ಎಐಐಯು ಪುರುಷರ ಖೋಖೋ: ಮಂಗಳೂರು ವಿವಿ ಚಾಂಪಿಯನ್

| Published : Apr 13 2025, 02:02 AM IST

ಸಾರಾಂಶ

ಪೂರ್ಣಪ್ರಜ್ಞ ಕಾಲೇಜಿನಲ್ಲಿ ಶನಿವಾರ ಸಂಪನ್ನಗೊಂಡ 4 ದಿನಗಳ ಈ ಪಂದ್ಯಾವಳಿಯ, ರೋಚಕ ಅಂತಿಮ ಪಂದ್ಯಾವಳಿಯಲ್ಲಿ ಆತಿಥೇಯ ಮಂಗಳೂರು ವಿವಿ ತಂಡವು ಮುಂಬೈ ತಂಡವನ್ನು ಕೇವಲ 1 ಅಂಕದ ಅಂತರದಿಂದ ಸೋಲಿಸಿ ಚಾಂಪಿಯನ್‌ ಪಟ್ಟ ತನ್ನದಾಗಿಸಿಕೊಂಡಿತು.

ಫೈನಲ್‌ನಲ್ಲಿ ಮುಂಬೈ ವಿವಿ ವಿರುದ್ಧ 1 ಅಂಕದ ರೋಚಕ ಜಯ

ಕನ್ನಡಪ್ರಭ ವಾರ್ತೆ ಉಡುಪಿ

2024 -25ನೇ ಸಾಲಿನ ಅಖಿಲ ಭಾರತ ಅಂತರ್‌ ವಿವಿ ಪುರುಷರ ಖೋಖೋ ಚಾಂಪಿಯನ್‌ ಪಟ್ಟವನ್ನು ಮಂಗಳೂರು ವಿವಿ ಗೆದ್ದುಕೊಂಡಿದೆ.ಇಲ್ಲಿನ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಶನಿವಾರ ಸಂಪನ್ನಗೊಂಡ 4 ದಿನಗಳ ಈ ಪಂದ್ಯಾವಳಿಯ, ರೋಚಕ ಅಂತಿಮ ಪಂದ್ಯಾವಳಿಯಲ್ಲಿ ಆತಿಥೇಯ ಮಂಗಳೂರು ವಿವಿ ತಂಡವು ಮುಂಬೈ ತಂಡವನ್ನು ಕೇವಲ 1 ಅಂಕದ ಅಂತರದಿಂದ ಸೋಲಿಸಿ ಚಾಂಪಿಯನ್‌ ಪಟ್ಟ ತನ್ನದಾಗಿಸಿಕೊಂಡಿತು.ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ದಾಳಿಗಿಳಿದ ಮುಂಬೈ ತಂಡ ನಿಗದಿತ ಸಮಯದಲ್ಲಿ ಮಂಗಳೂರು ವಿವಿಯ 5 ಆಟಗಾರರುನ್ನು ಔಟ್ ಮಾಡಿ ಶುಭಾರಂಭ ಮಾಡಿತು.

ನಂತರ ದಾಳಿಗಿಳಿದ ಮಂಗಳೂರು ವಿವಿ ಆಟಗಾರರು ಮುಂಬೈ ತಂಡದ 7 ಆಟಗಾರರನ್ನು ಔಟ್ ಮಾಡಿ 7-5ರ ಮುನ್ನಡೆ ಸಾಧಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತೆ ದಾಳಿಗಿಳಿದ ಮುಂಬೈ ತಂಡ ಮತ್ತೆ 5 ಅಂಕಗಳನ್ನು ಗಳಿಸಿ 10 - 7ರ ಮುನ್ನಡೆ ಸಾಧಿಸಿತು.

ಇದಕ್ಕುತ್ತರವಾಗಿ ದಾಳಿಗಿಳಿದ ಮಂಗಳೂರು ತಂಡ ಮತ್ತೆ 4 ಅಂಕಗಳನ್ನು ಗಳಿಸಿ, ಅಂತಿಮವಾಗಿ 11-10ರಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.ಕಳೆದ ವರ್ಷ ಮಂಗಳೂರು ವಿವಿ ಮತ್ತು ಮುಂಬೈ ವಿವಿಗಳು ಜಂಟಿಯಾಗಿ 3ನೇ ಸ್ಥಾನವನ್ನು ಹಂಚಿಕೊಂಡಿದ್ದವು.

ವಿಶೇಷ ಎಂದರೆ ಮಹಾರಾಷ್ಟ್ರದ ಸಾಂಬಾಜಿನಗರದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವಿವಿ ಮತ್ತು ಅದೇ ರಾಜ್ಯದ ನಾಂದೇಡ್‌ನ ಸ್ವಾಮೀ ರಮಾನಂದ ತೀರ್ಥ ವಿವಿಗಳು 3ನೇ ಸ್ಥಾನವನ್ನು ಹಂಚಿಕೊಂಡವು.ಮುಂಬೈ ವಿವಿ ತಂಡದ ಆಕಾಶ್‌ ಕದಮ್ ಅವರು ಆಲ್‌ರೌಂಡರ್‌, ಮಂಗಳೂರು ವಿವಿಯ ನಿಖಿಲ್ ಬಿ. ಅವರು ಬೆಸ್ಟ್ ಡಿಫೆಂಡರ್ ಮತ್ತು ದೀಕ್ಷಿತ್ ಅವರು ಬೆಸ್ಟ್‌ ಚೇಸರ್‌ ಪ್ರಶಸ್ತಿಗಳನ್ನು ಗೆದ್ದುಕೊಂಡರು.