ವಿಚಾರ ಸಂಕಿರಣವು ಹೈಬ್ರೀಡ್ ಮಾದರಿಯಲ್ಲಿ ಇರಲಿದ್ದು ಕವಿವಿ ಸೇರಿ ಐದು ವಿಶ್ವವಿದ್ಯಾಲಯಗಳ ಪರಿಣಿತರು ಭೌತಿಕ ಹಾಗೂ ಆನಲೈನ್‌ ಮೂಲಕ ಭಾಗವಹಿಸಲಿದ್ದಾರೆ. ಇಲ್ಲಿ ಕೃತಕ ಬುದ್ಧಿಮತ್ತೆ ಪರಿಣಾಮಕಾರಿಯಾಗಿ ಬಳಕೆ ಮಾಡಲಾಗುತ್ತದೆ ಎಂದು ಕುಲಪತಿ ತಿಳಿಸಿದರು.

ಧಾರವಾಡ:

ಕರ್ನಾಟಕ ವಿಶ್ವವಿದ್ಯಾಲಯದ ಗಣಕ ವಿಜ್ಞಾನ ಅಧ್ಯಯನ ವಿಭಾಗವು ವಿವಿಯ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಡಿ. 15 ಮತ್ತು 16ರಂದು ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ ಎಂಬ ವಿಷಯದ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಂಡಿದೆ ಎಂದು ಕುಲಪತಿ ‌ಪ್ರೊ. ಎ.ಎಂ. ಖಾನ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಚಾರ ಸಂಕಿರಣಕ್ಕೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಇರುವ ಪರಿಣಿತರಿಂದ ಮತ್ತು ಸಂಶೋಧಕರಿಂದ 300 ಸಂಶೋಧನಾ ಲೇಖನ ಸ್ವೀಕೃತಿಯಾಗಿವೆ‌. ಈ ಪೈಕಿ 47 ಉತ್ತಮ ಸಂಶೋಧನಾ ಲೇಖನ ಪ್ರಸ್ತುತಪಡಿಸಿ ನಂತರ ಪ್ರತಿಷ್ಠಿತ ಸ್ಪ್ರಿಂಜರ್ ಸಂಶೋಧನಾ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗುವುದು ಎಂದರು.

ಹೈಬ್ರೀಡ್ ಮಾದರಿ:

ವಿಚಾರ ಸಂಕಿರಣವು ಹೈಬ್ರೀಡ್ ಮಾದರಿಯಲ್ಲಿ ಇರಲಿದ್ದು ಕವಿವಿ ಸೇರಿ ಐದು ವಿಶ್ವವಿದ್ಯಾಲಯಗಳ ಪರಿಣಿತರು ಭೌತಿಕ ಹಾಗೂ ಆನಲೈನ್‌ ಮೂಲಕ ಭಾಗವಹಿಸಲಿದ್ದಾರೆ. ಇಲ್ಲಿ ಕೃತಕ ಬುದ್ಧಿಮತ್ತೆ ಪರಿಣಾಮಕಾರಿಯಾಗಿ ಬಳಕೆ ಮಾಡಲಾಗುತ್ತದೆ ಎಂದ ಅವರು, ಡಿ. 15ರಂದು ಬೆಳಗ್ಗೆ 9ಕ್ಕೆ ಸಭಾಪತಿ ಯು.ಟಿ. ಖಾದರ ಉದ್ಘಾಟಿಸಲಿದ್ದಾರೆ. ಉನ್ನತ ಶಿಕ್ಷಣ ಮಂಡಳಿ ಚೇರಮನ್ ಪ್ರೊ. ಎಸ್.ಆರ್. ನಿರಂಜನ, ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮಾ, ದಾವಣಗೆರೆ ವಿವಿ ಪ್ರೊ. ಬಿ.ಡಿ. ಕುಂಬಾರ ಭಾಗವಹಿಸಲಿದ್ದಾರೆ. ಧಾರವಾಡ ಐಐಟಿ ನಿರ್ದೇಶಕ ಪ್ರೊ. ಎಸ್.ಆರ್. ಮಹದೇವ ಪ್ರಸಾದ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಎರಡು ದಿನ ಐದು ತಾಂತ್ರಿಕ ಗೋಷ್ಠಿಗಳಿವೆ ಎಂದು ತಿಳಿಸಿದರು.

ಡಿ. 16ರಂದು ಸಂಜೆ 5ಕ್ಕೆ ಬೆಳಗಾವಿ ರಾಣಿಚೆನ್ನಮ್ಮ ವಿವಿ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಸಮಾರೋಪ ಭಾಷಣ ಮಾಡಲಿದ್ದು ಇಂಗ್ಲೆಂಡಿನ ಕ್ಯಾರ್ಡಿಫ್ ವಿವಿ ಡಾಟಾ.ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಅಂಗೇಶ್ ಅನುಪಮ್ ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಗಣಕ ವಿಜ್ಞಾನ ವಿಭಾಗದ ಪ್ರೊ‌. ಈಶ್ವರ ಬೈದಾರಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ‌. ಸಂಜಯಕುಮಾರ ಮಾಲಗತ್ತಿ, ಡಾ. ಪ್ರಭಾಕರ ಕಾಂಬಳೆ ಇದ್ದರು.