ಪ್ರತಿ ವರ್ಷವೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದ್ದರೂ, ಲಕ್ಷಾಂತರ ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟ ನಡೆಯುತ್ತಿದ್ದರೂ ಶಿಕ್ಷಣ ಸಚಿವರಿಂದ ಹಿಡಿದು ಎನ್.ಟಿ.ಎ ಯಾರೊಬ್ಬರೂ ಇದರ ಜವಾಬ್ದಾರಿ ಹೊರಲು ಸಿದ್ದರಿಲ್ಲ. ಇದೇ ಸಮಸ್ಯೆಯ ಅಗಾಧತೆಯನ್ನು ಎತ್ತಿ ತೋರಿಸುತ್ತಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ನೀಟ್ ಪರೀಕ್ಷೆಯಲ್ಲಿ ಅವಾಂತರಗಳನ್ನು ಖಂಡಿಸಿ ಎಐಡಿಎಸ್ಒ ಜಿಲ್ಲಾ ಸಮಿತಿಯವರು ಹಾಗೂ ವಿದ್ಯಾರ್ಥಿಗಳು ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಶುಕ್ರವಾರ ಪ್ರತಿಭಟಿಸಿದರು.ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದುಗೊಳಿಸಿದ್ದು, ಈ ಕುರಿತು ಕೂಡಲೇ ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾಗಿರುವವರಿಗೆ ನಿದರ್ಶನೀಯ ಶಿಕ್ಷೆ ವಿಧಿಸಿ ಹಾಗೂ ಎನ್ ಟಿಎಯನ್ನು ರದ್ದುಗೊಳಿಸಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಈ ವೇಳೆ ಎಐಡಿಎಸ್ಒ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಮಾತನಾಡಿ, ನೀಟ್ ಒಂದು ಆಕಸ್ಮಿಕ ಅವಘಡವಲ್ಲ. ಇದು ಎನ್ ಟಿಎ ಆಡಳಿತದಲ್ಲಿ ಜರುಗುತ್ತಿರುವ ವೈಫಲ್ಯಗಳ ಕಿರೀಟಕ್ಕೆ ಮತ್ತೊಂದು ಗರಿ. ಈ ಹಿಂದೆ ನೆಟ್ ಪರೀಕ್ಷೆಯನ್ನು 2024 ರಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಪರೀಕ್ಷೆ ನಡೆದ ನಂತರ ಪರೀಕ್ಷೆಯನ್ನು ರದ್ದುಗೊಳಿಸಲಾಯಿತು. 2022, 2024ರಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಬಯಲಿಗೆ ಬಂದಿತ್ತು. 2024 ರಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಬಿಹಾರದ ಕೆಲವರನ್ನು ಬಂಧಿಸಿದರೂ ಸೋರಿಕೆ ಮೂಲವನ್ನು ಹಿಡಿಯಲು ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾದುದಕ್ಕೆ ಈ ವರ್ಷದ ಸೋರಿಕೆಯೇ ಪುರಾವೆ ಎಂದು ಆರೋಪಿಸಿದರು.ಪ್ರತಿ ವರ್ಷವೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದ್ದರೂ, ಲಕ್ಷಾಂತರ ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟ ನಡೆಯುತ್ತಿದ್ದರೂ ಶಿಕ್ಷಣ ಸಚಿವರಿಂದ ಹಿಡಿದು ಎನ್.ಟಿ.ಎ ಯಾರೊಬ್ಬರೂ ಇದರ ಜವಾಬ್ದಾರಿ ಹೊರಲು ಸಿದ್ದರಿಲ್ಲ. ಇದೇ ಸಮಸ್ಯೆಯ ಅಗಾಧತೆಯನ್ನು ಎತ್ತಿ ತೋರಿಸುತ್ತಿದೆ ಎಂದು ಕಿಡಿಕಾರಿದರು.
ಇಂದು ನೀಟ್ ಕೋಚಿಂಗ್ ಇಂಡಸ್ಟ್ರಿಯ ವಾರ್ಷಿಕ ಆದಾಯ 1 ಲಕ್ಷ ಕೋಟಿಗೂ ಮೇಲ್ಪಟ್ಟಿದೆ. ಪ್ರತಿ ವರ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗಾಗಿ ಕುಟುಂಬಗಳು ಸುಮಾರು 1.32 ಲಕ್ಷ ಕೋಟಿಗಳನ್ನು ಖರ್ಚು ಮಾಡುತ್ತವೆ. ಈ ವೆಚ್ಚವು ಕೇಂದ್ರ ಸರ್ಕಾರದ ಸಂಪೂರ್ಣ ಶಿಕ್ಷಣ ಬಜೆಟ್‌ಗೆ 1.4 ಲಕ್ಷ ಕೋಟಿ ಬಹುತೇಕ ಸಮನಾಗಿದೆ. ಇಂದು ಒಬ್ಬ ವಿದ್ಯಾರ್ಥಿ ಸರಿಸುಮಾರು 6.8 ಲಕ್ಷ ಖರ್ಚು ಮಾಡಿ ಕೋಚಿಂಗ್ ಪಡೆಯದೆ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಬಹುತೇಕ ಅಸಾಧ್ಯ. ಕೋಚಿಂಗ್ ಮಾಫಿಯಾದ ಕಬಂಧ ಬಾಹುಗಳಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ನಲುಗುತ್ತಿದೆ ಎಂದು ದೂರಿದರು.ಈ ರೀತಿಯ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಅತಿಯಾದ ಒತ್ತಡ ಅನುಭವಿಸುತ್ತಿರುತ್ತಾರೆ. ಕಳೆದ 10 ವರ್ಷಗಳಲ್ಲಿ 1.3 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಇದೇ ಅವಧಿಯಲ್ಲಿ 1.5 ಲಕ್ಷ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರ ಆತ್ಮಹತ್ಯೆಗಿಂತಲೂ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಾಗಿದೆ. ಈ ವರ್ಷ ನೀಟ್ ಪರೀಕ್ಷೆ ರದ್ದಾದ ಮೇಲೆ ಕಳೆದ 48 ಗಂಟೆಗಳಲ್ಲಿ 6 ವಿದ್ಯಾರ್ಥಿಗಳ ಆತ್ಮಹತ್ಯೆ ಒಳಗೊಂಡಂತೆ ದೇಶಾದ್ಯಂತ 15 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿದಿನ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗುತ್ತಿದೆ . ಇದು ವಿದ್ಯಾರ್ಥಿಗಳ ಆತ್ಮಹತ್ಯೆ ಅಲ್ಲ, ವ್ಯವಸ್ಥೆ ಮಾಡಿರುವ ಕಗ್ಗೊಲೆ. ಇದು ವ್ಯವಸ್ಥೆಯ ವೈಫಲ್ಯವಲ್ಲ, ವ್ಯವಸ್ಥಿತವಾದ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಡಿಎಸ್ಒ ಜಿಲ್ಲಾಧ್ಯಕ್ಷೆ ಚಂದ್ರಕಲಾ ಮಾತನಾಡಿ, ಎನ್ ಟಿಎ ಏಜೆನ್ಸಿ ಕೋಚಿಂಗ್ ಮಾಫಿಯಾದ ಕೈಗೊಂಬೆಯಾಗುತ್ತದೆ, ಮೆರಿಟ್ ವಿದ್ಯಾರ್ಥಿಗಳಿಗೆ ಮೋಸವಾಗುತ್ತಿದೆ. ಇಂದು ಶಿಕ್ಷಣ ಮಾರಾಟದ ವಸ್ತುವಾಗಿದೆ. ಬಂಡವಾಳ ಹೂಡಿ ಲಾಭ ಮಾಡುವಂತಹ ಲಾಭದಾಯಕ ಕ್ಷೇತ್ರವಾಗಿ ಮಾರ್ಪಾಡಾಗಿದೆ. ಒಂದು ರಾಷ್ಟ್ರ ಒಂದು ಪರೀಕ್ಷೆಯ ಮುಖವಾಡದ ಹಿಂದೆ ವೈದ್ಯಕೀಯ ಶಿಕ್ಷಣವನ್ನು ಜಾಗತಿಕ ಸರಕಾಗಿ ಮಾಡಿ ಲಕ್ಷಾಂತರ ಬಡ ಮತ್ತು ಗ್ರಾಮೀಣ ಮಕ್ಕಳ ವೈದ್ಯರಾಗುವ ಸಾಧ್ಯತೆಯನ್ನು ಕಿತ್ತುಕೊಂಡಿದೆ. ಶಿಕ್ಷಣದ ವ್ಯಾಪಾರಿಕರಣ, ಕಾರ್ಪೊರೇಟೀಕರಣದ ವಿರುದ್ಧ ಸಮರ ಸಾರಬೇಕಾದ ಅವಶ್ಯಕತೆ ಇದೆ ಎಂದು ಒತ್ತಾಯಿಸಿದರು.ಎಐಡಿಎಸ್ಒ ಜಿಲ್ಲಾ ಉಪಾಧ್ಯಕ್ಷೆ ಸ್ವಾತಿ, ಜಿಲ್ಲಾ ಕಾರ್ಯದರ್ಶಿ ನಿತಿನ್, ಪದಾಧಿಕಾರಿಗಳಾದ ಚಂದನಾ, ಚಂದ್ರಿಕಾ, ಹೇಮಾ, ದಿಶಾ, ಅಂಜಲಿ, ನಂದೀಶ್, ದೀಕ್ಷಿತಾ ಹಾಗೂ ವಿದ್ಯಾರ್ಥಿಗಳು ಇದ್ದರು.