ಸುಂಟಿಕೊಪ್ಪ: ಐಗೂರು ಗ್ರಾಮ ವ್ಯಾಪ್ತಿಗೆ ಸೇರಿದ ಕಬ್ಬಿಣ ಸೇತುವೆ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗುತ್ತಿದೆ. ಬದಲಿ ರಸ್ತೆ ವಾಹನ ಅನುವು ಮಾಡಿಕೊಟ್ಟಿರುವುದರಿಂದ ಈ ರಸ್ತೆಯು ಸಂಪೂರ್ಣ ಹದಗೆಟ್ಟು ಹೊಂಡ ಗುಂಡಿಗಳಿಂದ ಕೂಡಿದ್ದು ವಾಹನಗಳ ಸಂಚಾರಕ್ಕೆ ತೊಡಕು ಉಂಟಾಗಿದೆ.ರಾಜ್ಯ ಸರ್ಕಾರ 2025 ನ. 11 ರಂದು ಶಿಲಾವಸ್ಥೆಯಲ್ಲಿದ್ದ ಬ್ರಿಟೀಷರ ಕಾಲದ ಕಬ್ಬಿಣ ಸೇತುವೆಗೆ ಕಾಯಕಲ್ಪ ಒದಗಿಸುವ ನಿಟ್ಟಿನಲ್ಲಿ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಶಾಸಕರಾದ ಡಾ.ಮಂತರ್‌ಗೌಡ ಭೂಮಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ಈ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ ರು.10 ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದರು. ಅದರೊಂದಿಗೆ 10 ಕೋಟಿ ವೆಚ್ಚದಲ್ಲಿ ಐಗೂರು ಕಾಜೂರು 4. ಕಿ.ಮೀ. ಬದಲಿ ರಸ್ತೆಯನ್ನು ನಿರ್ಮಿಸುವ ಬಗ್ಗೆ ತೀರ್ಮಾನಿಸಲಾಗಿತ್ತು. ಆದರೆ ಗುತ್ತಿಗೆದಾರರು ಬದಲಿ ರಸ್ತೆಯನ್ನು ಬೇಸಿಗೆ ಕಾಲದಲ್ಲಿ ಅಗಲೀಕರಣಗೊಳಿಸಿ ಗುಂಡಿಗಳಿಗೆ ತೇಪೆಹಚ್ಚಿ ಬಿಡಲಾಗಿದೆ. ಗ್ರಾಮಸ್ಥರು ಈ ಬಗ್ಗೆ ಆಡಳಿತಾಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿಯನ್ನು ನೀಡಲಾಗಿದ್ದರೂ ಕಾಮಗಾರಿಯನ್ನು ನಿರ್ವಹಿಸದೆ ಸೇತುವೆ ಕಾಮಗಾರಿಯನ್ನು ನಿರ್ವಹಿಸಲು ಆರಂಭಿಸಿದ್ದರಿಂದ ಈ ಭಾಗದ ನಿವಾಸಿ ಹೊಂಡ ಗುಂಡಿ ಬಿದ್ದ ರಸ್ತೆಯಲ್ಲಿ ಸಂಚರಿಸುವಂತಾಗಿದೆ.ಐಗೂರಿನಿಂದ ಕಾಜೂರು ಮೂಲಕ ತೆರಳಬೇಕಾದರೆ ಸಣ್ಣ ಸೇತುವೆಯ ಮಧ್ಯಭಾಗದಲ್ಲಿ ಕುಸಿತಗೊಂಡಿದ್ದು, ಮುಂದಿನ ದಿನಗಳಲ್ಲಿ ಸೇತುವೆಯು ಕುಸಿಯುವ ಭೀತಿ ಈ ಭಾಗದ ನಿವಾಸಿ ಸಂಪರ್ಕ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ರಾತ್ರಿಯ ವೇಳೆ ಭಾರೀ ವಾಹನಗಳಾದ ಟಿಂಬರ್ ಲಾರಿ, ಟ್ಯಾಂಕರ್ ಸೇರಿದಂತೆ ಇನ್ನಿತರ ಗೂಡ್ಸ್ ವಾಹನಗಳು ಭಾರೀ ತೂಕವನ್ನು ಹೊತ್ತು ಸಾಗುತ್ತಿರುವುದರಿಂದ ನಾಲೆ ಸೇತುವೆ ಕುಸಿದು ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದು ಗ್ರಾಮಸ್ಥರು ಅತಂಕ ವ್ಯಕ್ತಪಡಿಸಿದ್ದಾರೆ.
ಶಾಲೆ ಮಕ್ಕಳು ಪಾದಚಾರಿಗಳು ದ್ವಿಚಕ್ರಸವಾರರು, ಆಟೋ ರಿಕ್ಷಾ, ಶಾಲಾ ವಾಹನಗಳು ಈ ಭಾಗದಿಂದ ಸಂಚರಿಸುತ್ತಿದೆ. ಹೊಂಡ ಗುಂಡಿ ರಸ್ತೆಯಿಂದಾಗಿ ಸಾಕಷ್ಟು ಅನಾಹುತಗಳು ಈ ಭಾಗದಲ್ಲಿ ಸಂಭವಿಸಿದೆ.