಕ್ಕಪರಿಶೋಧನೆ ಪೂರ್ಣಗೊಂಡಿದೆ. ‘ಮೈಸೂರು ವಿಭಾಗದಲ್ಲಿ ಸಿಸಿಎಸ್ ನ ಸಂಪೂರ್ಣ ಅನುಷ್ಠಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ನೈಋತ್ಯ ರೈಲ್ವೆ, 2025ರ ಸೆಪ್ಟೆಂಬರ್ ವೇಳೆಗೆ ಈ ವ್ಯವಸ್ಥೆಯನ್ನು ಹುಬ್ಬಳ್ಳಿ ಮತ್ತು ಬೆಂಗಳೂರು ವಿಭಾಗದಲ್ಲಿ ಸಂಪೂರ್ಣವಾಗಿ ಅಳವಡಿಸುವ ಉದ್ದೇಶ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕೋಟ್....
ಹಿಂದಿನ ವ್ಯವಸ್ಥೆಗಿಂತ ಇದು ಅತ್ಯುತ್ತಮ ತಾಂತ್ರಿಕತೆ ಹೊಂದಿದೆ. ಅಪರಾಧಿಕ ಹಿನ್ನೆಲೆಯುಳ್ಳವರ ಪತ್ತೆ, ಪ್ರಯಾಣಿಕರಿಗೆ ಸುರಕ್ಷತೆ ಒದಗಿಸಲು ಮತ್ತು ರೈಲ್ವೆ ಆಗಮನ, ನಿರ್ಗಮನಗಲ್ಲಿ ಒಂದು ವೇಳೆ ತಡ ಅಥವಾ ನಿಗದಿತ ಅವಧಿಗೂ ಮುನ್ನ ರೈಲು ಸಂಚರಿಸುತ್ತಿದ್ದರೆ ಮುಂದಿನ ನಿಲ್ದಾಣಕ್ಕೂ ಈ ಕುರಿತು ಮಾಹಿತಿ ರವಾನೆಯಾಗುತ್ತದೆ. ರೈಲ್ವೆ ಇಲಾಖೆಗೆ ಉತ್ತಮ ವ್ಯವಸ್ಥೆಯಾಗಿ ಪರಿಣಮಿಸಲಿದೆ.- ಡಾ. ಮಂಜುನಾಥ ಕನಮಡಿ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ
----13ಎಚ್‌ಯುಬಿ23
ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಿರುವ ಸಿಸಿಎಸ್ ವ್ಯವಸ್ಥೆಯ ನಿಗಾಕ್ಕೆ ಅಳವಡಿಸಿರುವ ಎಲ್‌ಇಡಿ ಪರದೆಗಳು.