ಪ್ರಸುತ್ತ ಜನರಿಗೆ ಕಾಡುತ್ತಿರುವ ‘ಡಿಜಿಟಲ್ ಅರೆಸ್ಟ್’ ಸೇರಿ ಸೈಬರ್ ಅಪರಾಧ ಕೃತ್ಯಗಳಲ್ಲಿ ಹಣ ವರ್ಗಾವಣೆ ನಿಯಂತ್ರಣಕ್ಕೆ ಕೃತಕ ಬುದ್ಧಿಮತ್ತೆ (ಎಐ) ಅಸ್ತ್ರ ಪ್ರಯೋಗಿಸಲು ರಾಜ್ಯ ಪೊಲೀಸ್ ಇಲಾಖೆ ಮುಂದಾಗಿದೆ.
ಗಿರೀಶ್ ಮಾದೇನಹಳ್ಳಿ
ಕನ್ನಡಪ್ರಭ ವಾರ್ತೆ ಬೆಂಗಳೂರುಪ್ರಸುತ್ತ ಜನರಿಗೆ ಕಾಡುತ್ತಿರುವ ‘ಡಿಜಿಟಲ್ ಅರೆಸ್ಟ್’ ಸೇರಿ ಸೈಬರ್ ಅಪರಾಧ ಕೃತ್ಯಗಳಲ್ಲಿ ಹಣ ವರ್ಗಾವಣೆ ನಿಯಂತ್ರಣಕ್ಕೆ ಕೃತಕ ಬುದ್ಧಿಮತ್ತೆ (ಎಐ) ಅಸ್ತ್ರ ಪ್ರಯೋಗಿಸಲು ರಾಜ್ಯ ಪೊಲೀಸ್ ಇಲಾಖೆ ಮುಂದಾಗಿದೆ.
ಸೈಬರ್ ಅಪರಾಧ ಕೃತ್ಯದ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿ (1930)ಯಲ್ಲಿ ದೂರನ್ನು ಕ್ಷಿಪ್ರವಾಗಿ ಸ್ವೀಕರಿಸಲು ಎಐ ಪಾಡ್ ಹಾಗೂ ಹಣ ವರ್ಗಾವಣೆಗೆ ಬಳಕೆಯಾಗುವ ನಕಲಿ ಬ್ಯಾಂಕ್ ಖಾತೆಗಳ (ಮ್ಯೂಲ್ ಅಕೌಂಟ್) ಪತ್ತೆಗೆ ಎಐ ಬಳಸಲು ಎಲ್ ಆ್ಯಂಡ್ ಎಂ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಸ್.ಮುರುಗನ್ ಯೋಜಿಸಿದ್ದಾರೆ.ಒಂದೆಡೆ ಸೈಬರ್ ಅಪರಾಧ ಪ್ರಕರಣಗಳಲ್ಲಿ ಹಣ ಜಪ್ತಿ ಪ್ರಮಾಣ ಗಣನೀಯವಾಗಿ ಪ್ರಗತಿ ಕಂಡಿಲ್ಲ. ಮತ್ತೊಂದೆಡೆ ಸೈಬರ್ ವಂಚನೆ ಕೃತ್ಯಗಳು ಭಾರಿ ಪ್ರಮಾಣದಲ್ಲಿ ಏರುಮುಖವಾಗಿದೆ. ಈ ಬೆಳವಣಿಗೆಯಿಂದ ಮುಂಜಾಗ್ರತೆ ವಹಿಸಿರುವ ಆಧುನೀಕರಣ ವಿಭಾಗದ ಅಧಿಕಾರಿಗಳು, ಈಗ ವಂಚಕರ ಜೇಬಿಗೆ ಜನರ ಹಣ ಹರಿವಿಕೆಗೆ ತಡೆಯಲು ಸಜ್ಜಾಗಿದ್ದಾರೆ.
ಪ್ರತಿ ದಿನ 15 ಸಾವಿರ ಕರೆ ಸ್ವೀಕಾರ ಗುರಿ:ಡಿಜಿಟಲ್ ಅರೆಸ್ಟ್, ಹ್ಯಾಕಿಂಗ್, ಗಿಫ್ಟ್ ಹೆಸರಿನಲ್ಲಿ ದೋಖಾ ಹೀಗೆ ವಿವಿಧ ರೀತಿಯಲ್ಲಿ ಸೈಬರ್ ವಂಚನೆ ಸಂಬಂಧ ಪೊಲೀಸ್ ನಿಯಂತ್ರಣ ಕೊಠಡಿ (1930) ಗೆ ಕರೆ ಮಾಡಿ ಜನ ವರದಿ ಮಾಡಬಹುದು. ಪ್ರತಿದಿನ ಸೈಬರ್ ಅಪರಾಧ ಸಂಬಂಧ 7 ಸಾವಿರ ಕರೆಗಳು ಬರುತ್ತಿವೆ. ಕೆಲ ಬಾರಿ ಕರೆ ಸ್ವೀಕರಿಸಲು ವಿಳಂಬವಾದರೆ ನಿಯಂತ್ರಣ ಕೊಠಡಿಯಿಂದ ವೆಬ್ ಪಾಡ್ ಸಂದೇಶ ರವಾನೆಯಾಗುತ್ತದೆ ಎಂದು ವೈರ್‌ಲೆಸ್ ವಿಭಾಗದ ಎಸ್ಪಿ ರಿಷ್ಯಂತ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಆ ಲಿಂಕ್ ತೆರೆದು ವೆಬ್ ಪಾಡ್ ಆಡಿಯೋ ಸಂದೇಶದಲ್ಲಿ ಸೂಚಿಸಿದಂತೆ ಮಾಹಿತಿಯನ್ನು ಜನ ನೀಡಬೇಕು. ಹಾಗೆ ಜನರಿಂದ ನೇರವಾಗಿ ನಿಯಂತ್ರಣ ಕೊಠಡಿ ಸಿಬ್ಬಂದಿ ಮಾಹಿತಿ ಪಡೆಯುತ್ತಾರೆ. ಈ ಸಂವಹನ ಪ್ರಕ್ರಿಯೆಗೆ 15 ರಿಂದ 20 ನಿಮಿಷವಾಗುತ್ತಿದೆ. ಕೆಲ ಬಾರಿ ಸಮಯ ಹೆಚ್ಚಾಗಬಹುದು. ಇದರಿಂದ ಒಬ್ಬ ಸಿಬ್ಬಂದಿ 5 ಜನರಿಂದ ಮಾತ್ರ ಕರೆ ಸ್ವೀಕರಿಸಲು ಸಾಧ್ಯವಾಗುತ್ತಿದೆ. ಆದರೆ ಎಐ ಪಾಡ್ ಬಳಸಿದರೆ ದೂರು ಸ್ವೀಕಾರ ಪ್ರಕ್ರಿಯೆ ತ್ವರಿಗತಿಯಲ್ಲಿ ನಡೆಯಲಿದೆ. ಸಮಯವೂ ಉಳಿಯುತ್ತದೆ. ಆಗ ಒಬ್ಬ ಸಿಬ್ಬಂದಿ ಮೂರು ಪಟ್ಟು ಅಂದರೆ 15 ಕರೆಗಳನ್ನು ಸ್ವೀಕರಿಸಬಹುದು. ಹೀಗಾಗಿ ಎಐ ಪಾಡ್ ರೂಪಿಸಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದಕ್ಕೆ ಶೀಘ್ರ ಅನುಮೋದನೆ ಸಿಗಲಿದೆ ಎಂದು ಹೇಳಿದರು.ನಕಲಿ ಖಾತೆಗಳ ಅವಲೋಕನ:
ಸೈಬರ್ ವಂಚನೆ ಕೃತ್ಯಗಳಲ್ಲಿ ಹಣ ವರ್ಗಾವಣೆಗೆ ನಕಲಿ ಬ್ಯಾಂಕ್ ಖಾತೆಗಳ ಕಡಿವಾಣ ಪ್ರಮುಖವಾಗಿದೆ. ಬ್ಯಾಂಕ್‌ಗಳಿಗೆ ಅಸಂಖ್ಯಾತ ಖಾತೆಗಳಲ್ಲಿ ಅಸಲಿ-ನಕಲಿ ಪತ್ತೆ ಹಚ್ಚುವುದು ತ್ರಾಸದಾಯಕ. ಇದಕ್ಕಾಗಿ ಎಐ ಬಳಸಿ ನಕಲಿ ಖಾತೆಗಳನ್ನು ಶೋಧಿಸುವಂತೆ ಬ್ಯಾಂಕ್‌ಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ರಿಷ್ಯಂತ್ ಮಾಹಿತಿ ನೀಡಿದರು.ಹಣ ವರ್ಗಾವಣೆಗೆ ರೈತರು ಹಾಗೂ ಬಡ ಜನರಿಗೆ ಸರ್ಕಾರದ ಸೌಲಭ್ಯ ಕಲ್ಪಿಸುವ ಆಮಿಷವೊಡ್ಡಿ ಬ್ಯಾಂಕ್‌ಗಳಲ್ಲಿ ಸೈಬರ್ ವಂಚಕರು ಖಾತೆ ತೆರೆಯುತ್ತಾರೆ. ಆ ಖಾತೆಗಳ ಎಟಿಎಂ ಕಾರ್ಡ್ ಪಡೆಯುತ್ತಾರೆ. ವಂಚನೆ ಕೃತ್ಯ ಎಸಗಿ ದೋಚಿದ ಹಣ ಕೂಡಲೇ ಆ ಖಾತೆಗಳಿಗೆ ವರ್ಗಾಯಿಸಿ ಸೈಬರ್ ವಂಚಕರು ಪಡೆಯುತ್ತಾರೆ. ಇದಕ್ಕಾಗಿ ಈ ಬ್ಯಾಂಕ್ ಖಾತೆಗಳಿಗೆ ಕಡಿವಾಣ ಹಾಕಲು ಮೂರು ಸೂಚನೆ ನೀಡಲಾಗಿದೆ. (1) ಕೇವಲ ಹಣ ಜಮೆ (2), ಹೊರ ಜಿಲ್ಲೆ ಅಥವಾ ಹೊರ ರಾಜ್ಯಗಳಲ್ಲಿ ಆ ಖಾತೆಯಿಂದ ಹಣ ಡ್ರಾ (3) ಆ ಬ್ಯಾಂಕ್ ಪ್ರದೇಶದ ಹೊರಗಿನವರು. ಈ ಎಲ್ಲ ಅಂಶಗಳನ್ನು ಆಧರಿಸಿ ನಕಲಿ ಖಾತೆಗಳ ಪತ್ತೆ ಹಚ್ಚಲಾಗುತ್ತದೆ.
-ಕೋಟ್-ನಷ್ಟ ತಡೆ ಸಾಧ್ಯಸೈಬರ್ ಅಪರಾಧಗಳ ನಿಯಂತ್ರಣಕ್ಕೆ 1930 ಸಹಾಯವಾಣಿಯಲ್ಲಿ ದೂರು ಸ್ವೀಕಾರ ವ್ಯವಸ್ಥೆಯನ್ನು ಮತ್ತಷ್ಟು ಸರಳ ಗೊಳಿಸಲು ಪ್ರಯತ್ನಿಸಿದ್ದೇವೆ. ಇದರಿಂದ ವಂಚನೆ ಕೃತ್ಯಗಳಿಗೆ ಕಡಿವಾಣ ಮಾತ್ರವಲ್ಲ ಜನರಿಗೆ ಆರ್ಥಿಕ ನಷ್ಟ ಕೂಡ ತಪ್ಪಲಿದೆ.
-ಎಸ್.ಮುರುಗನ್, ಎಡಿಜಿಪಿ, ಎಲ್ ಅಂಡ್ ಎಂ ವಿಭಾಗ----
ರಿಕವರಿ ಹೆಚ್ಚಳ ಗುರಿಪ್ರಸುತ್ತ ಸೈಬರ್ ವಂಚನೆ ಪ್ರಕರಣಗಳಲ್ಲಿ ಶೇ.25 ರಷ್ಟು ಮಾತ್ರ ಹಣ ರಿಕವರಿ ಪ್ರಮಾಣವಿದೆ. ಈಗ ಎಐ ಬಳಸಿಕೊಂಡು ರಿಕವರಿ ಪ್ರಮಾಣವನ್ನು ಶೇ.50 ರಷ್ಟು ಹೆಚ್ಚಾಗಿಸುವ ಗುರಿ ಹೊಂದಿದ್ದೇವೆ.
-ಸಿ.ಬಿ.ರಿಷ್ಯಂತ್, ಎಸ್ಪಿ, ವೈರ್‌ಲೆಸ್ ವಿಭಾಗ