ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳ ಶೈಕ್ಷಣಿಕ ಶುಲ್ಕ ಹೆಚ್ಚಳ ಖಂಡಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟ ನೇತೃತ್ವದಲ್ಲಿ "ಬಳ್ಳಾರಿ ವಿಶ್ವವಿದ್ಯಾಲಯ ಚಲೋ " ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳ ಶೈಕ್ಷಣಿಕ ಶುಲ್ಕ ಹೆಚ್ಚಳ ಖಂಡಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟ (ಎಐಡಿಎಸ್‌ಒ) ನೇತೃತ್ವದಲ್ಲಿ "ಬಳ್ಳಾರಿ ವಿಶ್ವವಿದ್ಯಾಲಯ ಚಲೋ " ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಮಳೆಯಿಲ್ಲದೆ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಬರಗಾಲ ಎದುರಾಗಿದೆ. ರೈತರು ಜೀವನ ನಡೆಸಲು ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಏತನ್ಮಧ್ಯೆ ವಿಶ್ವವಿದ್ಯಾಲಯ ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕವನ್ನು ಹೆಚ್ಚಿಸುವ ಮೂಲಕ ಶಿಕ್ಷಣ ವಿರೋಧಿ ನೀತಿ ಜಾರಿಗೊಳಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಚಳವಳಿಯ ನೇತೃತ್ವ ವಹಿಸಿದ್ದ ಸಂಘಟನೆಯ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಅವರು ಮಾತನಾಡಿ, ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕೆಳಗೆ ಬರುವ ಪದವಿ ಕಾಲೇಜುಗಳ 2026–27ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳು ಕಳೆದ ವರ್ಷದ ಶುಲ್ಕಕ್ಕಿಂತ ಈ ವರ್ಷ ₹550 ಹೆಚ್ಚಿಗೆ ಪ್ರವೇಶ ಶುಲ್ಕ ಪಾವತಿಸಿದ್ದಾರೆ. ದ್ವಿತೀಯ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳ ಪ್ರವೇಶಾತಿ ಶುಲ್ಕ ಸೇರಿ ಹಿಂದಿನ ವರ್ಷಕ್ಕಿಂತ ಈ ವರ್ಷ ₹1,300 ಹೆಚ್ಚಿಗೆ ಮಾಡಿರುವುದು ವಿದ್ಯಾರ್ಥಿ ವಿರೋಧಿ ನಿಲುವಾಗಿದ್ದು, ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ವಂಚಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದರು. ಅಲ್ಲದೆ, ಕೂಡಲೇ ಹೆಚ್ಚಳ ಮಾಡಿರುವ ಶೈಕ್ಷಣಿಕ ಶುಲ್ಕವನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು. ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಆದ್ದರಿಂದ ವಿವಿಗಳಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತಿವೆ. ಈ ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಈರಣ್ಣ ಆಗ್ರಹಿಸಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ್, ಜಿಲ್ಲಾ ಅಧ್ಯಕ್ಷರಾದ ಕೆ. ಈರಣ್ಣ, ಉಪಾಧ್ಯಕ್ಷೆ ಎಂ.ಶಾಂತಿ, ಜಿಲ್ಲಾ ಕಚೇರಿ ಕಾರ್ಯದರ್ಶಿ ನಿಹಾರಿಕಾ ಹಾಗೂ ವಿದ್ಯಾರ್ಥಿ ಮುಖಂಡರಾದ ಸುಹಾಸ್, ಸಿದ್ದು, ರಾಜಶೇಖರ್, ಸಿದ್ದೇಶ್ ಇತರರಿದ್ದರು. ನಗರದ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಶೈಕ್ಷಣಿಕ ಶುಲ್ಕ ಶೇ. 10ರಷ್ಟು ಹೆಚ್ಚಳ ಮಾಡುವಂತೆ ಸರ್ಕಾರದಿಂದ ಸೂಚನೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಶುಲ್ಕ ಹೆಚ್ಚಳ ಮಾಡಲಾಗಿತ್ತು. ಬರಗಾಲ ಇರುವುದರಿಂದ ಶುಲ್ಕ ಹೆಚ್ಚಳ ಬೇಡ ಎಂದು ವಿದ್ಯಾರ್ಥಿ ಸಂಘಟನೆಯ ಮುಖಂಡರು ಹೋರಾಟದ ಮೂಲಕ ನನ್ನ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಕೂಡಲೇ ಹೆಚ್ಚಳದ ಶುಲ್ಕವನ್ನು ಹಿಂದಕ್ಕೆ ಪಡೆದಿರುವೆ ಎಂದು ಬಳ್ಳಾರಿ ವಿವಿ ಕುಲಪತಿ ಪ್ರೊ. ಎಂ.ಮುನಿರಾಜು ಹೇಳಿದರು.