ಸಾರಾಂಶ
ಅಗ್ನಿಪಥ ಯೋಜನೆಯಡಿ ಸೇನೆಗೆ ನೇಮಕಗೊಂಡರೆ ನಾಲ್ಕು ವರ್ಷಗಳ ಕಾಲ ಮಾತ್ರ ಸೇವೆಗೆ ಅವಕಾಶ ಸಿಗಲಿದೆ.
ಬಳ್ಳಾರಿ: ಅಗ್ನಿಪಥ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಎಫ್) ಸಂಡೂರು ತಾಲೂಕು ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಬುಧವಾರ ಮನವಿ ಸಲ್ಲಿಸಿದರು.
ಅಗ್ನಿಪಥ ಯೋಜನೆಯಡಿ ಸೇನೆಗೆ ನೇಮಕಗೊಂಡರೆ ನಾಲ್ಕು ವರ್ಷಗಳ ಕಾಲ ಮಾತ್ರ ಸೇವೆಗೆ ಅವಕಾಶ ಸಿಗಲಿದೆ. ಇದರಿಂದ ಯುವಕರಿಗೆ ಉದ್ಯೋಗ ಭದ್ರತೆ ಇಲ್ಲದಂತಾಗುತ್ತದೆ. ಇದರಿಂದ ದೇಶ ಭದ್ರತಾ ಕೆಲಸಕ್ಕೆ ನಿಯೋಜನೆಗೊಳ್ಳುವ ಅಗ್ನಿಪಥದ ಸೈನಿಕರ ಕುಟುಂಬಗಳು ಅತಂತ್ರವಾಗುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರದ ಅವೈಜ್ಞಾನಿಕ ನಿರ್ಧಾರದಿಂದಾಗಿ ಕಾಯಂ ಸೈನಿಕರ ನೇಮಕಾತಿಗೆ ತೊಡಕಾಗಲಿದೆ. ಸೈನಿಕರ ನೇಮಕದ ಸಂಖ್ಯೆಯೂ ಭಾರೀ ಪ್ರಮಾಣದ ಕಡಿತವಾಗಲಿದೆ. ಇದರಿಂದ ದೇಶದ ರಕ್ಷಣೆಗೂ ಅಪಾಯವಾಗುವ ಸಾಧ್ಯತೆಯಿದೆ ಎಂದರು.ಅಗ್ನಿಪಥದಲ್ಲಿ ಪಿಂಚಣಿ ಸೌಲಭ್ಯವಿಲ್ಲ. ನಾಲ್ಕು ವರ್ಷ ಸೇವೆಯ ಬಳಿಕ ನಿರುದ್ಯೋಗಿಗಳಾಬೇಕಾಗುತ್ತದೆ. ಕೇಂದ್ರ ಸರ್ಕಾರ ಕೂಡಲೇ ಅಗ್ನಿಪಥ ಯೋಜನೆ ಕೈ ಬಿಡಬೇಕು. ಕಾಯಂ ನೇಮಕಾತಿ ಪ್ರಕ್ರಿಯೆಗೆ ಮುಂದಾಗಬೇಕು. ಸೇನೆಯಲ್ಲಿ 15 ವರ್ಷಗಳ ಕಾಲ ಸೇವೆ ಮಾಡುವ ಅವಕಾಶ ಇರಬೇಕು. ಈ ನಿಟ್ಟಿನಲ್ಲಿಯೇ ನೇಮಕಾತಿಗಳಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನೇತೃತ್ವ ವಹಿಸಿದ್ದ ಎಐವೈಎಫ್‌ನ ಜಿಲ್ಲಾಧ್ಯಕ್ಷ ಸಿ.ಕಟ್ಟೆಬಸಪ್ಪ, ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆಯನ್ನು ಕೈಬಿಟ್ಟು ಸೇನೆಗೆ ಕಾಯಂ ನೇಮಕಾತಿ ಮಾಡಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ಸಂಡೂರು ತಾಲೂಕು ಹಾಗೂ ಬಳ್ಳಾರಿ ಜಿಲ್ಲಾ ಸಮಿತಿ ಸದಸ್ಯರು ಭಾಗವಹಿಸಿದ್ದರು.