ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಉಪ್ಪಿನಂಗಡಿ ನಿವಾಸಿ ಇಸ್ಮಾಯಿಲ್ ತಂಙಳ್ ಸದ್ದಿಲ್ಲದೇ ಸಮಾಜ ಸೇವೆ ಮಾಡುತ್ತಾ ಜನಮನ್ನಣೆ ಗಳಿಸಿದ್ದಾರೆ. ಅವರು ಇತ್ತೀಚೆಗೆ ಉಪ್ಪಿನಂಗಡಿಯ ಸುತ್ತಮುತ್ತ ನೆರೆ ಉಂಟಾದಾಗ ಎಸ್‌ಕೆಎಸ್‌ಎಸ್‌ಎಫ್ ವಿಖಾಯ ತಂಡದ ನೇತೃತ್ವ ವಹಿಸಿ ಅಹೋರಾತ್ರಿ ಶ್ರಮಿಸಿ ಹಲವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರು. ಈಗ ವಯನಾಡಿನ ಭೂ ಕುಸಿತ ಸಂತ್ರಸ್ತರಿಗೆ ೪ ಲಕ್ಷಕ್ಕೂ ಮಿಕ್ಕಿದ ಆಹಾರ ಸಾಮಗ್ರಿಗಳನ್ನು ತಲುಪಿಸುವ ಮೂಲಕ ತನ್ನ ಸೇವಾ ಕೈಂಕರ್ಯವನ್ನು ವ್ರತಾಚರಣೆಯಂತೆ ನಡೆಸಿ ಶ್ಲಾಘನೆ ಪಾತ್ರರಾಗಿದ್ದಾರೆ.ಸಂಘಟನೆಯ ಆಶಯದಂತೆ ದಾನಿಗಳಿಂದ ಕೊಡ ಮಾಡಲ್ಪಟ್ಟ ಆಹಾರ ಧಾನ್ಯಗಳನ್ನು, ವಸ್ತುಗಳನ್ನು ಸಂಗ್ರಹಿಸಿ ಲಾರಿಯಲ್ಲಿ ಕೇರಳದ ಮೇಪಾಡಿ ನಿರಾಶ್ರಿತರ ಶಿಬಿರಕ್ಕೆ ತಲುಪಿಸಿ ಅಲ್ಲಿ ಅದನ್ನು ಅನ್ ಲೋಡ್ ಮಾಡಲು ಕೂಡ ಹೆಗಲು ಕೊಟ್ಟು, ಸಂತ್ರಸ್ತರ ನೋವಿಗೆ ನೆರವಾಗಿದ್ದಾರೆ.ಮಡದಿ ಮಕ್ಕಳನ್ನು ಕಳೆದುಕೊಂಡವರು, ನಾಪತ್ತೆಯಾಗಿ ಇನ್ನೂ ದೇಹ ಸಿಗುವ ನಿರೀಕ್ಷೆಯಲ್ಲಿ ಕಣ್ಣೀರು ಸುರಿಸುತ್ತಿರುವವರು, ಮನೆ ಮಠ ಕಳೆದುಕೊಂಡು ಜೀವ ಉಳಿಸಿಕೊಂಡವರು, ಗಾಯಗೊಂಡವರು ಹೀಗೆ ಎಲ್ಲ ಬಗೆಯ ನೋವು ಕಂಡವರು ಇದ್ದ ಈ ಶಿಬಿರದಲ್ಲಿ ಅವರೊಂದಿಗೆ ಮಾತನಾಡಲು ಮಾತೇ ಬರುತ್ತಿಲ್ಲ. ನೋವನ್ನು ಸಹಿಸುವ ಶಕ್ತಿಯನ್ನು ನೀಡು ಎಂದಷ್ಟೇ ದೇವರಲ್ಲಿ ಪ್ರಾರ್ಥಿಸಿ ಬಂದೆವು. ಭೂ ಕುಸಿತ ಸಂಭವಿಸಿದ ಸ್ಥಳಕ್ಕೆ ಸದ್ಯ ಬೇರೆ ಯಾರಿಗೂ ಪ್ರವೇಶ ನೀಡುತ್ತಿಲ್ಲ. ರಕ್ಷಣಾ ಕಾರ್ಯಾಚರಣೆ ಸರ್ಕಾರದ ಅಧೀನದಲ್ಲಿ ಯೋಜನಾಬದ್ಧವಾಗಿ ನಡೆಯುತ್ತಿದ್ದು, ಹೊರಗಿನಿಂದ ಜನ ಬಂದು ಇನ್ನಷ್ಟು ಸಮಸ್ಯೆ ಗೊಂದಲಗಳು ನಿರ್ಮಾಣವಾಗದಂತೆ ಎಚ್ಚರವಹಿಸಲಾಗಿದೆ. ದೇಶದ ಎಲ್ಲ ಸಂಘಟನೆಗಳೂ ಕೇರಳಕ್ಕೆ ಧಾವಿಸಿ ಬಂದಿದ್ದು, ಸಂತ್ರಸ್ತರ ಸೇವೆಯಲ್ಲಿ ಮಗ್ನವಾಗಿದೆ. ಒಟ್ಟಾರೆ ಅಲ್ಲಿನ ಸಂತ್ರಸ್ತರ ನೋವುಗಳನ್ನು ಆಲಿಸಿದಾಗ ಕಲ್ಲೆದೆಯೂ ಕರಗುವಂತಿದೆ ಎಂದು ತಂಙಳ್ ವಿವರಿಸಿದ್ದಾರೆ.